ಚಿತ್ರದುರ್ಗ: ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಡಿಕೆತೆಂಗುಗಳ ಬೀಡು– ಅರೆಮಲೆನಾಡು ಹೊಳಲ್ಕೆರೆ ಪಟ್ಟಣ ಸಜ್ಜಾಗಿದೆ. ಬಿಸಿಲು ಏರುತ್ತಿರುವ ಸಂದರ್ಭದಲ್ಲಿ 2 ದಿನಗಳ ಉತ್ಸವಕ್ಕೆ ಜಿಲ್ಲಾ ಕಸಾಪ ಸಕಲ ಸಿದ್ಧತೆ ಮಾಡಿಕೊಂಡಿದೆ.
ಕಳೆದ ಮೂರು ದಶಕಗಳಿಂದ ಅದ್ಯಾಪಕರಾಗಿ, ಪ್ರಾಚಾರ್ಯರಾಗಿ, ಸಾಹಿತಿಯಾಗಿ ಪ್ರಸಿದ್ಧಿ ಪಡೆದಿರುವ ಪ್ರೊ.ಜಿ.ಪರಮೇಶ್ವರಪ್ಪ ಅವರು ಈ ನುಡಿಹಬ್ಬದ ಸರ್ವಾಧ್ಯಕ್ಷತೆ ವಹಿಸಿದ್ದಾರೆ. ಭಾಮಿನಿ ಷಟ್ಪದಿಯಲ್ಲಿ ಕಾವ್ಯ ರಚಿಸಿರುವ ಪರಮೇಶ್ವರಪ್ಪ ಅವರು ಹೊಸ ಪೀಳಿಗೆಯ ಸಾಹಿತಿಗಳಿಗೆ ಮಾದರಿ ಸ್ಥಾನದಲ್ಲಿ ನಿಂತಿದ್ದಾರೆ. ಕಾವ್ಯ ರೂಪದಲ್ಲಿ ಬುಡಕಟ್ಟು ಸಂಸ್ಕೃತಿಗೆ ಅವರು ಅಕ್ಷರ ರೂಪಕೊಟ್ಟಿದ್ದಾರೆ. ನುಡಿಹಬ್ಬದ ಹೊತ್ತಿನಲ್ಲಿ ಜಿ.ಪರಮೇಶ್ವರಪ್ಪ ಅವರು ‘ಪ್ರಜಾವಾಣಿ‘ಯ ಜೊತೆ ಮಾತನಾಡಿದ್ದಾರೆ.
* ದುರ್ಗದ ಮಣ್ಣಿನ ಬದುಕು ಹಾಗೂ ಬರಹವನ್ನು ಹೇಗೆ ಬಣ್ಣಿಸುತ್ತೀರಿ?
ಉ: ಭಿನ್ನ ಪರಿಸರ ಹೊಂದಿರುವ ಈ ಮಣ್ಣಿಗೂ, ನಮ್ಮ ಬದುಕಿಗೂ ಹಾಗೂ ಬರಹಕ್ಕೂ ಆಪ್ತ ಸಂಬಂಧವಿದೆ. ಆರಂಭಿಕ ಕಾಲದಿಂದಲೂ ಸಾಹಿತ್ಯ ಮಣ್ಣಿನ ಜೊತೆಯಲ್ಲೇ ಬೆಸೆದುಕೊಂಡು ಬಂದಿದೆ. ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಾಲಿ, ಎಳ್ಳು ಜೀರಿಗೆ ಬೆಳೆಯೋಳ, ಭೂಮ್ತಾಯ ಎದ್ದೊಂದು ಘಳಿಗೆ ನೆನೆದೇನೋ... ಸಾಲುಗಳು ಮಣ್ಣಿನ ಜೊತೆಗಿನ ಮನುಷ್ಯ ಸಂಬಂಧವನ್ನು ಸಾರಿ ಹೇಳುತ್ತಿವೆ.
ಇವತ್ತಿನ ಆಧುನಿಕ ಶಿಷ್ಟ ಸಾಹಿತ್ಯ ಕೂಡ ಪ್ರಕೃತಿ ಭಾಗವಾಗಿಯೇ ಇದೆ. ನಮ್ಮ ಜನಪದರು ಮಣ್ಣಿನ ಜೊತೆಯಲ್ಲೇ ಬೆಳೆದು ಪದ್ಯ ಕಟ್ಟಿದ್ದಾರೆ. ಮಣ್ಣಿಲ್ಲದೇ ಸಾಹಿತ್ಯವಿಲ್ಲ, ಬದುಕಿಲ್ಲ. ಆದರೆ ಇಂದು ಜಾಗತೀಕರಣ, ಹಸಿರು ಕ್ರಾಂತಿಯ ಹೆಸರಿನಲ್ಲಿ ಮಣ್ಣಿನ ಆರೋಗ್ಯವನ್ನು ನಾವು ಕೆಡಿಸಿದ್ದೇವೆ. ಮಣ್ಣಿನ ಆರೋಗ್ಯ ಚೆನ್ನಾಗಿದ್ದರೆ ನಮ್ಮ ಬದುಕು ಉತ್ತಮವಾಗಿರುತ್ತದೆ, ಗುಣಮಟ್ಟದ ಸಾಹಿತ್ಯವೂ ಹುಟ್ಟುತ್ತದೆ.
