ADVERTISEMENT

ಚಿತ್ರದುರ್ಗ: ಗೆಹಲೋತ್‌ ಸಂಚಾರಕ್ಕಾಗಿ ಎರಡು ಗಂಟೆ ಬಾಗಿಲು ಮುಚ್ಚಿದ ಅಂಗಡಿಗಳು

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಸಂಚಾರಕ್ಕೆ ಬಿಗಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 4:08 IST
Last Updated 26 ನವೆಂಬರ್ 2021, 4:08 IST
ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಸಮೀಪದ ಬಿ.ಡಿ. ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.
ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಸಮೀಪದ ಬಿ.ಡಿ. ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.   

ಚಿತ್ರದುರ್ಗ: ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರ ಸಂಚಾರಕ್ಕೆ ಬಿಗಿ ಭದ್ರತೆ ಕಲ್ಪಿಸಿದ್ದ ಪೊಲೀಸರು ಸುಮಾರು ಎರಡು ಗಂಟೆ ಅಂಗಡಿಗಳ ಬಾಗಿಲು ಮುಚ್ಚಿಸಿದ್ದರು.

ಶಿವಮೊಗ್ಗದಿಂದ ಬೆಂಗಳೂರಿಗೆ ಮರಳುತ್ತಿದ್ದ ರಾಜ್ಯಪಾಲರು ಮಧ್ಯಾಹ್ನದ ವಿಶ್ರಾಂತಿಗೆ ಚಿತ್ರದುರ್ಗದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ್ದರು. 15 ನಿಮಿಷದ ಭೇಟಿಗೆ ಅವರು ಸಂಚರಿಸುವ ಮಾರ್ಗದಲ್ಲಿ ಒಂದು ಗಂಟೆ ಜನ ಹಾಗೂ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ಪೂರ್ವ ನಿಗದಿತ ಕಾರ್ಯಕ್ರಮಕ್ಕೆ ಶಿವಮೊಗ್ಗಕ್ಕೆ ತೆರಳುತ್ತಿದ್ದ ರಾಜ್ಯಪಾಲರು ಬುಧವಾರ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ್ದರು.
ಗುರುವಾರ ಬೆಂಗಳೂರಿಗೆ ಮರಳುವ ಸಂದರ್ಭದಲ್ಲಿ ಮತ್ತೊಮ್ಮೆ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ
ಪಡೆದರು.

ADVERTISEMENT

ಶಿವಮೊಗ್ಗ ಮಾರ್ಗವಾಗಿಚಿತ್ರದುರ್ಗಕ್ಕೆ ಬಂದ ರಾಜ್ಯಪಾಲರನ್ನುಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಪ್ರವಾಸಿ ಮಂದಿರಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ, ಚಳ್ಳಕೆರೆ ಗೇಟ್‌ನಿಂದ ಪ್ರವಾಸಿ ಮಂದಿರದವರೆಗಿನ ರಸ್ತೆ ಬದಿಯ ಎಲ್ಲ ಅಂಗಡಿಗಳನ್ನು ಮಧ್ಯಾಹ್ನ 1ಕ್ಕೆ ಮುಚ್ಚಿಸಲಾಯಿತು.

ಬಿ.ಡಿ. ರಸ್ತೆ ಸಂಪರ್ಕಿಸುವ ಮಾರ್ಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಇಟ್ಟು ಸಂಚಾರ ನಿರ್ಬಂಧಿಸಲಾಯಿತು. ಮಧ್ಯಾಹ್ನ 3ಕ್ಕೆ ಪ್ರವಾಸಿ ಮಂದಿರಕ್ಕೆ ಬಂದ ರಾಜ್ಯಪಾಲರಿಗೆ ಪೊಲೀಸರು ಗೌರವ ಶ್ರೀರಕ್ಷೆ ನೀಡಿದರು. ರಾಜ್ಯಪಾಲರಿಗೆ ಜಿಲ್ಲಾಡಳಿತ ತಿಂಡಿ ಹಾಗೂ ಕಾಫಿ ವ್ಯವಸ್ಥೆ ಮಾಡಿತ್ತು. ದಾವಣಗೆರೆಯಿಂದ ತರಿಸಿದ್ದ ಮಂಡಕ್ಕಿ, ಉಪ್ಪಿಟ್ಟು, ಬಜ್ಜಿ ಸೇವಿಸಿ ಮಧ್ಯಾಹ್ನ 3.15ಕ್ಕೆ ಬೆಂಗಳೂರಿಗೆ ಪ್ರಯಾಣ ಮುಂದುವರಿಸಿದರು.

ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ. ನಂದಿನಿದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.