ADVERTISEMENT

ಭಾರತೀಯ ಸಂಸ್ಕೃತಿ ರಕ್ಷಕ ಶಿವಾಜಿ

ಸರ್ಕಾರಿ ಕಲಾ ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಎಚ್.ಗುಡ್ಡದೇಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 20:15 IST
Last Updated 19 ಫೆಬ್ರುವರಿ 2020, 20:15 IST
ಛತ್ರಪತಿ ಶಿವಾಜಿ ಮಹರಾಜರ 390ನೇ ಜಯಂತಿ ಅಂಗವಾಗಿ ಚಿತ್ರದುರ್ಗದಲ್ಲಿ ಬುಧವಾರ ಭವ್ಯ ಮೆರವಣಿಗೆ ನಡೆಯಿತು.
ಛತ್ರಪತಿ ಶಿವಾಜಿ ಮಹರಾಜರ 390ನೇ ಜಯಂತಿ ಅಂಗವಾಗಿ ಚಿತ್ರದುರ್ಗದಲ್ಲಿ ಬುಧವಾರ ಭವ್ಯ ಮೆರವಣಿಗೆ ನಡೆಯಿತು.   

ಚಿತ್ರದುರ್ಗ: ಧರ್ಮದ ವಿಚಾರ ಮುನ್ನೆಲೆಗೆ ಬಂದು 17ನೇ ಶತಮಾನದಲ್ಲಿ ದೇಶದಲ್ಲಿ ಅಶಾಂತಿ ನೆಲೆಸಿತ್ತು. ಈ ಕಾಲಘಟ್ಟದಲ್ಲಿ ಭಾರತೀಯ ಸಂಸ್ಕೃತಿಯ ರಕ್ಷಕರಾಗಿ ಕೆಲಸ ಮಾಡಿದ ಪ್ರಮುಖರು ಛತ್ರಪತಿ ಶಿವಾಜಿ ಎಂದು ಸರ್ಕಾರಿ ಕಲಾ ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಎಚ್.ಗುಡ್ಡದೇಶ್ವರಪ್ಪ ಅಭಿಪ್ರಾಯಪಟ್ಟರು.

ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹರಾಜರ 390ನೇ ಜಯಂತಿ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

‘ಭಾರತದ ಮೇಲೆ ಪರಕೀಯರ ದಾಳಿ ಹೆಚ್ಚಾಯಿತು. ಬ್ರಿಟಿಷರು ಹಾಗೂ ನೆರೆಯ ರಾಷ್ಟ್ರಗಳ ದಾಳಿಯಿಂದ ಭಾರತಕ್ಕೆ ಭಾರಿ ಹೊಡೆತ ಬಿದ್ದಿತ್ತು. ಮೊಘಲರು ಸೇರಿದಂತೆ ಹಲವು ಸುಲ್ತಾನರು ಹಿಂದೂ ಧರ್ಮದ ವಿನಾಶ ಬಯಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಧರ್ಮ ರಕ್ಷಣೆಗೆ ಮುಂದಾದವರು ಶಿವಾಜಿ’ ಎಂದು ವಿವರಿಸಿದರು.

