ADVERTISEMENT

296 ಜನವಸತಿಗೆ ಕಂದಾಯ ಗ್ರಾಮ ಭಾಗ್ಯ ಶೀಘ್ರ: ಡಿ.ಸುಧಾಕರ್‌

ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ; ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಸಂದೇಶ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 6:06 IST
Last Updated 16 ಆಗಸ್ಟ್ 2025, 6:06 IST
ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅವರು ಧ್ವಜವಂದನೆ ಸ್ವೀಕರಿಸಿದರು
ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅವರು ಧ್ವಜವಂದನೆ ಸ್ವೀಕರಿಸಿದರು   

ಚಿತ್ರದುರ್ಗ: ‘ಜಿಲ್ಲೆಯ ವಿವಿಧೆಡೆ ಹಲವು ವರ್ಷಗಳಿಂದಿರುವ ಜನವಸತಿ ಪ್ರದೇಶಗಳನ್ನು ಶೀಘ್ರ ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗುವುದು. ಈ ನಿಟ್ಟಿನಲ್ಲಿ 296 ಗ್ರಾಮಗಳನ್ನು ಗುರುತಿಸಲಾಗಿದ್ದು ಆದ್ಯತೆಯ ಮೇರೆಗೆ 7,976 ಹಕ್ಕು ಪತ್ರ ವಿತರಣೆ ಮಾಡಲಾಗವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಹೇಳಿದರು.

ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ 79ನೇ ಸ್ವಾತಂತ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಕವಾಯತು ತಂಡಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಸಂದೇಶ ನೀಡಿದರು.

‘ಕಂದಾಯ ಗ್ರಾಮಗಳ ಘೋಷಣೆ ಸಂಬಂಧ ಈಗಾಗಲೇ 5,174 ಫಲಾನುಭವಿಗಳನ್ನು ಗುರುತಿಸಲಾಗಿದೆ. ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸುವುದು ನಮ್ಮ ಉದ್ದೇಶವಾಗಿದೆ. ಕಂದಾಯ ಗ್ರಾಮ ಘೋಷಣೆ ಮಾಡಿ ಅಲ್ಲಿಗೆ ಬೇಕಾದ ಎಲ್ಲಾ ಮೂಲ ಸೌಲಭ್ಯ ಒದಗಿಸಲಾಗುವುದು’ ಎಂದರು.

ADVERTISEMENT

‘ಮಹತ್ವಕಾಂಕ್ಷಿ ಭದ್ರಾ ಮೇಲ್ದಂಡೆ ಯೋಜನೆಯು ಸಾಕಾರಗೊಳ್ಳುವ ದಿನಗಳು ಸಮೀಪಿಸುತ್ತಿವೆ. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿಗಣಿಸುವಂತೆ ಈಗಾಗಲೇ ಶಿಫಾರಸು ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಹೊಳಲ್ಕೆರೆ ತಾಲ್ಲೂಕುಗಳ ಒಟ್ಟು 73,946 ಹೆಕ್ಟೇರ್ ಪ್ರದೇಶಕ್ಕೆ ಹನಿನೀರಾವರಿ ಮೂಲಕ ನೀರೊದಗಿಸುವ ಉದ್ದೇಶ ಹೊಂದಲಾಗಿದೆ’ ಎಂದರು.

‘ಮುಂದಿನ ದಿನಗಳಲ್ಲಿ ಬರದನಾಡು ಚಿತ್ರದುರ್ಗವನ್ನು ಕೃಷಿಯ ನಾಡಾಗಿ ಬದಲಾಗಿಸಲು ನಮ್ಮ ಸರ್ಕಾರ ಕಂಕಣಬದ್ಧವಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿ ಅದರಲ್ಲೂ ಗ್ರಾಮೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ವಿದ್ಯಾಭ್ಯಾಸಕ್ಕೆ ಆದ್ಯತೆಯನ್ನು ನೀಡುತ್ತಿದೆ. ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ಮಾಸಾಶನ, ಮಾತೃಪೂರ್ಣ ಯೋಜನೆ, ಪೋಷಣ್‌ ಅಭಿಯಾನ, ಮಾತೃವಂದನಾ ಯೋಜನೆ, ಸ್ವಾಧಾರ ಯೋಜನೆ, ಸಾಂತ್ವನ ಯೋಜನೆಗಳ ಮುಖಾಂತರ ಎಲ್ಲ ವರ್ಗದವರ ಏಳಿಗೆಗಾಗಿ ನಮ್ಮ ಸರ್ಕಾರವು ನಿರಂತರವಾಗಿ ಶ್ರಮಿಸುತ್ತಿದೆ’ ಎಂದರು.

