ADVERTISEMENT

ಹೊಸದುರ್ಗದಲ್ಲಿ ಬಿರುಸಿನಿಂದ ಸಾಗಿದ ಬಿತ್ತನೆ ಕಾರ್ಯ

​ಪ್ರಜಾವಾಣಿ ವಾರ್ತೆ
Published 27 ಮೇ 2023, 14:56 IST
Last Updated 27 ಮೇ 2023, 14:56 IST
ಹೊಸದುರ್ಗದ ಬಾಗೂರಿನಲ್ಲಿ ಸಾವೆ ಬಿತ್ತನೆ ಮಾಡುತ್ತಿರುವುದು.
ಹೊಸದುರ್ಗದ ಬಾಗೂರಿನಲ್ಲಿ ಸಾವೆ ಬಿತ್ತನೆ ಮಾಡುತ್ತಿರುವುದು.   

ಹೊಸದುರ್ಗ: ತಾಲ್ಲೂಕಿನಾದ್ಯಂತ ಕೆಲ ದಿನಗಳ ಹಿಂದೆ ಉತ್ತಮ ಮಳೆಯಾಗಿದ್ದು, ರೈತರು ಬಿತ್ತನೆಗೆ ಭೂಮಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಸಾವೆ, ಶೇಂಗಾ ಸೇರಿ ಇತರೆ ಬಿತ್ತನೆಗೆ ಮುಂದಾಗಿದ್ದಾರೆ.

ಭರಣಿ ಮಳೆ ಆರಂಭವಾದಾಗಲೇ ಭೂಮಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬಾಗೂರು ಸುತ್ತಮುತ್ತ ಮಳೆ ಬರುವುದು ತಡವಾಗಿದೆ. ಇತರೆಡೆ ಸಾವೆ ಬಿತ್ತನೆಯಾಗಿದೆ. ಬಾಗೂರಿನಲ್ಲಿ ಸರಿಯಾದ ಸಮಯಕ್ಕೆ ಮಳೆಯಾಗಲಿಲ್ಲ. ಈ ಭಾಗದಲ್ಲಿ ಸಾವೆ ಬಿತ್ತನೆ 20 ದಿನ ತಡವಾಗಿದ್ದು, ಮುಂದೆ ಮಳೆಗಾಳಿಗೆ ತುತ್ತಾಗಬಹುದು. ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಔಷಧ, ಗೊಬ್ಬರ, ಬೀಜ ಸಮಯಕ್ಕೆ ಸರಿಯಾಗಿ ದೊರೆಯುವಂತಿದ್ದರೆ ಸಾಕು ಎಂದು ಪ್ರಗತಿಪರ ರೈತ ಬಾಗೂರಿನ ವೆಂಕಟೇಶ್ ತಿಳಿಸಿದರು.

ಏಪ್ರಿಲ್‌ನಲ್ಲಿಯೇ ಮಳೆಯಾಗಿದ್ದರೆ ಇಷ್ಟರಲ್ಲಾಗಲೇ ರೈತರು ಸಾವೆ ಬಿತ್ತನೆ ಮುಗಿಸುತ್ತಿದ್ದರು. ಮಳೆ ಸ್ವಲ್ಪ ತಡವಾಗಿದ್ದರಿಂದ ಹೆಸರು ಬಿತ್ತನೆ ನಿರೀಕ್ಷೆಯಷ್ಟು ಆಗಿಲ್ಲ. ಸಾವೆ ಬಿತ್ತನೆ ಮಾಡಬಹುದು. ಸ್ವಲ್ಪ ತಡವಾಗಿದ್ದರೂ ಯಾವುದೇ ತೊಂದರೆಯಿಲ್ಲ. ರೈತರು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ತಾಲ್ಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ರೈತರಿಗೆ ಯಾವುದೇ ಮಾಹಿತಿ ಬೇಕಾದರೂ ಇಲಾಖೆ ಸಂಪರ್ಕಿಸಬಹುದು. ರೈತರು ವೈಜ್ಞಾನಿಕ ಶಿಫಾರಸಿನ ಆಧಾರದ ಮೇಲೆ ಶೇ 50ರಷ್ಟು ರಾಸಾಯನಿಕ ಗೊಬ್ಬರವನ್ನು ಬಿತ್ತನೆ ಬೀಜದ ಜೊತೆ ಸೇರಿಸಿ ಬಿತ್ತನೆ ಮಾಡಬೇಕು. 2023 ಅನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿದ್ದು, ಸಿರಿಧಾನ್ಯ ಬೆಳೆಯಲು ರೈತರು ಮುಂದಾಗಬೇಕು. ಮಳೆ ಕಡಿಮೆಯಾದರೂ ಕನಿಷ್ಠ ಇಳುವರಿ ಬಂದೆ ಬರುತ್ತದೆ. ಜಾನುವಾರಿಗೆ ಮೇವು ಒದಗಿಸಬಹುದು. ಈ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.