* ಮಧ್ಯ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ನಿರ್ಲಕ್ಷ್ಯಕ್ಕೆ ಒಳಗಾಗಿದೆಯೇ?
ಉ: ನೂರಕ್ಕೆ ನೂರರಷ್ಟು ಸತ್ಯ. ನಮ್ಮ ಭಾಗದಲ್ಲಿ ಶ್ರೀಮಂತವಾದ ಸಾಂಸ್ಕೃತಿಕ, ಸಾಹಿತ್ಯಕ, ಬುಡಕಟ್ಟು, ಜಾನಪದ ಪರಂಪರೆ ಇದೆ. ಆದರೆ ಇವುಗಳ ಉಳಿವಿಗೆ ಯಾರೂ ಶ್ರಮಿಸುತ್ತಿಲ್ಲ. ಇಲ್ಲಿರುವ ಮಠ ಮಾನ್ಯಗಳು ಕೂಡ ಸಂಸ್ಕೃತಿ ಉಳಿವಿಗೆ ಮುಂದಾಗುತ್ತಿಲ್ಲ. ರಾಜಕಾರಣಿಗಳಿಗೆ ನಮ್ಮ ಪರಂಪರೆಯ ಬಗ್ಗೆ ಆಸಕ್ತಿ ಇಲ್ಲ. ಸ್ಥಳೀಯವಾಗಿ ಉದ್ಯೋಗ ಕೊಡಲೂ ಅವರಿಂದ ಸಾಧ್ಯವಾಗಿಲ್ಲ. ನಮ್ಮ ಯುವಕರು ಉದ್ಯೋಗ ಅರಸಿ ಗುಳೇ ಹೋಗುತ್ತಿದ್ದಾರೆ. ಅನ್ಯ ಸಂಸ್ಕೃತಿಗೆ ಮಾರುಹೋಗಿ ಸ್ಥಳೀಯ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ.
* ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಶಾಲೆಗಳು ಚಿಂತಾಜನಕ ಸ್ಥಿತಿಯಲ್ಲಿವೆಯಲ್ಲಾ?
ಉ: ಕೋಟಿ ಕೋಟಿ ಖರ್ಚು ಮಾಡಿ ಗುಡಿ, ಗೋಪುರ ಕಟ್ಟುತ್ತಾರೆ. ಹೊರರಾಜ್ಯಗಳಿಂದ ಖ್ಯಾತನಾಮ, ದುಬಾರಿ ಶಿಲ್ಪಿಗಳನ್ನು ಕರೆದುತಂದು ಮೂರ್ತಿ ಕೆತ್ತಿಸುತ್ತಾರೆ. ಆದರೆ ಶಾಲೆಗಳನ್ನು ಕಟ್ಟಿಸಲು ಯಾರೂ ಮುಂದೆ ಬರುವುದಿಲ್ಲ. ಗುಡಿ, ಗೋಪುರಗಳಿಗೆ ಖರ್ಚು ಮಾಡುವ ಒಂದಂಶ ಹಣದಲ್ಲಿ ಹಲವು ಶಾಲೆ ಕಟ್ಟಿಸಬಹದು. ದೇವಾಲಯಗಳಿಗೆ ಅಲಂಕಾರ ಮಾಡಲು ಅಪಾರ ಹಣ ಖರ್ಚು ಮಾಡುತ್ತಾರೆ. ಆದರೆ ಶಾಲೆ ಕಟ್ಟಿಸಿ ಮುಂದಿನ ಪೀಳಿಗೆಯ ಮಕ್ಕಳ ಮನಸ್ಸು ಬೆಳಗಿಸಲು ಯಾರಿಗೂ ಇಷ್ಟವಿಲ್ಲ. ಇದೇ ದುರಂತ.
* ಏಳುಸುತ್ತಿನ ಕೋಟೆ ಚಿತ್ರದುರ್ಗದ ಅಸ್ಮಿತೆ, ಆದರೆ, ಕೋಟೆಯ ನಿರ್ವಹಣೆ ಸರಿ ಇಲ್ಲವಲ್ಲ?
