ಚಿತ್ರದುರ್ಗ: ‘ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಸ್ಥಳ ಆಯ್ಕೆ ಮಾಡಿ ಕಾಮಗಾರಿ ಈಗಾಗಲೇ ಪ್ರಾರಂಭಿಸಲಾಗಿದೆ. ಇದನ್ನು ಅವೈಜ್ಞಾನಿಕ ಎನ್ನುವುದರಿಂದ ಏನೂ ಪ್ರಯೋಜನವಿಲ್ಲ’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕುಂಚಿಗನಾಳ್ ಕಣಿವೆ ಬಳಿ ನಿರ್ಮಾಣವಾಗುತ್ತಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಕಾಮಗಾರಿಯನ್ನು ಭಾನುವಾರ ವೀಕ್ಷಿಸಿ ಮಾತನಾಡಿದರು.
‘ಲೋಕೋಪಯೋಗಿ ಇಲಾಖೆಯು ಜಿಲ್ಲಾಡಳಿತ ಭವನ ಕಟ್ಟಡ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲಿದೆ. ಕಟ್ಟಡ ನಿರ್ಮಾಣದ ಕಾರ್ಯ ಅಂತಿಮ ಹಂತದಲ್ಲಿದೆ’ ಎಂದರು.
‘ಜನವರಿ ವೇಳೆಗೆ ನೂತನ ಜಿಲ್ಲಾಧಿಕಾರಿ ಕಚೇರಿ ಲೋಕಾರ್ಪಣೆಗೊಂಡು ದೈನಂದಿನ ಕಾರ್ಯ ಚಟುವಟಿಕೆಗಳು ಪ್ರಾರಂಭವಾಗಲಿವೆ. ಆರಂಭದಲ್ಲಿ ₹25 ಕೋಟಿ ವೆಚ್ಚದಲ್ಲಿ ನಿರ್ಮಾಣ ಯೋಜನೆ ರೂಪಿಸಲಾಗಿತ್ತು. ಗುಡ್ಡವನ್ನು ಕಡಿದು ನಿರ್ಮಾಣ ಕಟ್ಟಡ ಕಾಮಗಾರಿ ಮಾಡಬೇಕಾದ್ದರಿಂದ ಹಣ ಸಾಲುವುದಿಲ್ಲ ಎಂದು ಯೋಜನೆಯನ್ನು ₹47 ಕೋಟಿಗೆ ಪರಿಷ್ಕರಿಸಲಾಗಿದೆ’ ಎಂದು ತಿಳಿಸಿದರು.
‘ಅಗತ್ಯ ಮೂಲ ಸೌಲಭ್ಯ, ಅಗ್ನಿ ನಿಯಂತ್ರಕ ವ್ಯವಸ್ಥೆ, ಕಟ್ಟಡದ ಸುತ್ತಲೂ ರಕ್ಷಣಾಗೋಡೆ ಸೇರಿದಂತೆ ಪೀಠೋಪಕರಣಕ್ಕಾಗಿ ಹೆಚ್ಚುವರಿಯಾಗಿ ₹15 ಕೋಟಿ ಅನುದಾನಕ್ಕೆ ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಶೇ 4ರಷ್ಟು ಜಿಎಸ್‌ಟಿ ಹಾಗೂ ಕಾಮಗಾರಿ ವೆಚ್ಚದಲ್ಲಿ ಉಂಟಾಗುವ ಹೆಚ್ಚಳಕ್ಕೂ ಅನುದಾನ ಬೇಕಾಗಿದೆ’ ಎಂದರು.
‘ಹಳೆ ರಾಷ್ಟ್ರೀಯ ಹೆದ್ದಾರಿಯಿಂದ ನೂತನ ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕಿಸಲು ₹5 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲು ಡಿಎಂಎಫ್ ಅನುದಾನ ನೀಡಲು ಚರ್ಚಿಸಲಾಗುತ್ತಿದೆ. ನೂತನ ಕಚೇರಿ ನಗರದ ಹೊರ ವಲಯದಲ್ಲಿ ಇರುವುದರಿಂದ ಜನರಿಗೆ ತೊಂದರೆಯಾಗದಂತೆ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಕಚೇರಿಗಳು ನಗರದಲ್ಲಿಯೇ ಕಾರ್ಯನಿರ್ವಹಿಸಲಿವೆ’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಲೋಕೋಪಯೋಗಿ ಸಚಿವರಿಗೆ ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಬಿ.ಯೋಗೀಶ್ ಬಾಬು, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ತಹಶೀಲ್ದಾರ್ ಗೋವಿಂದರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.