
ಸಿರಿಗೆರೆ: ಮಧ್ಯ ಕರ್ನಾಟಕದ ಭಕ್ತರ ಆರಾಧ್ಯ ದೈವ ಶಿವನಾರದಮುನಿ ನೂತನ ದೇವಾಲಯ ನಿರ್ಮಾಣಕ್ಕೆ ಜನವರಿ 19ರಂದು ಬೆಳಿಗ್ಗೆ 10 ಗಂಟೆಗೆ ಶಿಲಾನ್ಯಾಸ ನಡೆಯಲಿದೆ. ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಸಿರಿಗೆರೆಯ ಪ್ರವೇಶದ್ವಾರದಲ್ಲಿಯೇ ದಶಕಗಳ ಹಿಂದೆ ನಿರ್ಮಾಣವಾಗಿದ್ದ ದೇವಾಲಯ ಮತ್ತು ಅದಕ್ಕೆ ಹೊಂದಿಕೊಂಡಿರುವ ಸಮುದಾಯ ಭವನವನ್ನು ಈಗಾಗಲೇ ತೆರವುಗೊಳಿಸಲಾಗಿದೆ. ದೇವತಾಮೂರ್ತಿಯನ್ನು ತಾತ್ಕಾಲಿಕವಾಗಿ ಕೃಷಿ ಸಹಕಾರ ಸಂಘದದ ಸಮೀಪದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಚೌಳರ ಕಾಲದ ವಾಸ್ತುಶಿಲ್ಪವನ್ನು ಆಧರಿಸಿ ದೇವಾಲಯ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಕಲ್ಲುಗಳನ್ನೇ ಬಳಸಿ ಆಕರ್ಷಕವಾಗಿ ದೇವಾಲಯ ನಿರ್ಮಾಣ ಮಾಡುವ ಉದ್ದೇಶ ಇದೆ. ನೂತನ ದೇವಾಲಯದಲ್ಲಿ 3 ಮುಖಮಂಟಪಗಳು, ಮಹಾಮಂಟಪ, ಗರ್ಭಗುಡಿ, ಗರ್ಭಗುಡಿಯ ಸುತ್ತ ಪ್ರಾಂಗಣ, ದೇವಾಲಯದ ಸುತ್ತ 10 ಅಡಿಯ ಪ್ರಾಂಗಣ ಇರುತ್ತದೆ.
ದೇವಾಲಯದ ಗರ್ಭಗುಡಿಯ ಮೇಲೆ ಗೋಪುರ ಇರುವಂತೆಯೇ ಮುಂಟಪಗಳ ಮೇಲೆಯೂ ಗೋಪುರಗಳನ್ನು ನಿರ್ಮಾಣ ಮಾಡಲಾಗುವುದು. ದೇವಾಲಯದ ಸನಿಹವೇ ದೀಪಸ್ತಂಭವೂ ಇರಲಿದೆ. ದೇವಾಲಯದ ನಿರ್ಮಾಣ ವೆಚ್ಚ ₹5.50 ಕೋಟಿ ಎಂದು ನಿರ್ಧರಿಸಲಾಗಿದೆ. ಬೇರೆ ಬೇರೆ ಭಾಗದಲ್ಲಿ ನೆಲೆಸಿರುವ ಭಕ್ತರು ಈಗಾಗಲೇ ಮುಕ್ತವಾಗಿ ನಿರ್ಮಾಣಕ್ಕೆ ತಮ್ಮ ಕಾಣಿಕೆಯನ್ನು ಸಲ್ಲಿಸುತ್ತಿದ್ದಾರೆ’ ಎಂದು ಸಿ.ಆರ್. ನಾಗರಾಜ್ ತಿಳಿಸಿದರು.
ದೊಡ್ಡಬಳ್ಳಾಪುರ ಸಮೀಪದ ಕೊಯಿರಾ ಹಾಗೂ ಶಿರಾ ಸಮೀಪದ ಮದ್ದನಾಯಕನಹಳ್ಳಿ ಶಿಲ್ಪಗಳನ್ನು ನಿರ್ಮಾಣಕ್ಕೆ ಬಳಸಲಾಗುವುದು. ರಾಜ್ಯದಲ್ಲಿ ಹಲವು ದೇವಾಲಯಗಳನ್ನು ನಿರ್ಮಿಸಿರುವ ಕಾರ್ಕಳ ಮೂಲದ ನಾಗರಾಜಚಾರಿ ತಂಡದವರು ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.