ADVERTISEMENT

ರಂಜಾನ್‌ ಮಾಸ: ಆಯಾಸ ಹೆಚ್ಚಿಸಿದ ಬಿಸಿಲು

ಹೊಸದುರ್ಗ: ಮುಸ್ಲಿಂ ಸಮಾಜದವರಿಂದ ಆಚರಣೆ

ಎಸ್.ಸುರೇಶ್ ನೀರಗುಂದ
Published 13 ಮೇ 2019, 19:46 IST
Last Updated 13 ಮೇ 2019, 19:46 IST
ಹೊಸದುರ್ಗದ ಜಾಮಿಯಾ ಮಸೀದಿ ಬಳಿ ಭಾನುವಾರ ಬಿಸಿಲಿನ ಧಗೆಯಿಂದ ವಿಶ್ರಾಂತಿ ತೆಗೆದು ಪಡೆಯುತ್ತಿರುವ ಮುಸ್ಲಿಮರು
ಹೊಸದುರ್ಗದ ಜಾಮಿಯಾ ಮಸೀದಿ ಬಳಿ ಭಾನುವಾರ ಬಿಸಿಲಿನ ಧಗೆಯಿಂದ ವಿಶ್ರಾಂತಿ ತೆಗೆದು ಪಡೆಯುತ್ತಿರುವ ಮುಸ್ಲಿಮರು   

ಹೊಸದುರ್ಗ: ರಂಜಾನ್‌ ತಿಂಗಳಲ್ಲಿ ನಡೆಸುವ ಉಪವಾಸ ವ್ರತ (ರೋಜಾ) ಆಚರಣೆಗೆ ಈ ಬಾರಿ ಬಿರು ಬಿಸಿಲು ಮುಸ್ಲಿಂ ಜನರ ಆಯಾಸ ಹೆಚ್ಚಿಸಿದೆ.

ಕಾಲ, ಕಾಲಕ್ಕೆ ಸಮೃದ್ಧವಾಗಿ ಮಳೆ ಆಗುತ್ತಿದ್ದಾಗ ರಂಜಾನ್‌ನಲ್ಲಿ ಉಪವಾಸ ಇದ್ದರೂ ಆಯಾಸ ಹಾಗೂ ನೀರಡಿಕೆ ಹೆಚ್ಚಾಗುತ್ತಿರಲಿಲ್ಲ. ಆದರೆ ಈ ಬಾರಿ ಬಿರು ಬಿಸಿಲು ಹೆಚ್ಚಾಗಿದೆ. ಮಧ್ಯಾಹ್ನ 12 ಗಂಟೆಯಾದರೆ ಮನೆ ಹಾಗೂ ಮಸೀದಿಯಿಂದ ಹೊರೆಗೆ ಬರಲು ಆಗುತ್ತಿಲ್ಲ.

ಬಿಸಿಲು ಹೆಚ್ಚಿರುವುದರಿಂದ ಹೆಚ್ಚು ಕೆಲಸ ಮಾಡಲು ಆಗುತ್ತಿಲ್ಲ. ಉಪವಾಸ ಇರುವಾಗ ಕಡುಬಿಸಿಲಿನಲ್ಲಿ ಹೆಚ್ಚು ಕೆಲಸ ಮಾಡಿದರೆ ಆಯಾಸವಾಗುತ್ತದೆ. ಹಾಗಾಗಿ ಶೇ 50ರಷ್ಟು ಕೆಲಸ ಕುಂಠಿತವಾಗಿದೆ. ಬಿಸಿಲು ಧಗೆಗೆ ಎಷ್ಟೇ ನೀರಡಿಕೆಯಾದರೂ ಸ್ವಲ್ಪವೂ ನೀರು ಕುಡಿಯದೇ, ಹಸಿವು ಲೆಕ್ಕಿಸದೇ ಶ್ರದ್ಧಾಭಕ್ತಿಯಿಂದ ಒಂದು ತಿಂಗಳು ಉಪವಾಸ ವ್ರತ ಆಚರಿಸಲಾಗುತ್ತಿದೆ.

ADVERTISEMENT

‘ಪ್ರತಿದಿನ ಬೆಳಗಿನ ಜಾವ 4.45 ರಿಂದ ಆರಂಭವಾಗುವ ಉಪವಾಸ ವ್ರತ ಸಂಜೆ 6.55ಕ್ಕೆ ಮುಕ್ತಾಯವಾಗುತ್ತದೆ. ಈ ರೀತಿ ಒಂದು ತಿಂಗಳವರೆಗೂ ಒಂದೊತ್ತು ಆಚರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 5.30ಕ್ಕೆ, ಮಧ್ಯಾಹ್ನ 1.30ಕ್ಕೆ, ಸಂಜೆ 5.15ಕ್ಕೆ, ಸಂಜೆ 6.55ಕ್ಕೆ ಹಾಗೂ ರಾತ್ರಿ 8.30ಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ’ ಎನ್ನುತ್ತಾರೆ ಅಲೀಂ ಸಾಬ್‌, ಮಹಮ್ಮದ್‌ ನಜೀರ್‌, ಇಮಾಮ್‌ ಸಾಬ್‌.

