
ಮೊಳಕಾಲ್ಮುರು: ‘ಮುಂದಿನ ಅವಧಿಗೆ ನಡೆಯುವ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನನ್ನ ಗುರಿಯಾಗಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿ ಎಂಬ ವದಂತಿ ಸರಿಯಲ್ಲ’ ಎಂದು ರಾಜ್ಯಮಟ್ಟದ ಸಾವಯವ ಕೃಷಿ ಉನ್ನತ ಮಟ್ಟದ ಸಮಿತಿ ಮಾಜಿ ಅಧ್ಯಕ್ಷ ಬಿ. ಸೋಮಶೇಖರ್ ಸ್ಪಷ್ಟಪಡಿಸಿದರು.
‘ಕಳೆದ ಸಲದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪ ಮತಗಳಿಂದ ಪರಾಭವಗೊಂಡಿದ್ದೆ. ಕೊನೆ ಕ್ಷಣದಲ್ಲಿ ಟಿಕೆಟ್ ಸಿಕ್ಕಿದ್ದು ಮತದಾರರನ್ನು ಸರಿಯಾಗಿ ಮುಟ್ಟಲು ಸಾಧ್ಯವಾಗದಿರುವುದು ಸೋಲಿಗೆ ಕಾರಣವಾಯಿತು’ ಎಂದು ಭಾನುವಾರ ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಸುದ್ದಿಗಾರರ ಜತೆ ಮತನಾಡಿದರು.
‘ನಾನು ಹೊರಗಿನವನು, ಕ್ಷೇತ್ರದಲ್ಲಿ ಲಭ್ಯವಿರುವುದಿಲ್ಲ’ ಎಂಬ ಆರೋಪಕ್ಕೆ ತೆರೆ ಎಳೆಯಲು ಪಕ್ಷದ ಹಿರಿಯರ ಸೂಚನೆಯಂತೆ ಈಚೆಗೆ ಚಿತ್ರದುರ್ಗದಲ್ಲಿ ನಿವೇಶನ ಖರೀದಿಸಿ ಸ್ವಂತ ಮನೆ ನಿರ್ಮಾಣಕ್ಕೆ ಮುಂದಾಗಿದ್ದೇನೆ. ಇದಾದ ನಂತರ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಮಂದಿನ ಆಕಾಂಕ್ಷಿ ಎಂಬ ವದಂತಿಗೆ ಬಲ ಬಂದಿದ್ದು, ಇದು ಸತ್ಯಕ್ಕೆ ದೂರ’ ಎಂದು ಹೇಳಿದರು.
ರಾಜ್ಯ ದ್ರಾಕ್ಷಾರಸ ಮತ್ತು ವೈನ್ ಬೋರ್ಡ್ ಅಧ್ಯಕ್ಷ ಬಿ. ಯೋಗೇಶ್ ಬಾಬು, ಕುರುಬ ಸಮಾಜದ ಮುಖಂಡರಾದ ಎಸ್.ಕೆ. ಗುರುಲಿಂಗಪ್ಪ, ಜಿ.ಎನ್. ಜಗದೀಶ್, ಎಸ್.ಕೆ. ಬಸವರಾಜ್, ಗ್ರಾಮ ಪಂಚಾಯಿತಿ ಸದಸ್ಯ ಫಾಲಾಕ್ಷ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.