ADVERTISEMENT

ಬೆಳೆವಿಮೆ ಮಾನದಂಡ ಬದಲಿಸಲು ಕೋರಿಕೆ: ಉಸ್ತುವಾರಿ ಸಚಿವ ಶ್ರೀರಾಮುಲು ಪತ್ರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 6:18 IST
Last Updated 22 ಜೂನ್ 2021, 6:18 IST
ಬಿ. ಶ್ರೀರಾಮುಲು
ಬಿ. ಶ್ರೀರಾಮುಲು   

ಚಿತ್ರದುರ್ಗ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ನಿಗದಿಪಡಿಸಿದ ಮಾನದಂಡಗಳು ವಾಸ್ತವಕ್ಕೆ ದೂರವಾಗಿದ್ದು, ರೈತಸ್ನೇಹಿಯಾಗಿ ಪರಿಷ್ಕರಿಸಬೇಕು ಎಂದು ಕೋರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಪತ್ರ ಬರೆದಿದ್ದಾರೆ.

‘ಚಿತ್ರದುರ್ಗ ಜಿಲ್ಲೆ ದಶಕದಲ್ಲಿ ಎಂಟು ವರ್ಷಬರ ಪರಿಸ್ಥಿತಿ ಎದುರಿಸಿದೆ. ಹಲವು ಬಾರಿ ಬರಪೀಡಿತ ಎಂದು ಘೋಷಣೆಯಾಗಿದೆ. ಮಳೆಯಾಶ್ರಿತ ಬೆಳೆಗಳನ್ನು ರೈತರು ಅವಲಂಬಿಸಿದ್ದಾರೆ. ಮಳೆ ಕೈಕೊಟ್ಟು ಬೆಳೆ ಸಿಗದಿದ್ದಾಗ ರೈತರು ಕಂಗಾಲಾಗಿದ್ದಾರೆ. ಇಂತಹ ವೇಳೆ ವಿಮೆ ರೈತರ ನೆರವಿಗೆ ಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘2020–21ನೇ ಸಾಲಿನಲ್ಲಿ 85 ಸಾವಿರ ರೈತರು ವಿಮೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಈವರೆಗೆ ಈ ರೈತರಿಗೆ ವಿಮೆ ಪರಿಹಾರ ಸಿಕ್ಕಿಲ್ಲ. 188 ಗ್ರಾಮ ಪಂಚಾಯಿತಿಯಲ್ಲಿ ಕೇವಲ 36 ಪಂಚಾಯಿತಿಗಳು ಮಾತ್ರ ವಿಮೆ ಪರಿಹಾರಕ್ಕೆ ಆಯ್ಕೆಯಾಗಿವೆ. ಇದಕ್ಕೆ ವಿಮಾ ಕಂಪನಿಗಳು ವಿಧಿಸುತ್ತಿರುವ ನಿಯಮಗಳೇ ಕಾರಣ’ ಎಂದು ಹೇಳಿದ್ದಾರೆ.

ADVERTISEMENT

‘ಏಳು ವರ್ಷದ ಸರಾಸರಿ ಇಳುವರಿ ಪರಿಗಣಿಸುವ ಬದಲು ಆಯಾ ವರ್ಷದ ಇಳುವರಿ ಆಧಾರದ ಮೇರೆಗೆ ವಿಮೆ ಪರಿಹಾರ ನೀಡಬೇಕು. ಪ್ರತಿ ಹೋಬಳಿ ಮಟ್ಟದಲ್ಲಿ ವಿಮಾ ಕಂಪನಿಗಳು ಕಚೇರಿ ತೆರೆಯಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬದಲು ಹೋಬಳಿ ವ್ಯಾಪ್ತಿಯನ್ನು ಪರಿಗಣಿಸಿ ಪರಿಹಾರ ಒದಗಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.