‘ದೇಶದ ಇತಿಹಾಸದಲ್ಲಿಯೇ ಮೊದಲು ಬಾರಿಗೆ ರಾಜ್ಯದಲ್ಲಿ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ನಿರ್ಗತಿಕರು, ಬಡವರು, ಕೆಳವರ್ಗದವರು, ಸಮಾಜದ ಅಂಚಿನಲ್ಲಿರುವವರು ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಹಾಯಕವಾಗಿವೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿಯೋಜನೆ, ಗೃಹಜ್ಯೋತಿ, ಯುವನಿಧಿ ಯೋಜನೆಗಳು ರಾಜ್ಯದಾದ್ಯಂತ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ’ ಎಂದರು.

‘ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಅಂತ್ಯೋದಯ ಮತ್ತು ಬಿಪಿಎಲ್‌ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯರಿಗೆ ₹ 170ರಂತೆ ಜುಲೈ 2023ರಿಂದ ಡಿಸೆಂಬರ್ 2024ರವರೆಗೆ ಒಟ್ಟು ₹ 370 ಕೋಟಿ ಹಣವನ್ನು ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 3,78,367 ಫಲಾನುಭವಿಗಳಿದ್ದು, ಈವರೆಗೆ ಒಟ್ಟು ₹ 343.87 ಕೋಟಿ ವ್ಯಯ ಮಾಡಲಾಗಿದೆ’ ಎಂದರು.

‘ಮಹಿಳೆಯರ ಆರ್ಥಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ಮೇ 2025ರ ಅಂತ್ಯದವರೆಗೆ ಒಟ್ಟು 3,87,490 ಫಲಾನುಭವಿಗಳಿಗೆ ₹ 1,398 ಕೋಟಿ ರೂಪಾಯಿಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಾವತಿಸಲಾಗಿದೆ. ಈ ಗೃಹಲಕ್ಷ್ಮಿ ಯೋಜನೆಯನ್ನು ಲಿಂಗತ್ವ ಅಲ್ಪಸಂಖ್ಯಾತರಿಗೂ ವಿಸ್ತರಿಸಿದ ಫಲವಾಗಿ ಜಿಲ್ಲೆಯಲ್ಲಿ 28 ಜನ ಲಿಂಗತ್ವ ಅಲ್ಪಸಂಖ್ಯಾತರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ’ ಎಂದರು.

‘ಯುವನಿಧಿ ಯೋಜನೆಯಡಿಯಲ್ಲಿ ಜನವರಿ 2024ರಿಂದ ಮೇ 2025ರವರೆಗೆ ಒಟ್ಟು ₹ 15 ಕೋಟಿ ಯುವ-ನಿರುದ್ಯೋಗಿಗಳ ಖಾತೆಗೆ ನೇರಪಾವತಿ ಮಾಡಲಾಗಿದೆ. ಶಕ್ತಿ ಯೋಜನೆಯಡಿ ಜಿಲ್ಲಾ ವಿಭಾಗದ ಸರ್ಕಾರಿ ಬಸ್‍ಗಳಲ್ಲಿ ₹ 5 ಕೋಟಿಗೂ ಅಧಿಕ ಮಹಿಳೆಯರು ಪ್ರಯಾಣಿಸಿದ್ದಾರೆ. ಯೋಜನೆಗೆ ಜಿಲ್ಲೆಯಲ್ಲಿ ಒಟ್ಟು ₹ 208 ಕೋಟಿ ರೂಪಾಯಿ ಖರ್ಚುಮಾಡಲಾಗಿದೆ’ ಎಂದರು.

ಸಂಸದ ಗೋವಿಂದ ಎಂ.ಕಾರಜೋಳ, ಶಾಸಕ ಕೆ.ಸಿ. ವೀರೇಂದ್ರ , ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್' ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ನಗರಸಭೆ ಅಧ್ಯಕ್ಷೆ ಬಿ.ಎನ್. ಸುಮಿತಾ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ. ಸಿಇಒ ಆಕಾಶ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.