ADVERTISEMENT

ಜನಾಕರ್ಷಣೆ ಕೇಂದ್ರವಾದ ಶ್ವಾನ ಪ್ರದರ್ಶನ

* ಡಾಬರಮನ್ ಪ್ರಥಮ, ಮುಧೋಳ ದ್ವಿತೀಯ * ಸಂಭ್ರಮಿಸಿದ ಯುವಸಮೂಹ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 12:47 IST
Last Updated 16 ಅಕ್ಟೋಬರ್ 2018, 12:47 IST
ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಶ್ವಾನ ಪ್ರದರ್ಶನದಲ್ಲಿ ಮುಧೋಳ ನಾಯಿಗೆ ಹಾಲು ಕುಡಿಸುತ್ತಿರುವ ಶಿವಮೂರ್ತಿ ಮುರುಘಾ ಶರಣರು. ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರೂ ಇದ್ದರು. ಚಿತ್ರ: ಭವಾನಿ ಮಂಜು.
ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಶ್ವಾನ ಪ್ರದರ್ಶನದಲ್ಲಿ ಮುಧೋಳ ನಾಯಿಗೆ ಹಾಲು ಕುಡಿಸುತ್ತಿರುವ ಶಿವಮೂರ್ತಿ ಮುರುಘಾ ಶರಣರು. ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರೂ ಇದ್ದರು. ಚಿತ್ರ: ಭವಾನಿ ಮಂಜು.   

ಚಿತ್ರದುರ್ಗ: ಕಿರಿಯರಿಂದ ಹಿಡಿದು ಹಿರಿಯರವರೆಗೂ ಆವರಣವೊಂದರ ತುಂಬಾ ಜನವೋ ಜನ. ಅದರಲ್ಲಿ ಯುವಕ, ಯುವತಿಯರೇ ಹೆಚ್ಚು. ಏತಕ್ಕಾಗಿ ಈಪಾಟಿ ಆಕರ್ಷಿತರಾಗಿದ್ದಾರೆ ಎಂದು ನೋಡಿದಾಗ ವಿವಿಧ ತಳಿಗಳ ಶ್ವಾನಗಳ ವೈವಿಧ್ಯವೇ ಅಲ್ಲಿತ್ತು...!

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನಕ್ಕೆ ಅಕ್ಷರಶಃ ಅಲ್ಲಿ ನೆರೆದಿದ್ದ ಜನತೆ ಮಾರು ಹೋಗಿದ್ದರು.

ದೇಶದ ಮುಧೋಳ ತಳಿ, ವಿದೇಶಗಳ 15 ತಳಿಗಳ ಶ್ವಾನಗಳು ಸ್ಪರ್ಧಾ ಕಣದಲ್ಲಿ ಮಾಲೀಕರ ಜತೆ ಅತ್ತಿತ್ತ ಓಡಾಡುತ್ತಿದ್ದ ಅವುಗಳ ಗತ್ತು ಗೈರತ್ತನ್ನು ಕಣ್ತುಂಬಿಕೊಳ್ಳಲು ಅನೇಕರು ಇದೇ ಸಂದರ್ಭದಲ್ಲಿ ಉತ್ಸುಕರಾದರು. ಇಡೀ ವಾತಾವರಣ ಜನಾಕರ್ಷಣೆಯ ಕೇಂದ್ರವಾಯಿತು.

ADVERTISEMENT

16 ತಳಿಗಳಿಗೆ ಸೇರಿದ 53 ಶ್ವಾನಗಳನ್ನು ಜನರು ಮುಗಿಬಿದ್ದು ನೋಡಿದರು. ಆರು ತಿಂಗಳ ಚಿಕ್ಕ ನಾಯಿ ಮರಿಗಳಿಂದ ಹಿಡಿದು ಕೆಲ ದೈತ್ಯಾಕಾರದ ಶ್ವಾನಗಳ ದೇಹದಾರ್ಢ್ಯ ಕಂಡು ಜನ ಹುಬ್ಬೇರಿಸಿದರು. ಅಳುಕುತ್ತಲೇ ಆಕರ್ಷಕ ಮೈಮಾಟದ ಶ್ವಾನಗಳಬಳಿ ನಿಂತು ಕೆಲ ಯುವಕ, ಯುವತಿಯರು ‘ಸೆಲ್ಫಿ’ ತೆಗೆದುಕೊಳ್ಳಲು ಸಹ ಮುಂದಾದರು.ಮಾಲೀಕರು ಶ್ವಾನಗಳನ್ನು ವಿಶಿಷ್ಟ ಹೆಸರುಗಳಿಂದ ಕರೆಯುತ್ತಾ ಮುದ್ದಿಸುತ್ತಿದ್ದ ದೃಶ್ಯ ಇಲ್ಲಿ ಸಾಮಾನ್ಯವಾಗಿತ್ತು.

