ADVERTISEMENT

ರಾಜಕಾರಣಿಗಳಿಗೆ ಲಂಚ, ಪರ್ಸಂಟೇಜ್ ಕೊಡಬೇಡಿ: ಸಂಸದ ಎ. ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 13:18 IST
Last Updated 22 ಡಿಸೆಂಬರ್ 2019, 13:18 IST
ಚಿತ್ರದುರ್ಗದಲ್ಲಿ ಭಾನುವಾರ ನಡೆದ ರಾಜ್ಯ ಸರ್ಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಸಂಘದ ಚುನಾಯಿತ ಪ್ರತಿನಿಧಿಗಳ ಸಮಾವೇಶವನ್ನು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಉದ್ಘಾಟಿಸಿದರು. ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ. ಜಗದೀಶ್ ಇದ್ದರು.
ಚಿತ್ರದುರ್ಗದಲ್ಲಿ ಭಾನುವಾರ ನಡೆದ ರಾಜ್ಯ ಸರ್ಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಸಂಘದ ಚುನಾಯಿತ ಪ್ರತಿನಿಧಿಗಳ ಸಮಾವೇಶವನ್ನು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಉದ್ಘಾಟಿಸಿದರು. ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ. ಜಗದೀಶ್ ಇದ್ದರು.   

ಚಿತ್ರದುರ್ಗ: ‘ಸರ್ಕಾರಿ ನೌಕರರು ಕೆಲಸ ಮಾಡಿಸಿಕೊಳ್ಳುವ ಉದ್ದೇಶದಿಂದ ರಾಜಕಾರಣಿಗಳಿಗೆ ಲಂಚ, ಪರ್ಸಂಟೇಜ್ ಕೊಡುವುದನ್ನು ನಿಲ್ಲಿಸಿದರೆ ದೇಶ ಉದ್ಧಾರವಾಗಲಿದೆ’ ಎಂದು ಸಂಸದ ಎ.ನಾರಾಯಣಸ್ವಾಮಿ ಸಲಹೆ ನೀಡಿದರು.

ತರಾಸು ರಂಗಮಂದಿರದಲ್ಲಿ ಭಾನುವಾರ ಸರ್ಕಾರಿ ನೌಕರರ ರಾಜ್ಯ ಮತ್ತು ಜಿಲ್ಲಾ ಸಂಘದಿಂದ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಸಂಘದ ಚುನಾಯಿತ ಪ್ರತಿನಿಧಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

‘ದೇಶವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ರಾಜಕಾರಣಿಗಳಿಗಿಂತಲೂ ಬದ್ಧತೆಯಿಂದ ಕೆಲಸ ಮಾಡುವ ಶಕ್ತಿ ಸರ್ಕಾರಿ ನೌಕರರಲ್ಲಿ ಬರಬೇಕು. ಅಧಿಕಾರಿಗಳು ಮನಸ್ಸು ಮಾಡಿದರೆ ರಾಷ್ಟ್ರದ ಚಿತ್ರಣವನ್ನೇ ಬದಲಿಸಲು ಸಾಧ್ಯವಿದೆ’ ಎಂದರು.

ADVERTISEMENT

‘ಬಡತನ ಇದ್ದೆಡೆ ವಿದ್ಯೆಗೆ ಒತ್ತು ಹೆಚ್ಚು. ಹಸಿವು ಮನುಷ್ಯರನ್ನು ಪ್ರಜ್ಞಾವಂತರನ್ನಾಗಿ ಮಾಡುತ್ತದೆ. ಕಷ್ಟಪಟ್ಟವರು ಮೇಲೆ ಬರುತ್ತಾರೆ ಎಂಬುದಕ್ಕೆ ನೀವುಗಳೇ ಉದಾಹರಣೆ. ನಿಮ್ಮ ಮಕ್ಕಳಿಂದ ದೇಶ ಮತ್ತು ರಾಜ್ಯದ ಪ್ರಗತಿಗೆ ಕೊಡುಗೆ ನೀಡಿದರೆ ಇಲ್ಲಿನ ಪ್ರತಿಭಾ ಪುರಸ್ಕಾರ ಸಾರ್ಥಕ. ಜಾತಿಗೆ ಸೀಮಿತವಾಗಿದ್ದ ಪುರಸ್ಕಾರ ಧರ್ಮಾತೀತವಾಗಿ ನಡೆಯುತ್ತಿರುವುದು ಸ್ವಾಗತಾರ್ಹ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ‘ಬಜೆಟ್‌ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಾರಿಗೆ ತರುವಂಥ ಜನಪರ ಯೋಜನೆಗಳನ್ನು ಮುಂದಿನ 3 ವರ್ಷ ಜನರಿಗೆ ತಲುಪಿಸುವ ಮೂಲಕ ಯಶಸ್ವಿ ಆಡಳಿತ ನಡೆಸಲು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದೊಂದಿಗೆ ಸರ್ಕಾರಿ ನೌಕರರು, ಅಧಿಕಾರಿಗಳು ಸಹಕರಿಸಬೇಕು’ ಎಂದು ಹೇಳಿದರು.

