ADVERTISEMENT

ಬುದ್ಧಿ ಹೇಳುವ ಹಿರಿಯರು ಮನೆಯಲ್ಲಿರಲಿ: ನ್ಯಾಯಾಧೀಶ ರೋಣ ವಾಸುದೇವ್

‘ಹಿರಿಯ ನಾಗರಿಕರ ಕಾನೂನು ಸಲಹಾ ಕೇಂದ್ರ’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 6:09 IST
Last Updated 14 ಆಗಸ್ಟ್ 2025, 6:09 IST
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ನಡೆದ ಸಮಾರಂಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸಿವಿಲ್‌ ನ್ಯಾಯಾಧೀಶ ರೋಣ ವಾಸುದೇವ ಅವರು ‘ಹಿರಿಯ ನಾಗರಿಕರ ಕಾನೂನು ಸಲಹಾ ಕೇಂದ್ರ’ ಉದ್ಘಾಟಿಸಿದರು
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ನಡೆದ ಸಮಾರಂಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸಿವಿಲ್‌ ನ್ಯಾಯಾಧೀಶ ರೋಣ ವಾಸುದೇವ ಅವರು ‘ಹಿರಿಯ ನಾಗರಿಕರ ಕಾನೂನು ಸಲಹಾ ಕೇಂದ್ರ’ ಉದ್ಘಾಟಿಸಿದರು   

ಚಿತ್ರದುರ್ಗ: ‘ತಪ್ಪುಗಳನ್ನು ತಿದ್ದಿ, ಬುದ್ಧಿ ಹೇಳುವ ಹಿರಿಯ ನಾಗರಿಕರು ಮನೆಯಲ್ಲಿ ಇರಬೇಕು. ಇತ್ತೀಚಿನ ದಿನಗಳಲ್ಲಿ ಹಿರಿಯರ ಮಾರ್ಗದರ್ಶನ ಇಲ್ಲದ ಕಾರಣ ವೈವಾಹಿಕ ಹಾಗೂ ಆಸ್ತಿ ವಿವಾದಗಳು ಹೆಚ್ಚಾಗಿದ್ದು ಸಾರ್ವಜನಿಕರು ಕ್ಷುಲ್ಲಕ ವಿಷಯಗಳಿಗೂ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿದ್ದಾರೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸಿವಿಲ್‌ ನ್ಯಾಯಾಧೀಶರಾದ ರೋಣ ವಾಸುದೇವ ಹೇಳಿದರು.

ನಗರದ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ನಡೆದ ಸಮಾರಂಭದಲ್ಲಿ ‘ಹಿರಿಯ ನಾಗರಿಕರ ಕಾನೂನು ಸಲಹಾ ಕೇಂದ್ರ’ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿರಿಯರ ಮಾರ್ಗದರ್ಶನದಿಂದ ನಮ್ಮ ನಡೆತೆಗಳನ್ನು ತಿದ್ದಿಕೊಳ್ಳಬಹುದಾಗಿದೆ. ಅಂತಹ ಹಿರಿಯ ನಾಗರಿಕರನ್ನು ಮನೆಯಿಂದ ಹೊರಗಡೆ ಹಾಕಿದಾಗ ಕಿರಿಯರಿಗೆ ಸಕಾಲದಲ್ಲಿ ಸೂಕ್ತ ರೀತಿಯ ಸಲಹೆ ಸಿಗದೇ, ಚಿಕ್ಕ ಚಿಕ್ಕ ವಿಷಯಗಳಿಗೂ ಜಗಳ ಮಾಡಿಕೊಂಡು ನ್ಯಾಯಾಲಯಕ್ಕೆ ಬರುತ್ತಾರೆ. ಹಿರಿಯ ನಾಗರಿಕರಿಗೆ ದೇವರ ಸ್ಥಾನ ನೀಡಬೇಕು. ಪೂಜ್ಯನೀಯವಾಗಿ ಕಾಣಬೇಕು’ ಎಂದರು.

ADVERTISEMENT

‘ ಹಿರಿಯ ನಾಗರಿಕರನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಬೇಕು. ಯಾರೂ ಹಿರಿಯ ನಾಗರಿಕರನ್ನು ನಿರ್ಲಕ್ಷ್ಯ ಮಾಡಬಾರದು. ಮನೆಯಲ್ಲಿ ಹಿರಿಯ ನಾಗರಿಕರು ಇದ್ದರೆ ಕುಟುಂಬದಲ್ಲಿ ಶಾಂತಿ, ನೆಮ್ಮದಿ ದೊರೆಯುತ್ತದೆ. ಹಿರಿಯರ ಮಾರ್ಗದರ್ಶನದಲ್ಲಿ ಕುಟುಂಬಗಳು ಮುನ್ನಡೆಯಬೇಕು’ ಎಂದರು.

ಉಪ ವಿಭಾಗಾಧಿಕಾರಿ ಮೆಹಬೂಬ್ ಜೀಲಾನಿ ಖುರೇಷಿ ಮಾತನಾಡಿ ‘ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 35 ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ 19 ಪ್ರಕರಣಗಳು ವಿಲೇವಾರಿ ಮಾಡಲಾಗಿದ್ದು, 6 ಪ್ರಕರಣಗಳಲ್ಲಿ ಹಿರಿಯ ನಾಗರಿಕರ ಆಸ್ತಿಯನ್ನು ವಾಪಾಸ್‌ ನೋಂದಣಿ ಮಾಡಿಕೊಡಲಾಗಿದೆ’ ಎಂದರು.

