ADVERTISEMENT

ಅಧಿಕಾರ ಸಿಕ್ಕರೆ ಕೇರಳ ಮಾದರಿ ಗೌರವಧನ: ಮಾಜಿ ಸಚಿವ ಸಂತೋಷ್‌ ಲಾಡ್

ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಭರವಸೆ ನೀಡಿದ ಮಾಜಿ ಸಚಿವ ಸಂತೋಷ್‌ ಲಾಡ್

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 12:40 IST
Last Updated 23 ಡಿಸೆಂಬರ್ 2021, 12:40 IST
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಮಾಜಿ ಸಚಿವ ಸಂತೋಷ್‌ ಲಾಡ್‌ ಉದ್ಘಾಟಿಸಿದರು. ಸಂಜೀವಿನಿ ಫೌಂಡೇಶನ್ ಅಧ್ಯಕ್ಷೆ ಕವಿತಾ ರೆಡ್ಡಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ನೇರ್ಲಗುಂಟೆ, ಎ.ವಿ.ಉಮಾಪತಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಬಿ.ಸೋಮಶೇಖರ್, ಡಾ.ಬಿ.ತಿಪ್ಪೇಸ್ವಾಮಿ ಇದ್ದಾರೆ.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಮಾಜಿ ಸಚಿವ ಸಂತೋಷ್‌ ಲಾಡ್‌ ಉದ್ಘಾಟಿಸಿದರು. ಸಂಜೀವಿನಿ ಫೌಂಡೇಶನ್ ಅಧ್ಯಕ್ಷೆ ಕವಿತಾ ರೆಡ್ಡಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ನೇರ್ಲಗುಂಟೆ, ಎ.ವಿ.ಉಮಾಪತಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಬಿ.ಸೋಮಶೇಖರ್, ಡಾ.ಬಿ.ತಿಪ್ಪೇಸ್ವಾಮಿ ಇದ್ದಾರೆ.   

ಚಿತ್ರದುರ್ಗ: ‘ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿ ಇರಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ₹ 13 ಸಾವಿರ ವೇತನ ಕೊಡಿಸುವುದೇ ನನ್ನ ಬಹುಮುಖ್ಯ ಗುರಿ. ಇದಕ್ಕಾಗಿ ಹೋರಾಟಕ್ಕೂ ಸಿದ್ಧ’ ಎಂದು ಮಾಜಿ ಸಚಿವ ಸಂತೋಷ್‌ ಲಾಡ್‌ ಭರವಸೆ ನೀಡಿದರು.

ತರಾಸು ರಂಗಮಂದಿರದಲ್ಲಿ ಸಂತೋಷ್ ಲಾಡ್ ಫೌಂಡೇಶನ್‌ನಿಂದ ಚಿತ್ರದುರ್ಗ ಮತ್ತು ಮೊಳಕಾಲ್ಮುರು ತಾಲ್ಲೂಕಿನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರಿಗಾಗಿ ಗುರುವಾರ ಆಯೋಜಿಸಿದ್ದ ಕೊರೊನಾ ವಾರಿಯರ್‌ಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶಕ್ಕೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಕೊಡುಗೆ ಅಪಾರ. ಕೋವಿಡ್‌ ಅವಧಿಯಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ನಿಮಗೆಲ್ಲರಿಗೂ ಆರ್ಥಿಕ ಭದ್ರತೆ ಇಲ್ಲವಾಗಿದೆ. ಆದ ಕಾರಣ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೇರಳ ಮಾದರಿಯಲ್ಲಿ ವೇತನ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.

ADVERTISEMENT

‘ರಾಷ್ಟ್ರದಲ್ಲಿ 11.58 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ರಾಜ್ಯದಲ್ಲೇ 80 ಸಾವಿರ ಮಂದಿ ಇದ್ದಾರೆ. ನಿಮ್ಮೆಲ್ಲರ ಪರಿಶ್ರಮದಿಂದಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಆಗುತ್ತಿದೆ. ಇನ್ನೂ 9 ಲಕ್ಷ ಆಶಾ ಕಾರ್ಯಕರ್ತೆಯರಿದ್ದು, ರಾಜ್ಯದಲ್ಲಿ 48 ಸಾವಿರ ಮಂದಿ ಇದ್ದಾರೆ. ಇವರೆಲ್ಲರೂ ಗರ್ಭಿಣಿಯರು, ಮಕ್ಕಳ ಸುರಕ್ಷತೆಗೆ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ’ ಎಂದರು.

