ADVERTISEMENT

ಮೊಳಕಾಲ್ಮುರು: ಮುಳ್ಳಿನ ಪೊದೆಯಲ್ಲಿ ಬಚ್ಚಿಟ್ಟಿದ್ದ ಪಡಿತರ ಅಕ್ಕಿ ವಶ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 6:38 IST
Last Updated 26 ಅಕ್ಟೋಬರ್ 2025, 6:38 IST
ಮೊಳಕಾಲ್ಮುರು ತಾಲ್ಲೂಕಿನ ಶಿರೇಕೊಳ ಬಳಿ ಶುಕ್ರವಾರ ತಡರಾತ್ರಿ ವಶಪಡಿಸಿಕೊಂಡಿರುವ ಪಡಿತರ ಅಕ್ಕಿ 
ಮೊಳಕಾಲ್ಮುರು ತಾಲ್ಲೂಕಿನ ಶಿರೇಕೊಳ ಬಳಿ ಶುಕ್ರವಾರ ತಡರಾತ್ರಿ ವಶಪಡಿಸಿಕೊಂಡಿರುವ ಪಡಿತರ ಅಕ್ಕಿ    

ಮೊಳಕಾಲ್ಮುರು: ತಾಲ್ಲೂಕಿನ ದೇವಸಮುದ್ರ ಹೋಬಳಿಯ ಶಿರೇಕೊಳ ಗ್ರಾಮದ ಬಳಿಯ ನಿರ್ಜನ ಪ್ರದೇಶದಲ್ಲಿ ಮುಳ್ಳಿನ ಪೊದೆಗಳಲ್ಲಿ ಅಡಗಿಸಿ ಇಟ್ಟಿದ್ದ ನೂರಾರು ಚೀಲ ಪಡಿತರ ಅಕ್ಕಿಯನ್ನು ಶುಕ್ರವಾರ ತಡರಾತ್ರಿ ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಉಪ ವಿಭಾಗಾಧಿಕಾರಿ ಮಹಮದ್‌ ಜಿಲಾನಿ ಖುರೇಷಿ ಹಾಗೂ ರಾಂಪುರ ಪೊಲೀಸ್‌ ಠಾಣೆ ಪಿಎಸ್‌ಐ ಬಾಬುಬಲಿ ನೇತೃತ್ವದಲ್ಲಿ ಮಧ್ಯರಾತ್ರಿ 1 ಗಂಟೆ ವೇಳೆಗೆ ದಾಳಿ ನಡೆಸಿದಾಗ ಪೊದೆಗಳಲ್ಲಿ ಅಕ್ಕಿ ಬಚ್ಚಿಟ್ಟಿರುವುದು ಕಂಡುಬಂದಿದೆ.

‘ಅಂದಾಜು 45– 50 ಕೆ.ಜಿ ತೂಕದ 523 ಮೂಟೆಯಷ್ಟು ಅಕ್ಕಿ ವಶಕ್ಕೆ ಪಡೆಯಲಾಗಿದೆ. ಬಚ್ಚಿಟ್ಟಿದ್ದ ಸ್ಥಳಕ್ಕೆ ಹೋಗುವ ದಾರಿಯನ್ನು ಮುಳ್ಳಿನ ಗಿಡಗಳಿಂದ ಮುಚ್ಚಲಾಗಿತ್ತು. ವಾಹನಗಳು ಸ್ಥಳಕ್ಕೆ ಹೋಗುವುದೂ ಕಷ್ಟಸಾಧ್ಯವಾಗಿತ್ತು. ಅಲ್ಲಿ ಇಷ್ಟೊಂದು ಪ್ರಮಾಣದ ಅಕ್ಕಿ ಸಿಕ್ಕಿರುವುದು ಅಚ್ಚರಿ ಮೂಡಿಸಿದೆ. ಅನುಮಾನ ಬಾರದಂತೆ ತಾಡಪಾಲು ಮುಚ್ಚಿ ಇಡಲಾಗಿತ್ತು. ಅಕ್ಕಿ ಯಾರಿಗೆ ಸೇರಿದ್ದು ಎಂಬ ಮಾಹಿತಿ ಲಭಿಸಿಲ್ಲ. ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

ರಾಂಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿದ ಪ್ರಕರಣ: ತಾಲ್ಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಪಡಿತರ ಅಕ್ಕಿ ವಶ ಪ್ರಕರಣಗಳು ಹೆಚ್ಚಳವಾಗಿವೆ. ಇಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ 150 ‘ಎ’ರಲ್ಲಿ ವಾಹನಗಳ ತಪಾಸಣೆ ನಡೆಸಿದಾಗಲೂ ಅಕ್ರಮ ಅಕ್ಕಿ ಸಾಗಣೆ ಪ್ರಕರಣಗಳು ಕಾಣಸಿಗುತ್ತಿವೆ. ಹಿರಿಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.