ADVERTISEMENT

ಸ್ಮರಣ ಶಕ್ತಿಗೆ ಡಿಜಿಟಲ್‌ ಉಪವಾಸ ಮಾಡಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 4:34 IST
Last Updated 14 ನವೆಂಬರ್ 2022, 4:34 IST
ಸಿರಿಗೆರೆಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಟಿ.ಎಸ್‌. ನಾಗಾಭರಣ ಸನ್ಮಾನ ಸ್ವೀಕರಿಸಿದ ಪರಿ.
ಸಿರಿಗೆರೆಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಟಿ.ಎಸ್‌. ನಾಗಾಭರಣ ಸನ್ಮಾನ ಸ್ವೀಕರಿಸಿದ ಪರಿ.   

ಸಿರಿಗೆರೆ: ಇಲ್ಲಿನ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ತರಳಬಾಳು ಬೃಹನ್ಮಠ ಹಾಗೂ ತರಳಬಾಳು ಕಲಾ ಸಂಘದಿಂದ ಭಾನುವಾರ ನಡೆದ ಕರ್ನಾಟಕ ರಾಜ್ಯೋತ್ಸವದ ಎರಡನೆಯ ದಿನದ ಕಾರ್ಯಕ್ರಮದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗಣಕಾಷ್ಟಾಧ್ಯಾಯಿನಿ ತಂತ್ರಾಂಶದ ಪ್ರಾತ್ಯಕ್ಷಿಕೆ ನೀಡಿದರು.

‘ಕನ್ನಡ ನಾಡು ಧರ್ಮಭೂಮಿ, ಕರ್ಮಭೂಮಿ. ಈ ನೆಲದ ಪರಂಪರೆಯಿಂದ ವಿಶ್ವಮಾನವ ಪ್ರಜ್ಞೆ ಬೆಳೆದು ಬಂದಿದ್ದು, ಪಂಪ, ಬಸವಣ್ಣ, ಕುವೆಂಪು ಅವರು ತಮ್ಮ ಕಾವ್ಯಗಳ ಮೂಲಕ ವಿಶ್ವಮಾನವ ತತ್ತ್ವಗಳನ್ನು ಸಾರಿದ್ದಾರೆ. ನಾಳೆಗೆ ಸ್ಫೂರ್ತಿ ಪಡೆಯಲು ನಿನ್ನೆಗಳ ನೆನಪುಗಳು ಅವಶ್ಯಕ’ ಎಂದು ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ
ಅಭಿಪ್ರಾಯಪಟ್ಟರು.

‘ಕನ್ನಡ ಜೀವನ ಬದಲಾಗುವ ಸಂದಿಗ್ಧ ಕಾಲದಲ್ಲಿರುವ ಇಂದಿನ ಮಕ್ಕಳು ಕನ್ನಡ ಕಟ್ಟುವ ಕೆಲಸದ ವಾರಸುದಾರರು. ಕನ್ನಡ ಅನ್ನದ ಭಾಷೆಯಾಗುವ ಕಾಲ ಬರುತ್ತಿದೆ. ವಿದ್ಯಾರ್ಥಿಗಳು ಯಂತ್ರಗಳಿಗೆ ಅವಲಂಬಿತರಾಗಬಾರದು. ನೆನಪಿನ ಶಕ್ತಿ ಹೆಚ್ಚಾಗಲು ಡಿಜಿಟಲ್ ಉಪವಾಸ ಮಾಡುವುದು ಅಗತ್ಯ’ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ADVERTISEMENT

‘ಜಗತ್ತಿನ ಏಳಿಗೆ ಆಗಬೇಕಾದರೆ ಕನ್ನಡಿಗರಿಂದ ಮಾತ್ರ ಸಾಧ್ಯ. ಇಡೀ ಶರೀರವೇ ಕನ್ನಡದಲ್ಲಿ ಆಗಿದೆ ಎಂದು ದ.ರಾ. ಬೇಂದ್ರೆಯವರ ಸಾಹಿತ್ಯಿಕ ಮಾತುಗಳಲ್ಲಿ ತಿಳಿಸಿದರು. ಕನ್ನಡದ ವಾಸ್ತುಶಿಲ್ಪಿಗಳ ರೂವಾರಿ ಕನ್ನಡಿಗರೇ ಆಗಿದ್ದಾರೆ’ ಎಂದು ಧಾರವಾಡದ ಶಿಕ್ಷಣ ತಜ್ಞರಾದ ಸುರೇಶ್ ಕುಲಕರ್ಣಿ ಹೇಳಿದರು.

‘ವಿಡಂಬನೆ, ಗಾಂಭೀರ್ಯ, ಕಾವ್ಯದ ಸೊಬಗು, ಹಾಸ್ಯದ ಲಾಲಿತ್ಯದಿಂದ ಕೂಡಿರುವ ಶ್ರೀಗಳ ‘ಬಿಸಿಲು ಬೆಳದಿಂಗಳು’ ಅಂಕಣ ನನಗೆ ಅಪಾರ ಸ್ಫೂರ್ತಿ ನೀಡಿದೆ. ಇಂಗ್ಲಿಷ್ ವ್ಯವಹಾರದ ಭಾಷೆ ಮಾತ್ರ. ಆದರೆ ಕನ್ನಡ ಕನಸು ಕಟ್ಟುವ ಭಾವನೆಗಳನ್ನು, ಚಿಂತನೆಗಳನ್ನು, ಆಲೋಚನೆಗಳನ್ನು ಬೆಳೆಸುವ ಭಾಷೆ. ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಜೀವಂತವಾಗಿದೆ. ಬೆಂಗಳೂರನ್ನು ನೋಡಿ ಕನ್ನಡ ಸಾಯುತ್ತಿದೆ’ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ನೀಡಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುರವಂತಿಕೆ ಕಲಾವಿದ ಮಹೇಶ್ವರಗೌಡ ಲಿಂಗದಹಳ್ಳಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ದಾವಣಗೆರೆ ಭರತಾಂಜಲಿ ಕಲಾ ಪ್ರದರ್ಶನ ಅಕಾಡೆಮಿ ಹಾಗೂ ಚನ್ನರಾಯಪಟ್ಟಣ ನೃತ್ಯಾಂಜಲಿ ಕಲಾ ನಿಕೇತನ ತಂಡದಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನಗಳು ನಡೆದವು.

‘ಕನ್ನಡ ಭಾಷೆ ಮತ್ತು ಸಾಹಿತ್ಯ’ ವಿಷಯ ಕುರಿತು ಮಾತನಾಡಿದ ವಿದ್ಯಾರ್ಥಿಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು
ಮತ್ತು ಪೋಷಕರು ಬಹುಮಾನ ಪಡೆದರು.

ತರಳಬಾಳು ವಿದ್ಯಾಸಂಸ್ಥೆಯ ಕನ್ನಡ ಶಿಕ್ಷಕರಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆದು ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.