ADVERTISEMENT

ಸಾಸಲುಹಳ್ಳ: ಆರಂಭವಾಗದ ರಸ್ತೆ ಕಾಮಗಾರಿ: ವಾಹನ ತಡೆದು ಪ್ರತಿಭಟನೆ

ದೂಳಿನಿಂದ ಸಾರ್ವಜನಿಕರು, ವ್ಯಾಪಾರಿಗಳು ಹೈರಾಣ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 5:49 IST
Last Updated 28 ಜನವರಿ 2026, 5:49 IST
ಚಿಕ್ಕಜಾಜೂರು ಸಮೀಪದ ಸಾಸಲುಹಳ್ಳದಲ್ಲಿನ ರಸ್ತೆ ದುರಸ್ತಿ ಮಾಡಿಸುವಂತೆ ನಿವಾಸಿಗಳು ಸೋಮವಾರ ಸಂಜೆ ರಸ್ತೆ ತಡೆ ನಡೆಸಿದರು 
ಚಿಕ್ಕಜಾಜೂರು ಸಮೀಪದ ಸಾಸಲುಹಳ್ಳದಲ್ಲಿನ ರಸ್ತೆ ದುರಸ್ತಿ ಮಾಡಿಸುವಂತೆ ನಿವಾಸಿಗಳು ಸೋಮವಾರ ಸಂಜೆ ರಸ್ತೆ ತಡೆ ನಡೆಸಿದರು    

ಚಿಕ್ಕಜಾಜೂರು: ವಿಪರೀತ ದೂಳಿನಿಂದಾಗಿ ಸಾರ್ವಜನಿಕರು ಹಾಗೂ ರಸ್ತೆ ಬದಿಯಲ್ಲಿನ ಹೋಟೆಲ್‌, ಅಂಗಡಿ ಮುಂಗಟ್ಟುಗಳ ವರ್ತಕರು ಹೈರಾಣಾಗಿದ್ದು, ರಸ್ತೆ ದುರಸ್ತಿ ಮಾಡಿಸುವಂತೆ ಗ್ರಾಮದ ನಿವಾಸಿಗಳು ಸೋಮವಾರ ಸಂಜೆ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.

ಸಮೀಪದ ಸಾಸಲುಹಳ್ಳದ (ತರಳಬಾಳು ನಗರ) ರಸ್ತೆ ಸಂಪೂರ್ಣ ಹಾಳಾಗಿದ್ದು, ಅದಿರು ಸಾಕಾಣಿಕೆ ವಾಹನಗಳ ಓಡಾಟದಿಂದ ಜನರ ಬದುಕು ಕಲುಶಿತವಾಗಿದೆ.

‘ಸಾಸಲುಹಳ್ಳದ ವೃತ್ತದಲ್ಲಿ ಹತ್ತಾರು ಮಳಿಗೆಗಳಲ್ಲಿ ಬೇಕರಿ, ಹೋಟೆಲ್‌ಗಳು, ಟೀ ಅಂಗಡಿಗಳು, ಹಣ್ಣು, ಹೂವಿನ ಅಂಗಡಿಗಳು ಇವೆ. ಅಲ್ಲದೆ, ಸಿರಿಗೆರೆ, ಚಿಕ್ಕಜಾಜೂರು, ಹೊಳಲ್ಕೆರೆ, ದಾವಣಗೆರೆ ಮತ್ತಿತರ ಕಡೆಗಳಲ್ಲಿನ ಶಾಲೆ– ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ದಾವಣಗೆರೆ, ಚಿಕ್ಕಜಾಜೂರು, ಹೊಳಲ್ಕೆರೆ ಕಡೆಗಳಿಗೆ ಪ್ರಯಾಣಿಸಲು ಬರುವ ಪ್ರಯಾಣಿಕರು ಬಸ್‌ಗಳಿಗಾಗಿ ಕಾದು ಕುಳಿತಾಗ ವಾಹನಗಳ ಸಂಚಾರದಿಂದ ಏಳುವ ದೂಳನ್ನು ಕುಡಿಯುವುದು ಸಾಮಾನ್ಯ ದೃಶ್ಯವಾಗಿದೆ’ ಎಂದು ನಿವಾಸಿಗಳು ದೂರಿದರು.

