ADVERTISEMENT

ಅಭಿವೃದ್ಧಿಯ ಧ್ವನಿ ಹತ್ತಿಕ್ಕಲು ಅವಿಶ್ವಾಸದ ಅಸ್ತ್ರ: ಶ್ರೀದೇವಿ ಚಕ್ರವರ್ತಿ ಆರೋಪ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 5:30 IST
Last Updated 7 ಜುಲೈ 2025, 5:30 IST
ಶ್ರೀದೇವಿ ಚಕ್ರವರ್ತಿ
ಶ್ರೀದೇವಿ ಚಕ್ರವರ್ತಿ   

ಚಿತ್ರದುರ್ಗ: ‘ನಗರದ ಅಭಿವೃದ್ಧಿಗಾಗಿ ಎತ್ತಿದ ಧ್ವನಿ ಹತ್ತಿಕ್ಕಲು ಅವಿಶ್ವಾಸದ ಅಸ್ತ್ರ ಪ್ರಯೋಗಿಸಲಾಗುತ್ತಿದೆ. ಆದರೆ, ನಾನು ಯಾವುದಕ್ಕೂ ಜಗ್ಗುವುದಿಲ್ಲ’ ಎಂದು ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ತಿಳಿಸಿದ್ದಾರೆ.

‘ಜೂನ್ 12ರಂದು ಪೌರಾಯುಕ್ತರಾದ ಎಂ.ರೇಣುಕಾ ಅವರಿಗೆ ನಗರದಲ್ಲಿ ಪುನರ್ಬಳಸಲು ಸಾಧ್ಯವಿಲ್ಲದ ಪ್ಲಾಸ್ಟಿಕ್ ನಿಷೇಧಿಸಬೇಕು. ಜತೆಗೆ ತರಕಾರಿ ಮಾರುಕಟ್ಟೆಗಳಲ್ಲಿ ಶುಚಿತ್ವದ ಕೊರತೆ ಇದ್ದು, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದ್ದೆ. ಈ ವೇಳೆ ನನ್ನ ನಡೆ ಉಪಾಧ್ಯಕ್ಷೆ ಸ್ಥಾನಕ್ಕೆ ಕುತ್ತು ತರುತ್ತದೆ ಎಂದು ಸ್ಪಷ್ಟವಾಗಿತ್ತು. ಆದರೆ, ನನ್ನ ಊಹೆ ನಿಜವಾಗಿದೆ. ರಾಜಕೀಯ ಬೆಳವಣಿಗೆಯಿಂದ ಉಪಾಧ್ಯಕ್ಷೆ ಸ್ಥಾನಕ್ಕೆ ಅವಿಶ್ವಾಸ ಮಂಡನೆಗೆ ಸದಸ್ಯರು ಮುಂದಾಗಿದ್ದಾರೆ. ಅಧಿಕಾರ ಶಾಶ್ವತವಲ್ಲ; ಕೆಲಸ ಮಾತ್ರ ಶಾಶ್ವತ ಎಂದು ನಂಬಿರುವ ನನಗೆ ಯಾವುದೇ ಬೇಸರವಿಲ್ಲ’ ಎಂದು ಹೇಳಿದ್ದಾರೆ.

‘2024ರ ಸೆ. 26ರಂದು ನಾಲ್ಕನೇ ಅವಧಿಗೆ ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದೆ. ಕೆಲಸ ಮಾಡುವವರಿಗೆ, ವ್ಯವಸ್ಥೆ ಪ್ರಶ್ನಿಸುವವರಿಗೆ ಇದು ಕಾಲವಲ್ಲ ಎಂಬುದಕ್ಕೆ ಅವಿಶ್ವಾಸದ ಬೆಳವಣಿಗೆ ಸಾಕ್ಷಿಯಾಗಿದೆ.‌ ನಗರಸಭೆಗೆ ಸದಸ್ಯೆಯಾದ ಕ್ಷಣದಿಂದ ನೀಡುತ್ತಿರುವ ಗೌರವಧನವನ್ನು ಸಂಪೂರ್ಣ ವಾರ್ಡ್ ಅಭಿವೃದ್ಧಿಗೆ ಮೀಸಲಿಟ್ಟಿದ್ದೇನೆ ಎಂಬ ತೃಪ್ತಿ ನನಗಿದೆ. ನಗರಸಭೆ ಸದಸ್ಯೆ, ಉಪಾಧ್ಯಕ್ಷೆಯಾಗಿ ಯಾವುದೇ ಒತ್ತಡಕ್ಕೂ ಮಣಿಯದೆ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಚಿತ್ರದುರ್ಗವನ್ನು ಬಹಳಷ್ಟು ರಾಜಕಾರಣಿಗಳು ಅಭಿವೃದ್ಧಿ ಮಾಡುತ್ತೇವೆ ಎಂದು ಬಂದು ಕೊನೆಗೆ ಅವರು ಅಭಿವೃದ್ಧಿಯಾದರೇ ಹೊರತು ಐತಿಹಾಸಿಕ ನಗರ ಮಾತ್ರ ಏನೂ ಆಗಲಿಲ್ಲ. ಇದು ಒಂದು ಅನಾಥ ಜಿಲ್ಲೆಯಾಗಿದ್ದು, ಬೇರೆ ಊರಿನ ರಾಜಕಾರಣಿಗಳು ಗುತ್ತಿಗೆ ಪಡೆಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಚಿತ್ರದುರ್ಗದಲ್ಲಿದ್ದ ದಾವಣಗೆರೆ ಪ್ರತ್ಯೇಕ ಜಿಲ್ಲೆಯಾಗಿ ನೋಡನೋಡುತ್ತಲೇ ‘ಸ್ಮಾರ್ಟ್’ ಆಗಿ ಬೆಳೆದಿದೆ. ಆದರೆ, ಈ ಊರು ಏನಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳಬೇಕು. ಇಚ್ಛಾಶಕ್ತಿ ಇಲ್ಲದ ರಾಜಕಾರಣಿಗಳಿಗೆ ಮಣೆ ಹಾಕುವ ಇಲ್ಲಿನ ಸದಸ್ಯರಿಗೆ ಅಭಿವೃದ್ಧಿ ಬೇಕಿಲ್ಲ. ರಾಜಕಾರಣ, ಅಧಿಕಾರ ಶಾಶ್ವತವಲ್ಲ.‌ ನಮ್ಮ ಕೆಲಸ ಮುಂದಿನ ಪೀಳಿಗೆ ಸ್ಮರಿಸಬೇಕು. ನಗರ ಸ್ವಚ್ಛತೆ ನನ್ನ ಆದ್ಯತೆ. ಅದಕ್ಕಾಗಿ ಯಾವುದೇ ನಿರ್ಧಾರ, ತ್ಯಾಗ ಮಾಡಲು ನಾನು ಸಿದ್ಧನಿದ್ದೇನೆ’ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.