‘ನೌಕರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ರಾಜ್ಯದ ಪ್ರತಿಯೊಬ್ಬ ಸರ್ಕಾರಿ ನೌಕರರ ಕ್ಷೇಮ ನೋಡಿಕೊಳ್ಳಬೇಕಾದ್ದು ಸಂಘದ ಕರ್ತವ್ಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಮುಂದೆ ಬೇಡಿಕೆಗಳನ್ನು ಇಟ್ಟು, ಮನವೊಲಿಸುವ ಮೂಲಕ ಬಗೆಹರಿಸುವಲ್ಲಿ ನಿಮ್ಮ ಸಂಘದ ನೂತನ ರಾಜ್ಯ ಘಟಕದ ಅಧ್ಯಕ್ಷರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ’ ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ. ಜಗದೀಶ್, ‘ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರ ಎಂಬ ಭೇದವಿಲ್ಲದೇ ಸಮಾನ ವೇತನ ನೀಡಬೇಕು. ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಬೇಕು. ರಾಜ್ಯದಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ರಾಜ್ಯ ಅಧ್ಯಕ್ಷರು ಸರ್ಕಾರದ ಗಮನ ಸೆಳೆಯಬೇಕು’ ಎಂದು ಒತ್ತಾಯಿಸಿದರು.

‘ಸಂಘ ಶತಮಾನದತ್ತ ದಾಪುಗಾಲಿಡುತ್ತಿದ್ದು, ನೌಕರರ ಸಹಕಾರದಿಂದ ಮುನ್ನಡೆಯುತ್ತಿದೆ. ಕೆಲ ಇಲಾಖೆಗಳ ಸರ್ಕಾರಿ ನೌಕರರೇ ಕೆಳಗಿನ ನೌಕರರಿಗೆ ಹೆಚ್ಚಿನ ಬಡ್ಡಿಗೆ ಸಾಲ ನೀಡಿ ಶೋಷಣೆ ಮಾಡುತ್ತಿದ್ದಾರೆ. ಇದು ಮೊದಲು ನಿಲ್ಲಬೇಕು’ ಎಂದರು.

ಇದೇ ಸಂದರ್ಭದಲ್ಲಿ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಯ ಅನೇಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಂಘದ ಗೌರವಾಧ್ಯಕ್ಷ ವಿ.ವಿ. ಶಿವರುದ್ರಯ್ಯ, ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡಪ್ಪ ಪಾಟೀಲ್, ಖಜಾಂಚಿ ಶ್ರೀನಿವಾಸ್, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಮೋಹನ್‌ಕುಮಾರ್, ದಾವಣಗೆರೆ ಘಟಕದ ಅಧ್ಯಕ್ಷ ಪಾಲಾಕ್ಷಿ, ಬಳ್ಳಾರಿ ಘಟಕದ ಅಧ್ಯಕ್ಷ ಶಿವಾಜಿರಾವ್, ರಾಜ್ಯ ಪರಿಷತ್ ಸದಸ್ಯ ತಿಮ್ಮಾರೆಡ್ಡಿ, ಚಿತ್ರದುರ್ಗ ಜಿಲ್ಲಾ ಘಟಕದ ಗೌರವಾಧ್ಯಕ್ಷ ಸಿದ್ದೇಶ್ವರ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ವೀರೇಶ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.