
ಹೊಳಲ್ಕೆರೆ: ತಾಲ್ಲೂಕಿನ ದೊಗ್ಗನಾಳ್ ಗ್ರಾಮದಲ್ಲಿ ಶಾಸಕ ಎಂ. ಚಂದ್ರಪ್ಪ ಗುರುವಾರ ₹ 3 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ದೊಗ್ಗನಾಳ್ ಗ್ರಾಮದಿಂದ ಹನುಮಲಿ, ಆರ್. ನುಲೇನೂರು, ಮಾಳೇನಹಳ್ಳಿ ಮಾರ್ಗದಲ್ಲಿ ಸಿ.ಸಿ. ರಸ್ತೆ, ಡಾಂಬರ್ ರಸ್ತೆ ನಿರ್ಮಿಸಲಾಗುವುದು. ಈ ನೂತನ ರಸ್ತೆ ನೇರವಾಗಿ ಹಳ್ಳಿಗಳನ್ನು ಸಂಪರ್ಕಿಸುವುದರಿಂದ ರೈತರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಈ ಮಾರ್ಗದಲ್ಲಿ ಸಿಂಗೇನಹಳ್ಳಿಯಿಂದ ಕಸ್ತೂರಬಾ ನಗರದವರೆಗೆ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿದ್ದು, ₹ 20 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿದೆ ಎಂದರು.
‘ಮುಂದಿನ 25 ವರ್ಷಗಳ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ತಾಲ್ಲೂಕಿಗೆ ₹ 400 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿದ್ದೇನೆ. ವಾಣಿವಿಲಾಸ ಸಾಗರದಿಂದ ತಾಲ್ಲೂಕಿನ ಪ್ರತೀ ಮನೆಗೂ ಶುದ್ದ ಕುಡಿಯುವ ನೀರು ಪೂರೈಸಲಾಗುವುದು. ಈಗಾಗಲೇ ಪೈಪ್ ಲೈನ್ ಕಾಮಗಾರಿ ಮುಗಿದಿದ್ದು, ಮುಂದಿನ ಮೂರು ತಿಂಗಳಲ್ಲಿ ನೀರು ಬರಲಿದೆ. ರೈತರಿಗೆ ಕೆರೆ ತುಂಬಿಸುವ ಯೋಜನೆ, ಸಮರ್ಪಕ ವಿದ್ಯುತ್ ನೀಡಲು ಕ್ರಮ ಕೈಗೊಂಡಿದ್ದೇನೆ’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹೇಶ್ವರಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಕುಮಾರಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ವಿಶ್ವೇಶ್ವರಯ್ಯ, ನಿವೃತ್ತ ಡಿವೈಎಸ್‌ಪಿ ಚಂದ್ರಣ್ಣ, ಜಗದೀಶ್, ರಮೇಶ್, ನುಲೇನೂರು ಶೇಖರ್, ಮರುಳಸಿದ್ದಪ್ಪ, ಗುತ್ತಿಗೆದಾರ ರಾಜಶೇಖರ್ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.