ಮೊಳಕಾಲ್ಮುರು: ತಾಲ್ಲೂಕಿನ ತಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋನಾಪುರ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, 9 ದಿನಗಳಿಂದ ಕಾಮಗಾರಿ ಪ್ರಗತಿಯಲ್ಲಿದೆ.
ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಅಡಿ ₹ 19.90 ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಕೂಲಿ ಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ಸಿಗಬೇಕು ಎಂಬ ಉದ್ದೇಶದಿಂದ ಮತ್ತು ಅಂತರ್ಜಲ ಹೆಚ್ಚಳಕ್ಕಾಗಿ ಹೂಳೆತ್ತುವ ಕಾರ್ಯ ಆಯ್ಕೆ ಮಾಡಿಕೊಂಡಿದ್ದು, 625 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ
ಕೆ.ಆರ್. ಪ್ರಕಾಶ್ ಮಾಹಿತಿ ನೀಡಿದರು.
ಕ್ರಿಯಾ ಯೋಜನೆ ಹಾಗೂ ನೀಡಿರುವ ಮಾನದಂಡದ ಅಳತೆ ಪ್ರಕಾರ ಕಾರ್ಮಿಕರು ಕೆಲಸ ಮಾಡಬೇಕು. ಇದರಿಂದ ಸಮಯಕ್ಕೆ ಸರಿಯಾಗಿ ಕೂಲಿ ನೀಡಲು ತಾಂತ್ರಿಕವಾಗಿ ಅನುಕೂಲವಾಗಲಿದೆ. ಕಳೆದ ವರ್ಷವೂ ಈ ಕೆರೆ ಹೂಳು ಎತ್ತುವ ಕಾರ್ಯಕ್ಕೆ ₹ 6 ಲಕ್ಷ ಮೀಸಲಿಡಲಾಗಿತ್ತು ಎಂದು ಅವರು ಹೇಳಿದರು.
ಬರದ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಲು ಅಂತರ್ಜಲ ಹಾಗೂ ಪರಿಸರ ಸಂರಕ್ಷಣೆ ಕಾಮಗಾರಿಗಳಿಗೆ ಒತ್ತು ನೀಡಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೊಣೆ ಹೊತ್ತವರು ಈ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಪಂಚಾಯಿತಿ ಯೋಜನಾ ನಿರ್ದೇಶಕ ಗಣೇಶ್, ಪಿಡಿಒ ಗುಂಡಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.