
ಸಿರಿಗೆರೆ: ‘ತರಳಬಾಳು ಮಠದ ಆಸ್ತಿ, ಜವಾಬ್ದಾರಿಗಳು ಕಳೆದ 50 ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆದಿವೆ. ರೈತ ಕೆ.ಜಿ.ಯಷ್ಟು ಬೀಜ ಬಿತ್ತಿ ಕ್ವಿಂಟಲ್ ರೂಪದಲ್ಲಿ ಬೆಳೆ ಬೆಳೆಯುವಂತೆ ಮಠದ ಆಸ್ತಿ, ಆರ್ಥಿಕ ಚಟುವಟಿಕೆಗಳು ಬೆಳೆದಿವೆ’ ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಗುರುಶಾಂತೇಶ್ವರ ದಾಸೋಹ ಸಭಾಭವನದಲ್ಲಿ ಭಾನುವಾರ ನಡೆದ ತರಳಬಾಳು ಜಗದ್ಗುರು ಮಠ, ವಿದ್ಯಾಸಂಸ್ಥೆ, ಸಾಧು ಸದ್ಧರ್ಮ ವೀರಶೈವ ಸಂಘ ಹಾಗೂ ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆಗಳ ವಾರ್ಷಿಕ ಮಹಾಸಭೆಯಲ್ಲಿ ಶ್ರೀಗಳು ಮಠ ಮತ್ತು ಅದರ ಅಂಗಸಂಸ್ಥೆಗಳ ಬೆಳವಣಿಗೆಯ ವಿವರಗಳನ್ನು ನೀಡಿದರು.
‘1980ರ ಆಸುಪಾಸಿನಲ್ಲಿ ತರಳಬಾಳು ಮಠದ ಆಸ್ತಿ ₹49 ಲಕ್ಷ ಇತ್ತು. ವಿದ್ಯಾಸಂಸ್ಥೆಯದ್ದು ₹52.65 ಲಕ್ಷ ಇತ್ತು. ಈ ದಿನ ಮಂಡಿಸಿದ ಲೆಕ್ಕದ ಪ್ರಕಾರ ಮಠದ ಆಸ್ತಿ ₹271.76 ಕೋಟಿ, ವಿದ್ಯಾಸಂಸ್ಥೆಯ ಆಸ್ತಿ ₹372 ಕೋಟಿ ದಾಟಿದೆ. ಇದು ಮಠ ಮತ್ತು ಸಂಸ್ಥೆಯ ಬೆಳವಣಿಗೆಯಲ್ಲವೇ’ ಎಂದು ಮಠವನ್ನು ವಿರೋಧಿಸುವ ಗುಂಪಿನ ಜನರನ್ನು ಪ್ರಶ್ನಿಸಿದರು.
ತರಳಬಾಳು ಮಠ ಗ್ರಾಮೀಣ ಭಾಗದಲ್ಲಿ ತಮ್ಮಷ್ಟಕ್ಕೆ ದುಡಿಮೆ ಮಾಡಿಕೊಂಡು ಶ್ರದ್ಧೆ, ಭಕ್ತಿ ಮತ್ತು ನಿಷ್ಠೆಯನ್ನು ತೋರುವ ರೈತ ಸಮುದಾಯದವರ ಮಠ. ಇದು ಪೇಟೆವಾಸಿಗಳ ಮಠವಲ್ಲ. ನಗರಗಳಲ್ಲಿ ವಾಸಿಸುತ್ತಿರುವ ಕೆಲವರು 2020ರಿಂದ ಚಿತ್ರದುರ್ಗದ ನ್ಯಾಯಾಲಯದಲ್ಲಿ ಮಠದ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಮೊಕದ್ದಮೆಯ ಜೊತೆಗಿದ್ದ 22 ಮಧ್ಯಂತರ ಅರ್ಜಿಗಳೆಲ್ಲವೂ ನಿರಾಧಾರ ಎಂದು ಕೋರ್ಟ್ ತೀರ್ಪು ನೀಡಿದೆ. ಈ ಮಧ್ಯೆ ಮೂಲ ಮೊಕದ್ದಮೆಯ ಮೊದಲ ಅರ್ಜಿದಾರರಾದ ಎಸ್.ಎಸ್. ಪಾಟೀಲ್ ಪ್ರಕರಣದಿಂದ ಹಿಂದಕ್ಕೆ ಸರಿಯಲು ಚಿತ್ರದುರ್ಗ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರೂ, ಅವರ ಜೊತೆಗಿದ್ದ ಜನರು ತಕರಾರು ಸಲ್ಲಿಸಿ, ಬೆಂಗಳೂರು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ ಎಂದು ವಿವರಿಸಿದರು.