ADVERTISEMENT

‘ಶಾಸಕರಿಗೆ ಹಾಗೂ ಲೋಕೋಪಯೋಗಿ ಇಲಾಖೆಯವರಿಗೆ ಮೂರು ವರ್ಷಗಳಿಂದ ಇಲ್ಲಿನ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದರೂ, ಯಾರೊಬ್ಬರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ’ ಎಂದು ಆರೋಪಿಸಿ, ಸಾಸಲು ಹಳ್ಳದ ನಿವಾಸಿಗಳು ಸೋಮವಾರ ಸಂಜೆ ದಿಢೀರನೆ ರಸ್ತೆ ತಡೆ ನಡೆಸಿ, ಒಂದು ಗಂಟೆಗೂ ಹೆಚ್ಚು ಕಾಲ ಎಲ್ಲ ವಾಹನಗಳನ್ನು ತಡೆದರು. ಅಲ್ಲದೆ, ಈ ವಿಷಯವನ್ನು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಅವರಿಗೆ ತಿಳಿಸಿದರು. ಎಇಇ ರವಿಕುಮಾರ್‌ ಸ್ಥಳಕ್ಕೆ ಬಂದು, ಪ್ರತಿಭಟನೆಯಲ್ಲಿ ನಿರತರಾದವರನ್ನು ಓಲೈಸುವ ಯತ್ನ ನಡೆಸಿದರು.

ಸ್ಥಳೀಯ ಮುಖಂಡರಾದ ಜೆ. ಓಂಕಾರಸ್ವಾಮಿ, ಎಂ.ಕೆ. ಗುರುಮೂರ್ತಿ, ‘ಶಾಸಕರು 2024ರ ಮಾರ್ಚ್‌ 8ರಂದು ರಸ್ತೆ ನಿರ್ಮಾಣಕ್ಕೆ ಭೂಮಿ ಸಲ್ಲಿಸಿ, ಇನ್ನು ಆರು ತಿಂಗಳಲ್ಲಿ ಸಿಸಿ ರಸ್ತೆ ನಿರ್ಮಿಸಲಾಗುವುದು ಹಾಗೂ ಸೇತುವೆಗೆ ಪ್ರತ್ಯೇಕವಾಗಿ ಹಣ ಮಂಜೂರು ಮಾಡುವುದಾಗಿ ತಿಳಿಸಿದ್ದರು. ಆದರೆ, ಭೂಮಿಪೂಜೆ ನಡೆದು 14 ತಿಂಗಳು ಕಳೆದರೂ ಲೋಕೋಪಯೋಗಿ ಇಲಾಖೆಯವರು ಕಾಮಗಾರಿಯನ್ನು ಏಕೆ ಆರಂಭಿಸಿಲ್ಲ’ ಎಂದು ಪ್ರಶ್ನಿಸಿದರು. ಇದಕ್ಕೆ ರವಿಕುಮಾರ್‌ ಅವರು, ‘ಇದು ನನ್ನ ಗಮನಕ್ಕೆ ಬಂದಿಲ್ಲ. ಕೆಲವು ದಿನಗಳಲ್ಲಿ ಇದಕ್ಕೆ ತಾತ್ಕಾಲಿಕ ಪರಿಹಾರ ನೀಡಲಾಗುವುದು’ ಎಂದು ಭರವಸೆ ನೀಡಿದರು. 

ಇದಕ್ಕೆ ಪ್ರತಿಭಟನಕಾರರು, ‘ತಾತ್ಕಾಲಿಕ ಕಾಮಗಾರಿ ಬೇಕಿಲ್ಲ. ಮಣ್ಣನ್ನು ತಂದು ಹಾಕಿ ಕೈತೊಳೆದುಕೊಳ್ಳುವಿರಿ. ಇದರಿಂದ ಮತ್ತೆ ಇಲ್ಲಿನ ಜನರು ದೂಳನ್ನು ಕುಡಿದು ಅನಾರೋಗ್ಯಕ್ಕೆ ತುತ್ತಾಗುವುದು ತಪ್ಪುವುದಿಲ್ಲ. ಆದ್ದರಿಂದ, ಡಾಂಬರ್‌ ಅಥವಾ ಸಿಸಿ ರಸ್ತೆಯನ್ನೇ ಹಾಕಬೇಕು’ ಎಂದು ಪಟ್ಟು ಹಿಡಿದರು. ಎಇಇ ರವಿಕುಮಾರ್‌ ಅದಷ್ಟು ಬೇಗ ಕೆಲಸ ಆರಂಭಿಸುವುದಾಗಿ ಹೇಳಿದ ನಂತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಸಂತೋಷ್‌ ಕುಮಾರ್‌, ರಾಟೆ ಕುಮಾರ್‌, ಸ್ಟುಡಿಯೊ ಕುಮಾರ್‌, ವಕೀಲ ರಾಮಚಂದ್ರಪ್ಪ, ಪಂಚಾಕ್ಷರಿ ಹಾಗೂ ಎಲ್ಲ ವರ್ತಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಚಿಕ್ಕಜಾಜೂರು ಸಮೀಪದ ಸಾಸಲುಹಳ್ಳದಲ್ಲಿನ ರಸ್ತೆಯಲ್ಲಿ ವಾಹನಗಳ ಸಂಚಾರದಿಂದ ದೂಳು ಎದ್ದಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.