ಮುಧೋಳ, ಸೈಬೇರಿಯನ್ ಹಸ್ಕಿ, ಚೌಚೌ, ಗೋಲ್ಡನ್ ರಿಟ್ರೀವರ್, ಫ್ರಂಚ್ ಬುಲ್ ಡಾಗ್, ಗ್ರೇಟ್ ಡೇನ್, ಬಾಕ್ಸರ್,ಡಾಬರಮನ್, ಜರ್ಮನ್ ಶಫರ್ಡ್,ಶಿಟ್‌ಜೂ,ರ್ಯಾಟ್ ವಿಲ್ಲರ್,ಅಮೆರಿಕನ್ ಪಿಟ್‌ಬುಲ್ ಡಾಗ್,ಲ್ಯಾಬ್ರಡಾರ್ ರಿಟ್ರೀವರ್, ಸ್ಪೇನಿಯಲ್, ಟೀಗಲ್, ಪಗ್‌ ಶ್ವಾನಗಳು ನೋಡುಗರ ಮನಸೂರೆಗೊಳಿಸಿದವು.

ಗಾತ್ರ, ಬಣ್ಣ, ನಡಿಗೆ ಹೀಗೆ ಪ್ರತಿಯೊಂದರಲ್ಲೂ ಭಿನ್ನವಾಗಿದ್ದ ಶ್ವಾನಗಳು ತಮ್ಮ ಮಾಲೀಕರೊಂದಿಗೆ ಸ್ಪರ್ಧೆಯಲ್ಲಿ ವೈಯ್ಯಾರದಿಂದ ಭಾಗವಹಿಸಿದವು. ತಳಿ, ನಡಿಗೆ, ಹಲ್ಲು, ಬಾಲ, ದೇಹದ ರಚನೆ, ಆರೋಗ್ಯ, ಗಾತ್ರ ಮೊದಲಾದ ಅಂಶಗಳನ್ನಾಧರಿಸಿ ತೀರ್ಪುಗಾರರು ವಿವಿಧ ಸ್ಥಾನಗಳನ್ನು ನೀಡಿದರು.

ಚಿತ್ರದುರ್ಗದ ಸುಬ್ರಮಣ್ಯ ಅವರ ಡಾಬರಮನ್ ಶ್ವಾನ ₹ 10 ಸಾವಿರದೊಂದಿಗೆ ಪ್ರಥಮ, ಹೊಳಲ್ಕೆರೆ ತಾಲ್ಲೂಕಿನ ಎಚ್‌ಡಿ ಪುರದ ಮುಧೋಳ ಶ್ವಾನ ದ್ವಿತೀಯ (₹ 7 ಸಾವಿರ) ಹಾಗೂ ದಾವಣಗೆರೆಯ ಫ್ರಂಚ್‌ಬುಲ್ ಶ್ವಾನ ₹ 5 ಸಾವಿರದೊಂದಿಗೆ ಮೂರನೇ ಬಹುಮಾನ ಪಡೆದವು. ಆರು ತಿಂಗಳ ಒಳಗಿನ ಪಪ್ಪಿಸ್ ಶ್ವಾನಗಳ ಸ್ಪರ್ಧೆಯಲ್ಲಿ ಮುಧೋಳ ನಾಯಿಯೂ ಪ್ರಥಮ ಬಹುಮಾನ ಪಡೆದುಕೊಂಡಿತು.

ಬೆಂಗಳೂರಿನ ಸಿಲಿಕಾನ್ ವ್ಯಾಲಿ, ಕ್ಯಾನಲ್ ಕ್ಲಬ್ ಆಫ್‌ ಇಂಡಿಯಾ ಸದಸ್ಯರಾದ ಮಂಜುನಾಥ್, ಪರಮೇಶ್ವರ, ನಾಗೇಶಪ್ಪ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಅಧಿಕಾರಿಗಳು, ಜಿಲ್ಲಾ ಪ್ರಾಣಿ ದಯಾ ಸಂಘ, ಪಶು ವೈದ್ಯಕೀಯ ಸಂಘದ ಪದಾಧಿಕಾರಿಗಳು ಇದ್ದರು.

ಪ್ರದರ್ಶನದಲ್ಲಿ ಭಾಗವಹಿಸಿದ್ದ ಶ್ವಾನಗಳಲ್ಲಿ 3 ಕ್ಕೆ ₹ 1 ಸಾವಿರ ಸಮಾಧಾನಕರ ಬಹುಮಾನ ನೀಡಲಾಯಿತು. ಅರ್ಧ ತಾಸು ತಾತ್ಕಾಲಿಕವಾಗಿ ಸ್ಥಗಿತಗೊಂಡ ಶ್ವಾನ ಪ್ರದರ್ಶನಕ್ಕೆ ಅಲ್ಲಿ ನೆರೆದಿದ್ದ ಕೆಲವರಿಂದ ಬೇಸರ ಕೂಡ ವ್ಯಕ್ತವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.