‘ಐದು ವರ್ಷದ ಅವಧಿಗೆ ಮಕ್ಕಳ ಆರೋಗ್ಯ ಸುರಕ್ಷತಾ ಕಾರ್ಯಕ್ರಮದ ಅಡಿ ಈಗಿನ ಬಿಜೆಪಿ ಸರ್ಕಾರ ಕಡಿಮೆ ಅನುದಾನ ನೀಡುತ್ತಿರುವುದು ಆತಂಕಕಾರಿ ಸಂಗತಿ. ವಯಸ್ಸು, ಎತ್ತರ, ಬೆಳವಣಿಗೆಗೆ ಸಂಬಂಧಿಸಿದಂತೆ ಮಕ್ಕಳ ತೂಕದಲ್ಲಿ ಏರಿಕೆ ಆಗಬೇಕು. ಆದರೆ, ಇದ್ಯಾವುದೂ ಒಂದಕ್ಕೊಂದು ಹೊಂದಾಣಿಕೆ ಆಗುತ್ತಿಲ್ಲ. ಇದನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸದೇ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಅಕ್ಷರ ದಾಸೋಹ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತಂದಿದ್ದು ಕಾಂಗ್ರೆಸ್. ಈ ಹಿಂದೆ ನಾನೂ ಕಾರ್ಮಿಕ ಸಚಿವನಾಗಿದ್ದ ವೇಳೆ ಪೌರಕಾರ್ಮಿಕರಿಗೆ ವೇತನ ಹೆಚ್ಚಳ ಮಾಡಿದ್ದೇನೆ. ಯಾರು ನಿಮ್ಮ ಪರವಾಗಿ ಕೆಲಸ ಮಾಡಿದ್ದಾರೆ ಎಂಬುದನ್ನು ನೀವುಗಳೇ ಆಲೋಚಿಸಿ’ ಎಂದು ಹೇಳಿದರು.

ಸಂಜೀವಿನಿ ಫೌಂಡೇಶನ್ ಅಧ್ಯಕ್ಷೆ ಕವಿತಾ ರೆಡ್ಡಿ, ‘ಆಸ್ಪತ್ರೆಗಳಿಗೆ ಕೈಲಾದಷ್ಟು ವೈದ್ಯಕೀಯ ಪರಿಕರ ಹಾಗೂ 7,500 ಆಶಾ ಕಾರ್ಯರ್ತೆಯರಿಗೆ ವೈದ್ಯಕೀಯ ಕಿಟ್‌ ವಿತರಿಸುವುದು ಮಿಷನ್ ಸಂಜೀವಿನಿಯ ಗುರಿಯಾಗಿದೆ. ಇದನ್ನು ಕಾರ್ಯರೂಪಕ್ಕೂ ತರಲಾಗುತ್ತಿದೆ. ಕೋವಿಡ್ ಸಮಯದಲ್ಲಿನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎಂದರು.

ಕಿಕ್ಕಿರಿದು ಸೇರಿದ್ದ ಜನ

ಫೌಂಡೇಶನ್‌ ವತಿಯಿಂದ ನೀಡುವ ಕಿಟ್‌ ಪಡೆಯಲು ತರಾಸು ರಂಗಮಂದಿರದಲ್ಲಿ ಕಿಕ್ಕಿರಿದು ಜನ ಸೇರಿದ್ದರು. ಇದರಿಂದ ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡಲು ಸಾಧ್ಯವಾಗಲಿಲ್ಲ.

ಆಶಾ, ಅಂಗವಾಡಿ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರಿಗೆ ಕಿಟ್‌ ವಿತರಣೆ ಮಾಡಲಾಯಿತು. ಕಿಟ್‌ ಪಡೆಯಲು ಸಾರ್ವಜನಿಕರೂ ಬಂದಿದ್ದರು. ಹೀಗಾಗಿ, ರಂಗಮಂದಿರದಲ್ಲಿ ಜನಸಂದಣಿ ಉಂಟಾಗಿತ್ತು. ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಮಾಸ್ಕ್ ಧರಿಸಿದವರೂ ಅಪರೂಪ.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ನೇರ್ಲಗುಂಟೆ, ಎ.ವಿ.ಉಮಾಪತಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಕೆಪಿಸಿಸಿ ಕಾರ್ಯದರ್ಶಿ ಬಿ.ಸೋಮಶೇಕರ್, ಮುಖಂಡರಾದ ಡಾ.ಬಿ.ತಿಪ್ಪೇಸ್ವಾಮಿ,ಹನುಮಲಿ ಷಣ್ಮುಖಪ್ಪ, ಸತೀಶ್ ಸಾಸಲು, ನಾಗರಾಜ್, ಮುಂಡ್ರಿಗಿ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.