ADVERTISEMENT

ಐದಾರು ಮೀಟರ್‌ಗೂ ಹೆಚ್ಚು ಆಳದಲ್ಲಿ ಮರಳು ಗಣಿಗಾರಿಕೆ

ಹಿರಿಯೂರು ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಮರಳು ಮಾಫಿಯಾ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 12:48 IST
Last Updated 29 ಫೆಬ್ರುವರಿ 2020, 12:48 IST
ಹಿರಿಯೂರು ತಾಲ್ಲೂಕಿನ ಹೂವಿನಹೊಳೆ ಗ್ರಾಮದ ಬಳಿ ಸುವರ್ಣಮುಖಿ ನದಿಯಲ್ಲಿ ಜೆಸಿಬಿ ಬಳಸಿ ಮರಳು ಎತ್ತುತ್ತಿರುವುದು.
ಹಿರಿಯೂರು ತಾಲ್ಲೂಕಿನ ಹೂವಿನಹೊಳೆ ಗ್ರಾಮದ ಬಳಿ ಸುವರ್ಣಮುಖಿ ನದಿಯಲ್ಲಿ ಜೆಸಿಬಿ ಬಳಸಿ ಮರಳು ಎತ್ತುತ್ತಿರುವುದು.   

ಹಿರಿಯೂರು: ತಾಲ್ಲೂಕಿನ ವೇದಾವತಿ ಮತ್ತು ಸುವರ್ಣಮುಖಿ ನದಿಗಳಲ್ಲಿಯ ಮರಳು ಮಾಫಿಯಾ ಕೈಯಲ್ಲಿ ದಿನದಿಂದ ದಿನಕ್ಕೆ ಕರಗುತ್ತಿದೆ. ಮೂರು ಅಡಿ ತೆಗೆಯುವ ಬದಲು ಐದಾರು ಮೀಟರ್‌ಗೂ ಹೆಚ್ಚು ಮರಳನ್ನು ದೋಚುತ್ತಿದ್ದರೂ ಅಧಿಕಾರಿ ವರ್ಗ ಕಣ್ಮುಚ್ಚಿ ಕುಳಿತಿರುವುದು ನದಿ ಪಾತ್ರದ ರೈತರ ಕಣ್ಣು ಕೆಂಪಾಗಿಸಿದೆ.

‘ಫೆ. 27ರಂದು ತಹಶೀಲ್ದಾರರು ಹೊರಡಿಸಿರುವ ಪ್ರಕಟಣೆಯಲ್ಲಿ, ತಾಲ್ಲೂಕಿನಲ್ಲಿ ಸರ್ಕಾರಿ ಜಮೀನುಗಳಲ್ಲಿ, ಹಳ್ಳ–ನದಿಗಳಲ್ಲಿ 3 ಅಡಿಗಿಂತ ಹೆಚ್ಚು ಮರಳು ತೆಗೆಯುತ್ತಿರುವ ಬಗ್ಗೆ ದೂರು ಬಂದಿದ್ದು, ನಿಯಮ ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಕಾನೂನು ರೀತಿಯಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ. ಆದರೆ ಫೆ. 10ರಂದು ಸುವರ್ಣಮುಖಿ ನದಿಯಲ್ಲಿ ಅಕ್ರಮವಾಗಿ ಮರಳು ತುಂಬುತ್ತಿರುವ ಬಗ್ಗೆ ತಾಲ್ಲೂಕಿನ ಹೂವಿನಹೊಳೆಯ ಹನುಮಂತಪ್ಪ ಎಂಬ ರೈತರ ನೇತೃತ್ವದಲ್ಲಿ ಲಿಖಿತ ದೂರು ಸಲ್ಲಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದಿರುವುದು ಆಡಳಿತದಲ್ಲಿನ ವೈಫಲ್ಯವನ್ನು ಎತ್ತಿ ತೋರಿಸುತ್ತದೆ’ ಎಂದು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಟೀಕಿಸಿದ್ದಾರೆ.

‘ಜೆಸಿಬಿ, ಹಿಟಾಚಿ ಯಂತ್ರಗಳನ್ನು ಬಳಸಿ ಆಳುದ್ದ ಮರಳನ್ನು ತುಂಬಲಾಗುತ್ತದೆ. ನದಿಗಳಲ್ಲಿ ನೀರು ಕಾಣಿಸಿಕೊಂಡರೂ ಮರಳು ಬಗೆಯುವುದನ್ನು ನಿಲ್ಲಿಸುತ್ತಿಲ್ಲ. ಇದೇ ರೀತಿ ಅಕ್ರಮ ಮರಳುಗಾರಿಕೆ ನಡೆದಲ್ಲಿ ಒಂದೆರಡು ತಿಂಗಳಲ್ಲಿ ನದಿ ಪಾತ್ರದಲ್ಲಿನ ಅಂತರ್ಜಲ ಕುಸಿದು 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಹತ್ತಾರು ಕಡೆ ರೈತರು ತಮ್ಮ ಹೊಲ–ತೋಟಗಳಿಗೆ ಹೋಗಲು ಜಾಗವಿಲ್ಲದಂತೆ ಮರಳನ್ನು ರಾಶಿ ಹಾಕಲಾಗಿದೆ. ವಾರದಲ್ಲಿ ಒಂದೆರಡು ದಿನ ಪೊಲೀಸ್, ಗಣಿ ಮತ್ತು ಭೂವಿಜ್ಞಾನ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ಮಾಡಿದಲ್ಲಿ ಅಕ್ರಮಗಳು ಕಣ್ಣಿಗೆ ಬೀಳುತ್ತವೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ತಾಲ್ಲೂಕಿನ ಮರಳಿಗೆ ಬೆಂಗಳೂರಿನಲ್ಲಿ ತುಂಬಾ ಬೇಡಿಕೆ ಇದ್ದು, ದೊಡ್ಡ ದೊಡ್ಡ ಟಿಪ್ಪರ್‌ಗಳಲ್ಲಿ ಮರಳು ಸಾಗಿಸುತ್ತಿರುವ ಕಾರಣ ಕೆಲವೇ ದಿನಗಳಲ್ಲಿ ಎರಡೂ ನದಿಗಳು ಖಾಲಿಯಾಗಲಿವೆ. ಅಧಿಕಾರಿಗಳು ಆಗಾಗ ಹೂವಿನಹೊಳೆ, ಬಿದರಕೆರೆ, ಹೊಸಹಳ್ಳಿ, ಸಾಲುಹುಣಿಸೆ ಗ್ರಾಮಗಳ ಹತ್ತಿರ ಹೋಗಿ ಅಕ್ರಮಕ್ಕೆ ಕಡಿವಾಣ ಹಾಕದೇ ಹೋದಲ್ಲಿ ರೈತಸಂಘದ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ತಿಪ್ಪೇಸ್ವಾಮಿ ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.