‘ನಾವು ಮಾಡಿದ ಪಾಪ–ಕರ್ಮದ ಫಲ ಕಳೆದುಕೊಂಡು ಪವಿತ್ರರಾಗುವ ಅವಕಾಶವನ್ನು ದೇವರು ನೀಡಿದ್ದಾನೆ. ರಂಜಾನ್‌ ಮಾಸಾಚರಣೆ ಮಾಡುವಾಗ ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಮೂಡುವುದಿಲ್ಲ. ಪಾಪಕೃತ್ಯದಲ್ಲಿ ಭಾಗಿಯಾಗುವುದಿಲ್ಲ. ಪರಸ್ಪರ ಸಹಕಾರ, ಸಂಯಮ, ತಾಳ್ಮೆ, ಶಿಸ್ತು, ಸಹೋದರತೆ ಮೌಲ್ಯ ಮೈಗೂಡಿಸಿಕೊಳ್ಳಲಾಗುತ್ತದೆ. ಮನುಷ್ಯರಲ್ಲಿರುವ ದ್ವೇಷ ನಿವಾರಿಸಿ, ಹಸಿವು, ಬಡತನ, ಕಾಯಕದ ಮಹತ್ವ ಅರಿತುಕೊಳ್ಳುವಂತೆ ಆಗುತ್ತದೆ. ಆತ್ಮಶುದ್ಧೀಕರಣಕ್ಕೆ ನೆರವಾಗುತ್ತದೆ. ರೋಗನಿವಾರಕ ಶಕ್ತಿ ಹೆಚ್ಚಾಗುತ್ತದೆ. ಆ ಮೂಲಕ ಸಮಾನತೆಯ ತತ್ವ ಸಾರುವುದು ರಂಜಾನ್‌ ಮಾಸದ ವಿಶೇಷ’ ಎನ್ನುತ್ತಾರೆ ಅಪ್ಸರ್‌.

ರಂಜಾನ್‌ ತಿಂಗಳಲ್ಲಿ ಜಕಾತ್‌ ಮತ್ತು ಫಿತರ್‌ ಎನ್ನುವ ಎರಡು ವಿಶಿಷ್ಟ ದಾನ(ಜಕಾತ್‌) ಪದ್ಧತಿಗಳಿವೆ. ಜಕಾತ್‌ ಎಂದರೆ ಒಂದು ವರ್ಷದಲ್ಲಿ ಒಬ್ಬ ವ್ಯಕ್ತಿ ತಾನು ಗಳಿಸಿದ ಸಂಪತ್ತಿನಲ್ಲಿ ಶೇ 2.5ರಷ್ಟು ಹಣವನ್ನು ಮಸೀದಿಗೆ ಸಲ್ಲಿಸಬೇಕು. ಇದು ಕಡ್ಡಾಯವಾಗದಿದ್ದರೂ ಸ್ವಯಂ ಪ್ರೇರಿತರಾಗಿ ಸಲ್ಲಿಸುತ್ತಾರೆ. ಈ ಹಣವನ್ನು ಸಮಾಜದ ಅಭಿವೃದ್ಧಿ ಹಾಗೂ ಬಡವರ ಕಷ್ಟಗಳಿಗೆ ಬಳಸಲಾಗುತ್ತಿದೆ.

‘ಫಿತ್ರ್‌ ಎಂದರೆ ರಂಜಾನ್‌ ಸಂದರ್ಭ ಕಡುಬಡವರು, ನಿರಾಶ್ರಿತರು, ನಿರ್ಗತಿಕರು, ಅಂಗವಿಕಲರಿಗೆ ಸಮುದಾಯದ ಪ್ರತಿಯೊಬ್ಬರೂ ಅವರವರ ಶಕ್ತ್ಯಾನುಸಾರ ದಾನ ನೀಡುವರು. ಶ್ರೀಮಂತರು ಬಡವರಿಗೆ ತಮ್ಮ ಸಂಪತ್ತಿನ ಸ್ವಲ್ಪ ಭಾಗವನ್ನು ದಾನ ಮಾಡುವ ಪದ್ಧತಿ ಇದಾಗಿದೆ. ಈ ಆಚರಣೆ ಮುಸ್ಲಿಂ ಸಮಾಜದಲ್ಲಿ ಕ್ರಮಬದ್ಧವಾಗಿ ನಡೆದುಕೊಂಡು ಬರುತ್ತಿದೆ’ ಎನ್ನುತ್ತಾರೆ ಅಸ್ಲಂಪಾಷಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.