‘ಸರ್ಕಾರದ ನಿರ್ದೇಶನದಂತೆ ಪ್ರತಿ ತಾಲ್ಲೂಕಿನ ಆಯಾ ಹೋಬಳಿ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯವನ್ನು ಹಿರಿಯ ನಾಗರಿಕರಿಗೆ ಸಮರ್ಪಕವಾಗಿ ತಲುಪಿಸಲಾಗುತ್ತಿದೆ. ಈ ಕುರಿತು ಪಿಂಚಣಿ ಅದಾಲತ್ ನಡೆಸಲಾಗುತ್ತಿದೆ. ಪಿಂಚಣಿ ಅದಾಲತ್‍ನಲ್ಲಿ ಹಿರಿಯ ನಾಗರಿಕರ ಕುಂದು ಕೊರತೆ ಆಲಿಸಿ, ಪರಿಹಾರ ಒದಗಿಸಲಾಗುತ್ತಿದೆ’ ಎಂದರು.

ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ ‘ಸರ್ಕಾರ ಹಿರಿಯ ನಾಗರಿಕರಿಗೆ ಅನೇಕ ಸೌಲಭ್ಯ ಒದಗಿಸಿದೆ. ಜತೆಗೆ ಅವರಿಗಾಗಿಯೇ ಕಾನೂನು ಭದ್ರತೆ ಒದಗಿಸಿದೆ. ಆದರೆ ಅಸಮರ್ಥ ಕಾಲಘಟ್ಟದಲ್ಲಿ ಹಿರಿಯ ಜೀವಗಳಿಗೆ ನೋವುಂಟು ಮಾಡುವ ಕೆಲಸ ಮಾಡಬಾರದು. ಅವರ ಅವಶ್ಯಕತೆಗಳಿಗೆ ಮಕ್ಕಳು ಭದ್ರತೆಯಾಗಿ ನಿಲ್ಲಬೇಕು’ ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ ‘ಹಿರಿಯ ನಾಗರಿಕರು ಕುಟುಂಬದಿಂದ ಆರ್ಥಿಕ, ಸಾಮಾಜಿಕ, ಆರೋಗ್ಯ ಹಾಗೂ ಕಾನೂನಾತ್ಮಕವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಹಿರಿಯ ನಾಗರಿಕರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಈ ಕೇಂದ್ರಗಳಲ್ಲಿ ಹಿರಿಯ ನಾಗರಿಕರ ರಕ್ಷಣೆಗಾಗಿ ಉಚಿತ ಕಾನೂನು ಸಲಹೆ, ಆಪ್ತ ಸಲಹೆ ನೀಡಲು ಹಾಗೂ ಸಮಸ್ಯೆಗಳ ತುರ್ತು ಸ್ಪಂದನೆಗಾಗಿ ಕಾನೂನು ಸಲಹೆಗಾರರನ್ನು ನಿಯೋಜಿಸಲಾಗಿದೆ. ಪ್ರತಿ ಗುರುವಾರ ಹಿರಿಯ ನಾಗರಿಕರಿಗೆ ಕಾನೂನು ಸಲಹೆ ನೀಡಲಾಗುವುದು’ ಎಂದರು.

ಇದೇ ಸಂದರ್ಭದಲ್ಲಿ ನಶಾಮುಕ್ತ ಭಾರತ ಅಭಿಯಾನ ಯೋಜನೆಯಡಿ ಮಾದಕ ವಸ್ತು ಸೇವನೆ ಮಾಡದೇ ಇರುವುದಾಗಿ ಜಿಲ್ಲಾ ಅಂವಿಕಲರ ಕಲ್ಯಾಣಾಧಿಕಾರಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಹಿರಿಯ ನಾಗರಿಕರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ತಹಶೀಲ್ದಾರ್ ಗೋವಿಂದರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್.ವಿಜಯ್ ಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ್, ಕಾರ್ಯದರ್ಶಿ ಆರ್.ಗಂಗಾಧರ್, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮನಾಥ್, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ರಂಗಪ್ಪ ರೆಡ್ಡಿ ಇದ್ದರು.

ರಾಜ್ಯದಲ್ಲೇ ಮೊದಲ ಕೇಂದ್ರ

‘ರಾಜ್ಯದಲೇ ಮೊದಲ ಬಾರಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಕಾನೂನು ಸಲಹಾ ಕೇಂದ್ರ ಉದ್ಘಾಟನೆ ನೆರವೇರಿಸಲಾಗಿದೆ. ಇದು ಇಡೀ ರಾಜ್ಯಕ್ಕೆ ಮಾದರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಹಿರಿಯ ನಾಗರಿಕರು ಸಲಹಾ ಕೇಂದ್ರದ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ನ್ಯಾಯಾಧೀಶರಾದ ರೋಣ ವಾಸುದೇವ ಹೇಳಿದರು ‘ಹಿರಿಯ ನಾಗರಿಕರನ್ನು ಗೌರವ ನೀಡುವಲ್ಲಿ ಯಾರೂ ನಿರ್ಲಕ್ಷ್ಯ ಮಾಡಬಾರದು. ಅವರಿಗೆ ಸಿಗಬೇಕಾದ ಸೌಲಭ್ಯ ನೀಡಿದರೆ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಮೂಲಕ ಸಹಾಯ ಪಡೆಯುವ ಸಂದರ್ಭ ಬರುವುದಿಲ್ಲ. ಹಿರಿಯ ನಾಗರಿಕರಿಗೆ ಎಂತಹ ಸಮಸ್ಯೆ ಬಂದರೂ ಸಹಾಯವಾಣಿ ಸಲಹಾ ಕೇಂದ್ರ ಸಂಪರ್ಕ ಮಾಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.