ADVERTISEMENT

ಬಿಸಿಲ ಬೇಗೆಗೆ ಒಣಗಿದ ರೇಷ್ಮೆ ತೋಟ

ಮೊಳಕಾಲ್ಮುರು: ಶೇ 25ರಷ್ಟು ಬೆಳೆ ನಷ್ಟ: ಬೆಳೆಗಾರರ ಆತಂಕ

ಕೊಂಡ್ಲಹಳ್ಳಿ ಜಯಪ್ರಕಾಶ
Published 30 ಮಾರ್ಚ್ 2024, 22:07 IST
Last Updated 30 ಮಾರ್ಚ್ 2024, 22:07 IST
ನೀರಿಲ್ಲದೆ ಒಣಗಿ ಹೋಗಿರುವ ರೇಷ್ಮೆ ಬೆಳೆ
ನೀರಿಲ್ಲದೆ ಒಣಗಿ ಹೋಗಿರುವ ರೇಷ್ಮೆ ಬೆಳೆ   

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ಬಿಸಿಲಿನ ಪ್ರಖರತೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ರೇಷ್ಮೆ ಕೃಷಿ ಸಂಕಷ್ಟಕ್ಕೆ ಸಿಲುಕಿದೆ.

ಕಳೆದ ವರ್ಷ ವಾಡಿಕೆಯಷ್ಟು ಮಳೆ ಸುರಿಯಲಿಲ್ಲ. ಇದರಿಂದ ಅಂತರ್ಜಲ ಮಟ್ಟ  ಕುಸಿದಿದ್ದು, ಕೃಷಿಕರಿಗೆ ರೇಷ್ಮೆ ತೋಟಗಳನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕು ರೇಷ್ಮೆ ಬಿಳಿಗೂಡು (ಬೈವೋಲ್ಟೇನ್)‌ ಉತ್ಪಾದನೆಗೆ ಖ್ಯಾತಿ ಪಡೆದಿವೆ. ಇಲ್ಲಿ ಗುಣಮಟ್ಟದ ಗೂಡು ಉತ್ಪಾದನೆಯಾಗುತ್ತದೆ. ರಾಮನಗರದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯ ಜತೆಗೆ ಅಧಿಕ ದರಕ್ಕೂ ಮಾರಾಟವಾಗುತ್ತಿದೆ.

ADVERTISEMENT

‘ಈ ಬಾರಿ ಬಿಸಿಲಿನ ತಾಪದಿಂದಾಗಿ ಶೇ 25ಕ್ಕೂ ಹೆಚ್ಚು ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಗೂಡಿನ ಗುಣಮಟ್ಟ ಕುಸಿತದಿಂದ ದರ ಇಳಿಕೆಯಾಗುತ್ತಿದೆ. ಒಂದು ವರ್ಷದ ಹಿಂದೆ ಬಿಳಿಗೂಡಿನ ದರ ಪ್ರತಿ ಕೆ.ಜಿ.ಗೆ ₹1,000 ದಾಟಿತ್ತು. ಈಗ ₹450ರಿಂದ ₹600ಕ್ಕೆ ಇಳಿಕೆಯಾಗಿದೆ’ ಎಂದು ರೈತರು ಹೇಳಿದರು.

‘ತಾಲ್ಲೂಕಿನಲ್ಲಿ 700 ಹೆಕ್ಟೇರ್‌ ಪ್ರದೇಶದಲ್ಲಿ ರೇಷ್ಮೆ (ಹಿಪ್ಪುನೇರಳೆ) ನಾಟಿ ಮಾಡಲಾಗಿದೆ. ಮಾಸಿಕ 35,000ದಿಂದ 40,000 ಮೊಟ್ಟೆ ಚಾಕಿ ಮಾಡಲಾಗುತ್ತದೆ. ಪ್ರತಿ ತಿಂಗಳು 35,000ದಿಂದ 40,000 ಕೆ.ಜಿ.ಯಷ್ಟು ಬಿಳಿಗೂಡು ಉತ್ಪಾದನೆಯಾಗುತ್ತಿದೆ. ಬಿಸಿಲಿನಿಂದಾಗಿ ಅಂದಾಜು 10,000 ಕೆ.ಜಿಯಷ್ಟು ಉತ್ಪಾದನೆ ಕುಸಿತವಾಗಿದೆ’ ಎಂದು ರೇಷ್ಮೆ ಇಲಾಖೆಯ ತಾಲ್ಲೂಕು ವಿಸ್ತರಣಾಧಿಕಾರಿ ಮಹೇಶ್‌ ತಿಳಿಸಿದರು. 