ಶೈಕ್ಷಣಿಕ ಪ್ರವಾಸಕ್ಕೆ ನಿರ್ಬಂಧ: ‘ತರಳಬಾಳು ವಿದ್ಯಾಸಂಸ್ಥೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ನಿರ್ಬಂಧ ವಿಧಿಸಲಾಗಿದೆ. ಇನ್ನು ಮುಂದೆ ನಮ್ಮ ಸಂಸ್ಥೆಯಲ್ಲಿ ಶೈಕ್ಷಣಿಕ ಪ್ರವಾಸ ಇರುವುದಿಲ್ಲ. ಸಂಸ್ಥೆಯು ಮೈಸೂರಿನಲ್ಲಿ ನಡೆಸುತ್ತಿರುವ ಶಾಲೆಯ ಒಬ್ಬ ವಿದ್ಯಾರ್ಥಿ ಪ್ರವಾಸದ ವೇಳೆ ಮೃತಪಟ್ಟಿದ್ದು, ಚಿತ್ರದುರ್ಗದ ಬಳಿ ಈಚೆಗೆ ಸಂಭವಿಸಿದ ಅಪಘಾತದಲ್ಲಿ 7 ಜನರು ಸಜೀವವಾಗಿ ದಹನವಾಗಿದ್ದು ಮನಕಲಕುವ ಘಟನೆಯಾಗಿವೆ’ ಎಂದು ಶ್ರೀಗಳು ತಿಳಿಸಿದರು.
ಮಠದ ಭಕ್ತ ಮಾಹಿತಿ ಸಂಗ್ರಹ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಠದ ಭಕ್ತರು ಹಂಚಿಹೋಗಿದ್ದಾರೆ. ಅವರ ವಿವರಗಳನ್ನು ದಾಖಲಿಸಲು ಚಿಂತಿಸಲಾಗುತ್ತಿದ್ದು, ತಾಲ್ಲೂಕು ಶಿಷ್ಯ ಮಂಡಳಿಯ ಮೂಲಕ ಮಠದ ಶಿಷ್ಯರ ಮಾಹಿತಿಯನ್ನು ಸಂಗ್ರಹಿಸಲಾಗುವುದು. ಪ್ರಾಯೋಗಿಕವಾಗಿ ಸಿರಿಗೆರೆಯಲ್ಲಿರುವ ಭಕ್ತರ ಮಾಹಿತಿ ಸಂಗ್ರಹಿಸಿ, ಪುನರಾವಲೋಕಿಸಿ, ಎಲ್ಲರ ಮಾಹಿತಿ ಸಂಗ್ರಹಿಸಲಾಗುವುದು ಎಂದು ಶ್ರೀಗಳು ಪ್ರಕಟಿಸಿದರು.
ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್, ಸಾಧು ಸದ್ಧರ್ಮ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಮಾಗನೂರು ಸೋಮಣ್ಣ, ನಾಗರಾಜ ಹಂಪೋಳ್, ಕೆ.ಪಿ. ಬಸವರಾಜ್ ಹಾಗೂ ಇತರರು ವೇದಿಕೆಯಲ್ಲಿದ್ದರು. ನವೀನ್, ಶಿವಯೋಗಿ, ಟಿ.ಎನ್. ದೇವರಾಜ್ ಲೆಕ್ಕಪತ್ರಗಳನ್ನು ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.