ADVERTISEMENT

ಸಂಘ ಬದಲಾಗದೇ ಕ್ಷೇತ್ರ ಅಭಿವೃದ್ಧಿಯಾಗದು

ಸಹಕಾರ ಸಪ್ತಾಹದಲ್ಲಿ ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಫ್ ಬೇಸರ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 13:19 IST
Last Updated 14 ನವೆಂಬರ್ 2019, 13:19 IST

ಚಿತ್ರದುರ್ಗ: ‘ಜಿಲ್ಲೆಯಲ್ಲಿನ ಪ್ರಾಥಮಿಕ ಸಹಕಾರ ಸಂಘಗಳ ಕಾರ್ಯವೈಖರಿ ಬದಲಾಗದ ಹೊರತು ಸಹಕಾರ ಕ್ಷೇತ್ರ ಅಭಿವೃದ್ಧಿ ಅಸಾಧ್ಯ’ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಫ್ ಅಭಿಪ್ರಾಯಪಟ್ಟರು.

ಸಹಕಾರ ಭವನದಲ್ಲಿ ಗುರುವಾರ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲೆ ಹಾಗೂ ತಾಲ್ಲೂಕಿನ ಎಲ್ಲ ಸಹಕಾರ ಸಂಘ ಮತ್ತು ಬ್ಯಾಂಕ್‌ಗಳಿಂದ ಆಯೋಜಿಸಿದ್ದ 66ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಅವರು ಮಾತನಾಡಿದರು.

‘ನೇಕಾರ, ಹಾಲು ಉತ್ಪಾದಕರ ಸಂಘಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸಂಪನ್ಮೂಲ ಕೊರತೆಯಿಂದಾಗಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. 50 ವರ್ಷಗಳಾದರೂ ಬದಲಾವಣೆ ಇಲ್ಲವೆಂದರೆ ಯಾವ ಉಪಯೋಗವೂ ಇಲ್ಲ’ ಎಂದರು.

ADVERTISEMENT

‘ಸಂಘಗಳು ಹಳೆಯ ಪದ್ಧತಿಗೆ ಅಂಟಿಕೊಳ್ಳಬಾರದು. ಅದರಿಂದ ಪ್ರಗತಿ ಎಂದಿಗೂ ಸಾಧ್ಯವಿಲ್ಲ. ಹೊಸ ರೂಪ ಕೊಟ್ಟಾಗ ಮಾತ್ರ ಸಹಕಾರ ಕ್ಷೇತ್ರದಲ್ಲಿ ಬದಲಾವಣೆ ಕಾಣಲು ಸಾಧ್ಯ. ಈ ಬಗ್ಗೆ ಸಂಘದ ಎಲ್ಲ ಸದಸ್ಯರು ಚಿಂತನ-ಮಂಥನ ನಡೆಸಬೇಕಾದ ಅಗತ್ಯವಿದೆ’ ಎಂದು ಸಲಹೆ ನೀಡಿದರು.

‘ಕೃಷಿ ಸಾಲಕ್ಕೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ಮೇಲೆ ಅವಲಂಬನೆ ಆಗುವವರ ಸಂಖ್ಯೆ ಹೆಚ್ಚುತ್ತಿದೆ. ನಮ್ಮಲ್ಲಿ ಹೆಚ್ಚಿನ ಹಣವಿದ್ದರೆ ರೈತರಿಗೆ, ಫಲಾನುಭವಿಗಳಿಗೆ ನೀಡಲು ಸಾಧ್ಯ. ಆದರೆ, ಬ್ಯಾಂಕ್‌ನಲ್ಲಿ ಹಣ ಇಲ್ಲದಿರುವ ಸಂಗತಿಯನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಕೌಶಲ ಕೇಂದ್ರದ ವ್ಯವಸ್ಥಾಪಕ ಎಂ.ಎಸ್. ಗಿರೀಶ್, ‘ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಕೌಶಲ ಕೇಂದ್ರವಿದೆ. ಅಲ್ಲಿ ಟೈಲರಿಂಗ್, ಹ್ಯಾಂಡ್ ಎಂಬ್ರಾಯಿಡರಿ, ಎಸ್‌ಟಿಪಿ ಸೇರಿ ವಿವಿಧ ರೀತಿಯ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುವುದು’ ಎಂದರು.

‘ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಕೌಶಲಾಭಿವೃದ್ಧಿ ಸಂಸ್ಥೆಯಿಂದ ಕೇಂದ್ರ ಮಾನ್ಯತೆ ಪಡೆದಿದ್ದು, ಸಂಸ್ಥೆಯಿಂದಲೇ ಪ್ರಮಾಣ ಪತ್ರ ನೀಡಲಾಗುವುದು. ಪ್ರಧಾನಮಂತ್ರಿ ಮುದ್ರಾ ಯೋಜನೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಮೂಲಕ ಸಾಲ ಸೌಲಭ್ಯ ಪಡೆದು ಸ್ವಯಂ ಉದ್ಯೋಗ ಮಾಡಬಹುದು’ ಎಂದು ತಿಳಿಸಿದರು.

‘ಎಸ್ಸೆಸ್ಸೆಲ್ಸಿ ಹಾಗೂ ಪಿಯು ವಿದ್ಯಾಭ್ಯಾಸ ಮಾಡಿದ ಕೆಲವರಿಗೆ ಕೌಶಲ ತರಬೇತಿ ನೀಡಿ ಮಾಸಿಕ ₹ 24 ಸಾವಿರ ವೇತನ ಸಿಗುವಂಥ ಉದ್ಯೋಗ ಕೊಡಿಸಿದ್ದೇವೆ. ತರಬೇತಿ ಪಡೆಯಲಿಚ್ಛಿಸುವ ಆಸಕ್ತರು ನೋಂದಣಿ ಮಾಡಿಕೊಂಡರೆ ಕೆಲಸ ಕೊಡಿಸಲು ಪ್ರಾಮಾಣಿಕ ಯತ್ನ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಆರ್. ರಾಮರೆಡ್ಡಿ, ಉಪಾಧ್ಯಕ್ಷ ಕರಿಯಪ್ಪ, ಮಾಜಿ ಅಧ್ಯಕ್ಷ ಜಿಂಕಲು ಬಸವರಾಜ, ಮಾಜಿ ಉಪಾಧ್ಯಕ್ಷರಾದ ಎಸ್. ಪರಮೇಶ್, ಕೆ.ಸಿ. ಸಿದ್ದಪ್ಪ, ನಿರ್ದೇಶಕರಾದ ಸಿ. ವೀರಭದ್ರಪ್ಪ, ಕೆ.ಜೆ. ಶ್ರೀಧರ್, ಕೆ.ಸಿ. ವೀರೇಂದ್ರ, ಎಚ್. ಆಂಜನೇಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್‌.ಎಂ. ದ್ಯಾಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.