ADVERTISEMENT

ಧರ್ಮ, ರಾಜಕೀಯ ಬೆರೆತರೆ ಸಂಸ್ಕೃತಿ ಕಲುಷಿತ: ವೀರಸೋಮೇಶ್ವರ ಸ್ವಾಮೀಜಿ

ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 14:57 IST
Last Updated 18 ಮಾರ್ಚ್ 2021, 14:57 IST
ಚಿತ್ರದುರ್ಗ ತಾಲ್ಲೂಕಿನ ಕಲ್ಲೇನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಮಹಾಶಿವರಾತ್ರಿ ಜಾತ್ರೆ ಹಾಗೂ ನೂತನ ಬ್ರಹ್ಮರಥೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಚಾಲನೆ ನೀಡಿದರು
ಚಿತ್ರದುರ್ಗ ತಾಲ್ಲೂಕಿನ ಕಲ್ಲೇನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಮಹಾಶಿವರಾತ್ರಿ ಜಾತ್ರೆ ಹಾಗೂ ನೂತನ ಬ್ರಹ್ಮರಥೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಚಾಲನೆ ನೀಡಿದರು   

ಚಿತ್ರದುರ್ಗ: ‘ಪ್ರಸ್ತುತ ದಿನಗಳಲ್ಲಿ ಧರ್ಮ, ರಾಜಕೀಯ ಬೆರೆತು ನಡೆಯುತ್ತಿದೆ. ಇದರಿಂದಾಗಿ ಸಂಸ್ಕೃತಿ ಕಲುಷಿತಗೊಳ್ಳುತ್ತಿದೆ. ವಿಚಿತ್ರ ಭಾವನೆಗಳನ್ನು ಜನರು ಮೈಗೂಡಿಸಿಕೊಳ್ಳುತ್ತಿದ್ದಾರೆ’ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಲ್ಲೇನಹಳ್ಳಿ ಗ್ರಾಮದಲ್ಲಿ ಮರುಳಸಿದ್ಧೇಶ್ವರ ಮಠದ ವತಿಯಿಂದ ಗುರುವಾರ ನಡೆದ ಮಹಾಶಿವರಾತ್ರಿ ಜಾತ್ರೆ ಹಾಗೂ ನೂತನ ಬ್ರಹ್ಮರಥೋತ್ಸವದ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಅನಾದಿ ಕಾಲದಿಂದಲೂ ಧರ್ಮದಲ್ಲಿ ರಾಜಕೀಯ ಬೇರೆಯಬಾರದು ಎಂಬುದಾಗಿ ಹಲವು ಮಹನೀಯರು ಹೇಳಿದ್ದಾರೆ. ಆದರೆ, ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು ಎಂಬಂತೆ ಪ್ರಸ್ತುತ ದಿನಗಳಲ್ಲಿ ಬಿಂಬಿತವಾಗುತ್ತಿವೆ. ಇದು ಸರಿಯಾದ ಕ್ರಮವಲ್ಲ’ ಎಂದರು.

ADVERTISEMENT

‘ಸಂಸ್ಕೃತಿ, ಸಂಪ್ರದಾಯ, ಕಲೆ, ಸಾಹಿತ್ಯ ಒಗ್ಗೂಡಿಸುವ ಕೆಲಸ ಮಾಡಬೇಕಿದೆ. ಧರ್ಮದಲ್ಲಿ ಶಾಂತಿ, ಸಮಾಧಾನ ಎಷ್ಟು ಮುಖ್ಯವೋ ವಿಜ್ಞಾನದಲ್ಲಿ ಆವಿಷ್ಕಾರ, ಅಭಿವೃದ್ಧಿಯ ಚಿಂತನೆ ಅತ್ಯಂತ ಮುಖ್ಯವಾದುದು. ಇದರಿಂದ ಮಾತ್ರ ಜನರ ಕಲ್ಯಾಣ, ಸುಖ ಜೀವನ ನಡೆಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಶ್ರೀಮಠದಿಂದ ಇಲ್ಲಿ ಗೋಶಾಲೆ ನಿರ್ಮಿಸಬೇಕೆಂಬ ಚಿಂತನೆ ಇದೆ. ಮಠಗಳು ಜನರನ್ನು ಸನ್ಮಾರ್ಗದಲ್ಲಿ ನಡೆಸುವುದಷ್ಟೇ ಅಲ್ಲ. ಜಾನುವಾರುಗಳ ಸಂರಕ್ಷಣೆ ಮಠಗಳ ಪ್ರಮುಖ ಕಾಯಕವಾಗಬೇಕಿದೆ’ ಎಂದು ಸಲಹೆ ನೀಡಿದರು.

ಮಕ್ಕಳ ತಜ್ಞ ಡಾ.ದೇವರಾಜು, ‘ಇಲ್ಲಿನ ಶ್ರೀಮಠವು ಯಾವುದೇ ರೀತಿಯ ಜಾತಿ–ಭೇದವಿಲ್ಲದೆ ಸರ್ವರನ್ನು ಸಮಾನತೆಯಿಂದ ಕಾಣುತ್ತಿದೆ. ಸ್ವಾರ್ಥ ಇಲ್ಲದೆಯೇ ಜನರ ಕಲ್ಯಾಣಕ್ಕಾಗಿ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳುತ್ತಿದೆ’ ಎಂದು ಹೇಳಿದರು.

ಕಲ್ಲೇನಹಳ್ಳಿಯ ಮರುಳಸಿದ್ಧೇಶ್ವರ ಗದ್ದುಗೆ ಮಠದ ಪೀಠಾಧ್ಯಕ್ಷ ತಿಪ್ಪೇಸ್ವಾಮಿ ನೇತೃತ್ವ ವಹಿಸಿದ್ದರು.ವಕೀಲ ಸಿ.ಎಂ. ವೀರಣ್ಣ, ಗೋನೂರು ಗ್ರಾಮ ಪಂಚಾಯಿತಿ ಸದಸ್ಯರಾದ ರಘು, ಜಯಲಕ್ಷ್ಮಿ, ಶಿಕ್ಷಣ ಇಲಾಖೆಯ ಉಪ ಯೋಜನಾಧಿಕಾರಿ ನಾಗಭೂಷಣ್, ಮುಖಂಡ ಕೆ.ಸಿ. ರುದ್ರೇಶ್, ವೇದಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.