‘ಬಿಸಿಲಿನ ಪ್ರಖರತೆಗೆ ಸೊಪ್ಪು ಬಾಡುತ್ತಿದೆ. ಗುಣಮಟ್ಟವಿಲ್ಲದ ಸೊಪ್ಪು ತಿನ್ನುವ ರೇಷ್ಮೆ ಹುಳುಗಳಿಗೆ ‘ಸಪ್ಪೆರೋಗ’ ಬಾಧಿಸುತ್ತದೆ ಎಂಬ ಕಾರಣಕ್ಕೆ ಸೊಪ್ಪು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಸಾಮಾನ್ಯವಾಗಿ ರೇಷ್ಮೆ ಕೃಷಿಗೆ 25ರಿಂದ 29 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಬೇಕು. ಈ ಬೇಸಿಗೆಯಲ್ಲಿ ಉಷ್ಣಾಂಶ 37ರಿಂದ 38 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಇದು ರೇಷ್ಮೆ ಕೃಷಿಯ ಹಿನ್ನಡೆಗೆ ಕಾರಣವಾಗಿದೆ. ಗೂಡಿನ ಗುಣಮಟ್ಟ ಹಾಗೂ ಗಾತ್ರದ ಮೇಲೂ ಪರಿಣಾಮ ಬೀರಿದೆ’ ಎಂದು ಮಾಹಿತಿ ನೀಡಿದರು. 

ಕಾರ್ಮಿಕರ ಕೊರತೆ ರೋಗಬಾಧೆ ಗುಣಮಟ್ಟವಿಲ್ಲದ ಗೂಡು ನೀರಿನ ಸಮಸ್ಯೆಯಿಂದ ಬೇಸತ್ತಿರುವ ಬೆಳೆಗಾರರು ಮಳೆಗಾಲದ ತನಕ ರೇಷ್ಮೆ ಕೃಷಿಯ ಸಹವಾಸವೇ ಬೇಡ ಎಂದು ಕೈಚೆಲ್ಲುತ್ತಿದ್ದಾರೆ. ಹಲವರು ಸೊಪ್ಪು ಕಟಾವು ಮಾಡದೇ ಹಾಗೆಯೇ ಬಿಟ್ಟಿದ್ದಾರೆ
– ಮಹೇಶ್‌ ವಿಸ್ತರಣಾಧಿಕಾರಿ ತಾಲ್ಲೂಕು ರೇಷ್ಮೆ ಇಲಾಖೆ
ಬಹುತೇಕ ಕೊಳವೆಬಾವಿಗಳು ಬತ್ತುತ್ತಿವೆ. ಲಕ್ಷಾಂತರ ವೆಚ್ಚದಲ್ಲಿ ಹುಳು ಸಾಕಣೆ ಮನೆಗಳನ್ನು ಕಟ್ಟಿಸಿ ರೇಷ್ಮೆ ಕೃಷಿಗೆ ಕೈ ಹಾಕಿದ್ದೇವೆ. ದರ ಕುಸಿತ ಇಳುವರಿ ಕುಂಠಿತ ಸತತ ರೋಗಬಾಧೆಯಿಂದ ಬೇಸತ್ತಿದ್ದೇವೆ. ಅಂತರ್ಜಲದ ಕೊರತೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ
–ಎಸ್.ಕೆ. ಗುರುಲಿಂಗಪ್ಪ ಬೆಳೆಗಾರ 

ಸಿಬ್ಬಂದಿ ಕೊರತೆ

ಮೊಳಕಾಲ್ಮುರು ತಾಲ್ಲೂಕಿನಲ್ಲಿ ರೇಷ್ಮೆ ಕೃಷಿ ಬಗ್ಗೆ ಬೆಳೆಗಾರರಿಗೆ ಅಗತ್ಯ ಮಾರ್ಗದರ್ಶನ ನೀಡಬೇಕಿದ್ದ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಇಲ್ಲಿನ ಕಚೇರಿಗೆ 15ಕ್ಕೂ ಹೆಚ್ಚು ಹುದ್ದೆಗಳು ಮಂಜೂರಾಗಿವೆ. ಈ ಪೈಕಿ ಒಬ್ಬ ವಿಸ್ತರಣಾಧಿಕಾರಿ ಮಾತ್ರ ಇದ್ದಾರೆ. ಅವರನ್ನೂ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣಾ ಕಾರ್ಯಕ್ಕೆ ನಿಯೋಜಿಸಲಾಗಿದ್ದು ಕಚೇರಿ ಬಾಗಿಲು ತೆರೆಯುವವರೂ ಇಲ್ಲದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.