ADVERTISEMENT

ದೇವರಮರಿಕುಂಟೆಯಲ್ಲಿ ಶಿಲಾ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 2:47 IST
Last Updated 19 ಮಾರ್ಚ್ 2022, 2:47 IST
ಚಳ್ಳಕೆರೆ ತಾಲ್ಲೂಕಿನ ದೇವರಮರಿಕುಂಟೆ ಗ್ರಾಮದ ಸಮೀಪ ಪತ್ತೆಯಾದ ಚಿತ್ರದುರ್ಗ ಪಾಳೆಯಗಾರರ ಕಾಲದ ಶಿಲಾಶಾಸನ.
ಚಳ್ಳಕೆರೆ ತಾಲ್ಲೂಕಿನ ದೇವರಮರಿಕುಂಟೆ ಗ್ರಾಮದ ಸಮೀಪ ಪತ್ತೆಯಾದ ಚಿತ್ರದುರ್ಗ ಪಾಳೆಯಗಾರರ ಕಾಲದ ಶಿಲಾಶಾಸನ.   

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ದೇವರಮರಿಕುಂಟೆ ಗ್ರಾಮದ ಸಮೀಪ ಚಿತ್ರದುರ್ಗ ಪಾಳೆಯಗಾರರ ಕಾಲದ ಶಿಲಾಶಾಸನವೊಂದು ಹೊಸದಾಗಿ ಪತ್ತೆಯಾಗಿದೆ ಎಂದು ಶಾಸನ–ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ತಿಳಿಸಿದ್ದಾರೆ.

‘ಕತೆಗಾರ ತಿಪ್ಪಣ್ಣ ಮರಿಕುಂಟೆ ಅವರು ಗ್ರಾಮದ ಕೆರೆ ಪಕ್ಕದ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶಾಸನವನ್ನು ಗುರುತಿಸಿ ಸ್ಥಳೀಯರ ನೆರವಿನೊಂದಿಗೆ ಸ್ವಚ್ಛಗೊಳಿಸಿದ್ದರು. ಬಳಿಕ ನಾನು ಶಾಸನವನ್ನು ಓದಿದಾಗ ಶಾಲಿವಾಹನ ಶಕೆ ವರ್ಷ 1652ನೆಯ ಸಾಧಾರಣ ಸಂವತ್ಸರ ವೈಶಾಖ
ಬಹುಳ 5 ಭಾನುವಾರವು (ಕ್ರಿ.ಶ. 1730 ಏಪ್ರಿಲ್ 26ರ ಭಾನುವಾರ) ದೇವರಮರಿಕುಂಟೆ ಗ್ರಾಮದ ಗೌಡ ಚೆನ್ನಣ್ಣ ಎಂಬುವವರು ಅಲ್ಲಿ ಓಬಳದೇವರ ದೇವಾಲಯವನ್ನು ಕಟ್ಟಿಸಿದ್ದರು. ಆ ಚೆನ್ನಣ್ಣನು ಅದೇ ಗ್ರಾಮದ ಗೌಡರ ಮನೆತನದ ಚೆನ್ನಣ್ಣವೊಡೆಯರ ಮಗನಾದ ಚೆನ್ನವೀರಗೌಡರ ಮಗ ಎಂದು ಶಾಸನ ತಿಳಿಸುತ್ತದೆ. ಸ್ಥಳೀಯ ಚರಿತ್ರೆಯ ದೃಷ್ಟಿಯಿಂದ ಈ ಶಾಸನಕ್ಕೆ ಪ್ರಾಶಸ್ತ್ಯವಿದೆ’ ಎಂದು ವಿವರಿಸಿದ್ದಾರೆ.

‘ಶಾಸನದ ಕಲ್ಲು ಸುಮಾರು ಎರಡೂವರೆ ಅಡಿ ಎತ್ತರ, ಒಂದೂವರೆ ಅಡಿ ಅಗಲ ಇದ್ದು, ಮೇಲ್ಭಾಗದಲ್ಲಿ ಚಂದ್ರ, ಚಕ್ರ, ಶಂಖ, ಸೂರ್ಯ ಇವುಗಳ ರೇಖಾ ಕೆತ್ತನೆಗಳಿವೆ. ಅವುಗಳ ಕೆಳಗೆ ಪಾಳೆಯಗಾರರ ಲಿಪಿಶೈಲಿಯ ಸುಂದರ ಹಾಗೂ ಸ್ಪಷ್ಟ ಕನ್ನಡ ಅಕ್ಷರಗಳ 9 ಪಂಕ್ತಿಗಳ ಶಾಸನ ಬರಹವಿದೆ. ಈ ಶಾಸನ ಬೆಳಕಿಗೆ ಬರಲು ಗ್ರಾಮದ ಪೋಸ್ಟ್ ಚಿಕ್ಕಣ್ಣ, ಎಂ.ಒ. ಬೋರಣ್ಣ, ಟೈಲರ್ ಮಹೇಶ್, ತಪ್ಪಗೊಂಡನಹಳ್ಳಿ ವೀರಣ್ಣ ಮತ್ತು ರಾಮಜ್ಜರ ರಾಮಣ್ಣ ಪ್ರಮುಖ ಕಾರಣರಾಗಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.