ADVERTISEMENT

ಶಕ್ತಿ ಯೋಜನೆ: ₹ 177.33 ಕೋಟಿ ಆದಾಯ

​ಪ್ರಜಾವಾಣಿ ವಾರ್ತೆ
Published 15 ಮೇ 2025, 15:28 IST
Last Updated 15 ಮೇ 2025, 15:28 IST
ಶಕ್ತಿ ಯೋಜನೆ ಟಿಕೆಟ್ (ಸಾಂದರ್ಭಿಕ ಚಿತ್ರ)
ಶಕ್ತಿ ಯೋಜನೆ ಟಿಕೆಟ್ (ಸಾಂದರ್ಭಿಕ ಚಿತ್ರ)   

ಚಿತ್ರದುರ್ಗ: ‘ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಾಗಿ ಜೂನ್ 11ಕ್ಕೆ ಎರಡು ವರ್ಷ ಪೂರ್ಣಗೊಳ್ಳುತ್ತಿದೆ. ಈ ಯೋಜನೆಯಡಿ ಜಿಲ್ಲೆಯ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ 4.36 ಕೋಟಿ ಮಹಿಳೆಯರು ಉಚಿತ ಪ್ರಯಾಣ ಬೆಳೆಸಿದ್ದಾರೆ. ಯೋಜನೆಯಡಿ ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗಕ್ಕೆ 177.33 ಕೋಟಿ ಆದಾಯ ಬಂದಿದೆ’ ಎಂದು ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್‌ ತಿಳಿಸಿದ್ದಾರೆ.

‘ಪ್ರತಿ ನಿತ್ಯ ಸರಾಸರಿ 62,837 ಮಹಿಳೆಯರು ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ನಿತ್ಯ ಉಪ ವಿಭಾಗಕ್ಕೆ ₹ 25,55,287 ಆದಾಯ ಬರುತ್ತಿದೆ. 2023ರ ಜೂನ್ ತಿಂಗಳಿಂದ 2025ರ ಮೇ 4ರವರೆಗೆ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆ ಬಸ್‌ಗಳಲ್ಲಿ ಒಟ್ಟು 4,36,09138 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಶಕ್ತಿ ಯೋಜನೆ ಜಾರಿಯಾದ ನಂತರ ಹಣ ಪಾವತಿಸುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಶಕ್ತಿ ಯೋಜನೆಯು ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುವುದರ ಜೊತೆಗೆ ಉದ್ಯೋಗಗಳ ಸೃಷ್ಟಿಯಾಗಿದೆ. ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಸಾಮಾಜಿಕ ಕ್ಷೇತ್ರದಲ್ಲಿ ಹಲವು ರೀತಿಯ ಬದಲಾವಣೆಗೆ ಸಾಕ್ಷಿಯಾಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದಿಂದ ನಗರ ಪಟ್ಟಣಗಳಿಗೆ ತೆರಳಿ ದುಡಿಯುವ ಮಹಿಳೆಯರಿಗೆ ವರದಾನವಾಗಿದೆ. ಖಾಸಗಿ ಹಾಗೂ ಅಸಂಘಟಿತ ವಲಯಗಳಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ಸಂಚಾರ ವೆಚ್ಚದಿಂದ ಮುಕ್ತರಾಗಿದ್ದಾರೆ. ಮಹಿಳೆಯರು ಸಾಮಾನ್ಯವಾಗಿ ದುಡಿಯಲೆಂದೇ ತಮ್ಮ ತಿಂಗಳ ಆದಾಯದ ಶೇ 10ರಷ್ಟು ಹಣವವನ್ನು ಸಂಚಾರಕ್ಕಾಗಿ ವ್ಯಯಿಸಬೇಕಿತ್ತು. ಇನ್ನು ಶಾಲಾ-ಕಾಲೇಜು ವಿದ್ಯಾರ್ಥಿನಿಯರು ವಾರ್ಷಿಕ ಪಾಸ್ ಪಡೆಯಲು ನೀಡಬೇಕಿದ್ದ ಹಣದಲ್ಲಿಯೂ ಉಳಿತಾಯವಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.