ADVERTISEMENT

ಲಾರಿ ಡಿಕ್ಕಿ: ಕುರಿಗಾಹಿ, 45 ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 5:10 IST
Last Updated 17 ಡಿಸೆಂಬರ್ 2021, 5:10 IST

ಹೊಳಲ್ಕೆರೆ: ತಾಲ್ಲೂಕಿನ ಕುಡಿನೀರಕಟ್ಟೆ ಸಮೀಪ ಗುರುವಾರ ರಾತ್ರಿ ಲಾರಿಯೊಂದು ಡಿಕ್ಕಿ ಹೊಡೆದು ಹಿರಿಯೂರು ತಾಲ್ಲೂಕಿನ ಧರ್ಮಪುರದ ಕುರಿಗಾಹಿ ಮೂಡ್ಲಪ್ಪ (52) ಮೃತಪಟ್ಟಿದ್ದು, 45 ಕುರಿಗಳೂ ಅಸುನೀಗಿವೆ.

ಮೂಡ್ಲಪ್ಪ ಕುರಿಗಳೊಂದಿಗೆ ಚಿತ್ರದುರ್ಗದ ಕಡೆಯಿಂದ ಪಟ್ಟಣದ ಕಡೆ ಬರುತ್ತಿದ್ದರು. ಆಗ ಚಿತ್ರದುರ್ಗದ ಕಡೆಯಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕುರಿಗಾಹಿ ಮೂಡ್ಲಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಗೆ ಕುರಿಗಳೂ ಸಾವನ್ನಪ್ಪಿವೆ.

ಸಿಪಿಐ ರವೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಕಾರು-ಆಮ್ನಿ ಡಿಕ್ಕಿ: ಇಬ್ಬರ ಸಾವು
ಮೊಳಕಾಲ್ಮುರು:
ತಾಲ್ಲೂಕಿನ ತುಮಕೂರ್ಲಹಳ್ಳಿ ಗೇಟ್ ಬಳಿ ಬುಧವಾರ ರಾತ್ರಿ ಮಾರುತಿ ಆಮ್ನಿ ಹಾಗೂ ಕಾರಿನ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಚಾಮರಾಜನಗರ- ಜೇವರ್ಗಿ ರಾಷ್ಟ್ರೀಯ ಹೆದ್ದಾರಿ 150 ‘ಎ’ ನಲ್ಲಿ ಅಪಘಾತ ನಡೆದಿದ್ದು, ಮೃತರನ್ನು ಆಮ್ನಿ ಚಾಲಕ ಹಾಗೂ ಬಳ್ಳಾರಿಯ ಮಹಿಳಾ ಪೊಲೀಸ್ ಠಾಣೆ ಕಾನ್‌ಸ್ಟೆಬಲ್‌ ಟಿಪ್ಪು ಸುಲ್ತಾನ್ (42) ಮತ್ತು ಬಳ್ಳಾರಿ ನಗರದ ಪಿ. ಸುರೇಶ್ (59) ಎಂದು ಗುರುತಿಸಲಾಗಿದೆ. ಚಳ್ಳಕೆರೆಯಿಂದ ಬಳ್ಳಾರಿಗೆ ಹೋಗುತ್ತಿದ್ದ ಕಾರು ವೇಗವಾಗಿ ರಸ್ತೆಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ನಂತರ ಆಮ್ನಿಗೆ ಅಪ್ಪಳಿಸಿದೆ.

ಮೃತ ಸುರೇಶ್ ಅವರ ಪತ್ನಿ ಪಾರ್ವತಮ್ಮ ಗಾಯಗೊಂಡಿದ್ದು, ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರ ಸಾವು
ಚಳ್ಳಕೆರೆ:
ತಾಲ್ಲೂಕಿನ ಗೋಪನಹಳ್ಳಿ ಬಳಿ ಗರಣಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಕ್ರೂಸರ್ ಮತ್ತು ಮೋಟಾರ್ ಸೈಕಲ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, 7 ಮಂದಿ ಗಾಯಗೊಂಡಿದ್ದಾರೆ.

ತಾಲ್ಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ರಾಜಣ್ಣ (42) ಮತ್ತು ಮಂಜುನಾಥ (24) ಮೃತಪಟ್ಟವರು.

ಕ್ರೂಸರ್ ವಾಹನದ ಚಾಲಕ ಹಿರಿಯೂರಿನಿಂದ ಚಳ್ಳಕೆರೆ ಕಡೆಗೆ ಅತಿವೇಗವಾಗಿ ಓಡಿಸಿಕೊಂಡು ಬಂದು ಮೋಟಾರ್ ಸೈಕಲ್‍ಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿವೆ. ಮೋಟಾರ್ ಸೈಕಲ್ ಸವಾರ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟರು. ಹಿಂಬದಿ ಸವಾರ ರಾಜಣ್ಣ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.

ಕ್ರೂಸರ್‌ ವಾಹನದಲ್ಲಿದ್ದ ಬಳ್ಳಾರಿಯ ಗಣೇಶ್ (29), ಶಾರದ (23), ರಾಮು (50), ವೆಂಕಟೇಶ್ (40), ಕೀರ್ತಿ (23), ಈಶ್ವರಿ (26), ನಿತಿನ್ (18) ಗಾಯಗೊಂಡಿದ್ದು, ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪಿಎಸ್‍ಐ ಮಹೇಶಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.