ADVERTISEMENT

‘ಮಹಾರಾಷ್ಟ್ರದ ಶಿವನೇರಿ ದುರ್ಗದಲ್ಲಿ 1622ರ ಫೆ.19 ರಂದು ಶಿವಾಜಿ ಜನಿಸಿದರು. ಧನುರ್ವಿದ್ಯೆ, ಯುದ್ಧ ಚತುರತೆ, ತಂತ್ರಗಾರಿಕೆಯನ್ನು ದಾದಾಜಿ ಕೊಂಡದೇವ ಅವರು ಶಿವಾಜಿಗೆ ಧಾರೆ ಎರೆದರು. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬೆಟಾಲಿಯನ್ ಪರಿಕಲ್ಪನೆ ಕೊಟ್ಟವರು ಶಿವಾಜಿ. ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಅನೇಕ ರಾಜರನ್ನು ಸೋಲಿಸಿದರು. ಶೋಷಿತ ಸಮುದಾಯಗಳಿಗೆ ತೆರಿಗೆಯಿಂದ ರಕ್ಷಣೆ ಒದಗಿಸಿದರು. ಅವರ ಘನತೆ, ಸ್ವಾಭಿಮಾನ ಹಾಗೂ ಆದರ್ಶ ಸರ್ವಕಾಲಿಕ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಸಂಗಪ್ಪ, ‘ಮೊಘಲರು, ಸುಲ್ತಾನರು ಹಾಗೂ ಬ್ರಿಟಿಷರು ದೇಶ ಕೊಳ್ಳೆಹೊಡೆಯುವ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿವಾಜಿ ಸಾಮ್ರಾಜ್ಯ ಸ್ಥಾಪಿಸಿದರು. ಉತ್ತಮ ಆಡಳಿತಗಾರ ಎನಿಸಿಕೊಂಡರು. ಶಿವಾಜಿ ಧೈರ್ಯ, ಆಡಳಿತದ ಚತುರತೆ, ಸಾಹಸಗಾಥೆ ಪ್ರತಿಯೊಬ್ಬರಿಗೂ ಮಾದರಿ. ಅವರ ಆದರ್ಶ ಪಾಲಿಸಿದರೆ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಬಹುದು’ ಎಂದು ಅಭಿಪ್ರಾಯಪಟ್ಟರು.

‘ರಾಷ್ಟ್ರ ನಿರ್ಮಾಣದಲ್ಲಿ ಶಿವಾಜಿ ಅವರ ಪಾತ್ರ ಇತಿಹಾಸದಲ್ಲಿ ಅಜರಾಮರವಾಗಿದೆ. ಸಾಮ್ರಾಜ್ಯ ಯುಗದಲ್ಲಿಯೇ ಶಿವಾಜಿಯವರು ಅಗ್ರಗಣ್ಯರು. ಧೈರ್ಯದ ಸಾಕಾರಮೂರ್ತಿಯಾಗಿದ್ದ ಶಿವಾಜಿ, ಶಿಸ್ತುಬದ್ಧ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದರು. ಮಕ್ಕಳು ಶ್ರೇಷ್ಠ ವ್ಯಕ್ತಿಯಾಗಿ ರೂಪುಗೊಳ್ಳಲು ಜೀಜಾಬಾಯಿ ಅವರಂತಹ ತಾಯಿ ಮುಖ್ಯ. ಶಿವಾಜಿ ಸಾಧನೆಗಳ ಹಿಂದೆ ತಾಯಿಯ ಶ್ರಮವಿದೆ’ ಎಂದರು.

ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ರಂಗಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಮರಾಠ ಸಮುದಾಯದ ಯುವ ಸಂಘಟನೆ ಕಾರ್ಯದರ್ಶಿ ನಿತಿನ್ ಜಾಧವ್, ಜೀಜಾಮಾತಾ ಮಹಿಳಾ ಮಂಡಳಿ ಅಧ್ಯಕ್ಷೆ ಉಷಾ ಬಾಯಿ, ಯುವ ಸಂಘಟನೆ ಕಾರ್ಯದರ್ಶಿ ಲೋಹಿತ್, ಮರಾಠ ಯುವಕ ಸಂಘದ ಮುಖಂಡ ಮಂಜುನಾಥ್ ಗಾಯಕ್‍ವಾಡ್ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಶಿವಾಜಿ ಭಾವಚಿತ್ರದ ಮೆರವಣಿಗೆ ನಗರದಲ್ಲಿ ಅದ್ದೂರಿಯಾಗಿ ನಡೆಯಿತು. ಏಕನಾಥೇಶ್ವರಿ ಪಾದಗಟ್ಟೆಯಿಂದ ಆರಂಭವಾದ ಮೆರವಣಿಗೆ ಸಂತೇಪೇಟೆ, ಗಾಂಧಿವೃತ್ತ, ಎಸ್‍ಬಿಐ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತರಾಸು ರಂಗಮಂದಿರ ತಲುಪಿತು. ಪಟ ಕುಣಿತ, ಕಹಳೆ, ನಾಸಿಕ್ ಡೊಳ್ಳು ಕಲಾತಂಡಗಳು ಮೆರವಣೆಗೆಗೆ ಮೆರುಗು ನೀಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.