ಉ: ಈ ಬಗ್ಗೆ ನನಗೆ ವೇದನೆ ಇದೆ. ಕೋಟೆ ಸಂರಕ್ಷಣೆ ಮಾಡುವುದು ನಮ್ಮ ರಾಜಕಾರಣಿಗಳಿಗೆ ಆದ್ಯತೆಯ ವಿಷಯವಾಗಿಲ್ಲ. ಇಲ್ಲಿಗೆ ಬಂದ ಪ್ರವಾಸಿಗರು ಕೋಟೆಯ ಸ್ಥಿತಿ ಕಂಡು ಹಿಡಿಶಾಪ ಹಾಕುತ್ತಾರೆ. ಜನ ಎಚ್ಚೆತ್ತುಕೊಂಡು ಹೋರಾಟದ ಮೂಲಕವಾದರೂ ಕೋಟೆ ಸಂರಕ್ಷಣೆ ಮಾಡಬೇಕು. ಯುವ ಪೀಳಿಗೆ ಈ ಬಗ್ಗೆ ಚಿಂತಿಸಬೇಕು. ಯುವಜನರು ಕೋಟೆ ಸಂರಕ್ಷಿಸಿ ಸಂಶೋಧನೆಗೆ ಮುಂದಾಗಬೇಕು.
* ಹಟ್ಟಿಗಳಲ್ಲಿ ಈಗಲೂ ಸಂಪ್ರದಾಯದ ನೆಪದಲ್ಲಿ ಮುಟ್ಟಾದ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಹಾಕುವುದು ಸರಿಯೇ?
ಉ: ನಾನು ಕೂಡ ಅದೇ ಸಮುದಾಯದಲ್ಲಿ ಹುಟ್ಟಿ ಬಂದಿದ್ದೇನೆ. ಹುಟ್ಟು- ಮುಟ್ಟು ಎರಡೂ ಪ್ರಕೃತಿಯ ಸಹಜ ಕ್ರಿಯೆ. ಮುಟ್ಟಾದ ಮಹಿಳೆಯನ್ನು ಸಂಪ್ರದಾಯದ ಹೆಸರಿನಲ್ಲಿ ಹೊರಗಿಡುವುದನ್ನು ನಾನು ಒಪ್ಪುವುದಿಲ್ಲ. ಇದಕ್ಕೆ ಅನಕ್ಷರತೆಯೇ ಕಾರಣ. ಪಟ್ಟಕ್ಕೆ ಬರುವ ಹಟ್ಟಿಯ ಪೂಜಾರಿಗಳು ಅನಾಚಾರವನ್ನು ಮುನ್ನಡೆಸುತ್ತಿದ್ದಾರೆ. ಸಮುದಾಯದ ಜನರ ಮನಸ್ಸು ಕೆಡಿಸುತ್ತಿದ್ದಾರೆ.
* ಇವತ್ತಿನ ಸಾಹಿತ್ಯ, ಸಾಹಿತಿಗಳ ಬಗ್ಗೆ ಏನು ಹೇಳುವಿರಿ?
ಉ: ಇಂದಿನ ಸಾಹಿತ್ಯ ಮಣ್ಣಿನ ಜೊತೆಗಿನ ಬೆಸುಗೆಯಿಂದ ದೂರವಾಗುತ್ತಿದೆ. ಪ್ರೀತಿ, ವಾತ್ಸಲ್ಯದ ಬದಲಾಗಿ ಅಂತರಂಗದ ಕಲಹವೇ ತುಂಬಿ ತುಳುಕುತ್ತಿದೆ. ಸಾಹಿತಿಗಳು ಕೂಡ 'ಎಡ- ಬಲ'ಕ್ಕೆ ಜೋತು ಬಿದ್ದಿದ್ದಾರೆ. ರಾಜಕಾರಣಿಗಳ ಬಗ್ಗೆ ಬರೆದು ಸರ್ಕಾರದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಷ್ಟೇ ಅವರು ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ.
* ಸಾಹಿತ್ಯ ಸಮ್ಮೇಳನಗಳು ಕೂಡ ರಾಜಕೀಯ ಸಭೆಗಳಾಗುತ್ತಿರುವುದು ಏಕೆ?
ಉ: ಇಂದು ರಾಜಕೀಯ ಇಲ್ಲದ ಕ್ಷೇತ್ರವೇ ಇಲ್ಲ, ಸಾಹಿತ್ಯವೂ ಅದಕ್ಕೆ ಹೊರತಾಗಿಲ್ಲ. ಮತದಾರ ಭ್ರಷ್ಟನಾಗಿರುವುದೇ ಇದಕ್ಕೆ ಕಾರಣ. ಎಲ್ಲಿಯವರೆಗೆ ಜನ ತಮ್ಮ ಮತವನ್ನು ಹಣಕ್ಕೆ ಮಾರಿಕೊಳ್ಳುತ್ತಾರೋ ಅಲ್ಲಿಯವರೆಗೂ ಭ್ರಷ್ಟಾಚಾರ ಬಗೆಹರಿಯುವುದಿಲ್ಲ. ರಾಜಕಾರಣಿಗಳ ಭ್ರಷ್ಟಾಚಾರವನ್ನು ದೇವರಿಂದಲೂ ತೊಲಗಿಸಲು ಸಾಧ್ಯವಿಲ್ಲ. ಜನರಿಂದ ಮಾತ್ರ ಸಾಧ್ಯ. ಇಲ್ಲದಿದ್ದರೆ ಪ್ರಕೃತಿಯೇ ತನ್ನ ಕ್ರಮ ಕೈಗೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.