ADVERTISEMENT

ಅಪಘಾತದ ತೀವ್ರತೆ ನಿಮಗೆ ಅರ್ಥ ಆಗುತ್ತಿಲ್ಲ: ಅಧಿಕಾರಿಗಳ ವರ್ತನೆಗೆ ಡಿಸಿ ಬೇಸರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 6:12 IST
Last Updated 4 ಡಿಸೆಂಬರ್ 2025, 6:12 IST
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು   

ಚಿತ್ರದುರ್ಗ: ‘ಅಪಘಾತಗಳ ಸಂಖ್ಯೆಯಲ್ಲಿ ಚಿತ್ರದುರ್ಗ ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ವಿಚಾರವನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಿದ್ದರೂ ನೀವು ಮಾತ್ರ ತೀವ್ರತೆ ಅರ್ಥ ಮಾಡಿಕೊಳ್ಳುತ್ತಿಲ್ಲ’ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಪ್ರಮುಖ ರಾಜ್ಯ ಹೆದ್ದಾರಿಗಳು ಹಾದುಹೋಗಿವೆ. ಪದೇ ಪದೇ ಅಪಘಾತ ಸಂಭವಿಸುವ ಸ್ಥಳಗಳನ್ನು ಬ್ಲಾಕ್‌ ಸ್ಪಾಟ್ ಎಂಬುದಾಗಿ ಗುರುತಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿದ್ದರೂ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ’ ಎಂದು ಕಿಡಿಕಾರಿದರು.

ADVERTISEMENT

‘ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ನಿಯಂತ್ರಣಕ್ಕೆ ಮುಖ್ಯಮಂತ್ರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಕುರಿತು ಸಭೆಗಳಲ್ಲಿ ಸಲಹೆ, ಸೂಚನೆ ನೀಡಿದರೂ ಪಾಲನೆ ಮಾಡುತ್ತಿಲ್ಲ. ಮತ್ತೆ ಸಭೆ ಸೇರಿದಾಗಲೇ ಈ ಬಗ್ಗೆ ಮಾತನಾಡುತ್ತೀರಿ. ಸಭೆಯಲ್ಲಿ ನಾವೇನು ಭಜನೆ ಮಾಡಲು ಸೇರುತ್ತೇವೆಯೇ’ ಎಂದು ತೀವ್ರ ಬೇಸರ ಹೊರಹಾಕಿದರು.

‘ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಅನಧಿಕೃತ ಗೂಡಂಗಡಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು. ವಿರೋಧ ಕಂಡುಬಂದಲ್ಲಿ, ಪೊಲೀಸ್ ಬಂದೋಬಸ್ತ್ ಪಡೆದು ಕೂಡಲೇ ಕ್ರಮ ವಹಿಸಬೇಕು’ ಎಂದು ಇದೇ ವೇಳೆ ತಾಕೀತು ಮಾಡಿದರು.

‘ಜಿಲ್ಲೆಯಲ್ಲಿ 25,000ಕ್ಕೂ ಹೆಚ್ಚು ಟ್ರ್ಯಾಕ್ಟರ್‌ ಟ್ರ್ಯಾಲಿಗಳಿವೆ. ಇದರಲ್ಲಿ ಎಷ್ಟು ಟ್ರ್ಯಾಲಿಗಳಿಗೆ ರಿಫ್ಲೆಕ್ಟರ್‌ ಸ್ಟಿಕರ್ ಅಳವಡಿಸಿದ್ದೀರಿ’ ಎಂದು ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಅವರು ಮೋಟಾರು ವಾಹನ ನಿರೀಕ್ಷಕರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅವರು, ‘ಆರ್‌ಟಿಒ ಕಚೇರಿಗೆ ವಿವಿಧ ಕೆಲಸದ ನಿಮಿತ್ತ ಬಂದಂತಹ 450 ಟ್ರ್ಯಾಕ್ಟರ್‌ಗಳಿಗೆ ಸ್ಟಿಕರ್ ಅಳವಡಿಸಿದ್ದೇವೆ’ ಎಂದರು.

‘ಕತ್ತಲಲ್ಲಿ ಟ್ರ್ಯಾಕ್ಟರ್‌ ಟ್ರ್ಯಾಲಿಗಳು ರಸ್ತೆಗಳಲ್ಲಿ ಹೋಗುತ್ತಿದ್ದರೂ ವಾಹನ ಸವಾರರಿಗೆ ಗೋಚರಿಸುವುದಿಲ್ಲ, ಇತ್ತೀಚೆಗಷ್ಟೇ ಕಾರು–ಟ್ರ್ಯಾಕ್ಟರ್‌ ಅಪಘಾತವಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜರುಗಿದೆ. ವಿಶೇಷ ಅಭಿಯಾನ ಮಾಡಿ, ಟ್ರ್ಯಾಲಿಗಳಿಗೆ ರಿಫ್ಲೆಕ್ಟರ್‌ ಸ್ಟಿಕರ್ ಅಳವಡಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕ್ರಮ ವಹಿಸಿಲ್ಲ’ ಎಂದು ಎಸ್‌ಪಿ ಅಸಮಾಧಾನ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ನಾಗರಾಜ್, ಡಿವೈಎಸ್‌ಪಿಗಳಾದ ದಿನಕರ್‌, ಶಿವಕುಮಾರ್‌, ಸತ್ಯನಾರಾಯಣ ರಾವ್‌, ನಗರಸಭೆ ಪೌರಾಯುಕ್ತೆ ಲಕ್ಷ್ಮಿ ಇದ್ದರು.

‘ನಗರ ಟ್ರಾಫಿಕ್ ಸಮಸ್ಯೆಗೆ ಕ್ರಮ ವಹಿಸಿ’

ಅಪಘಾತ ಸಂಭವಿಸಬಹುದಾದ ತೆರೆದ ಚರಂಡಿ ರಾಜಕಾಲುವೆ ರಸ್ತೆಬದಿಯ ಕೊಳವೆಬಾವಿ ಇರುವ ನಗರದ ವಿವಿಧ ಸ್ಥಳಗಳ ಫೋಟೊ ಸಹಿತ ವಿವರಗಳನ್ನು ಸಂಚಾರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್ ವಿಶ್ವನಾಥ್‌ ಅವರು ಸಭೆಗೆ ನೀಡಿದರು. ಅಪಘಾತ ಸಂಭವಿಸಬಹುದಾದ ಸ್ಥಳಗಳಲ್ಲಿ ಕೈಗೊಳ್ಳಬೇಕಾದ ದುರಸ್ತಿ ಕಾರ್ಯಗಳನ್ನು ಶೀಘ್ರವೇ ಕೈಗೊಳ್ಳಬೇಕು. ಟ್ರಾಫಿಕ್ ಸಿಗ್ನಲ್‌ಗಳ ನಿರ್ವಹಣೆ ರಬ್ಬರ್‌ ಹಂಪ್ಸ್‌ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.

ಅಪಘಾತದ ವಿಷಯದಲ್ಲಿ ನಿರ್ಲಕ್ಷ್ಯ ತೋರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಲೋಕೋಪಯೋಗಿ ಇಲಾಖೆ ಬೆಸ್ಕಾಂ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆ ಅಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಿ ಎಫ್‌ಐಆರ್ ದಾಖಲಿಸಿ.
–ಟಿ.ವೆಂಕಟೇಶ್, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.