ADVERTISEMENT

ಚಿತ್ರದುರ್ಗ | ಎಸ್ಸೆಸ್ಸೆಲ್ಸಿ ಫಲಿತಾಂಶ: ಜಿಲ್ಲೆಗೆ ‘ಎ’ ಗ್ರೇಡ್

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 20:00 IST
Last Updated 10 ಆಗಸ್ಟ್ 2020, 20:00 IST

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೋಟೆನಾಡು ಗಣನೀಯ ಸಾಧನೆ ತೋರಿದ್ದು ‘ಎ’ ಗ್ರೇಡ್‌ ಪಡೆದುಕೊಂಡಿದೆ. 2018–19ನೇ ಶೈಕ್ಷಣಿಕ ವರ್ಷಕ್ಕಿಂತ ಉತ್ತಮ ಫಲಿತಾಂಶ ಬಂದಿರುವುದು ಶೈಕ್ಷಣಿಕ ವಲಯದಲ್ಲಿ ಸಂತಸ ಮೂಡಿಸಿದೆ.

ಇದೇ ಮೊದಲ ಬಾರಿಗೆ ಗ್ರೇಡ್‌ ವ್ಯವಸ್ಥೆ ನೀಡಲಾಗಿದೆ. ‘ಎ’ ಗ್ರೇಡ್‌ ಪಡೆದ ರಾಜ್ಯದ ಹತ್ತು ಜಿಲ್ಲೆಯಲ್ಲಿ ಚಿತ್ರದುರ್ಗ 5ನೇ ಸ್ಥಾನದಲ್ಲಿದೆ. ಕಳೆದ ವರ್ಷ ಶೇ 87.80 ಫಲಿತಾಂಶ ಪಡೆದು ರಾಜ್ಯದಲ್ಲಿ 6ನೇ ಸ್ಥಾನದಲ್ಲಿತ್ತು. 2017–18ನೇ ಶೈಕ್ಷಣಿಕ ವರ್ಷದಲ್ಲಿ ಶೇ 80.85 ಫಲಿತಾಂಶ ಪಡೆದು ರಾಜ್ಯದಲ್ಲಿ 16ನೇ ಸ್ಥಾನದಲ್ಲಿತ್ತು.

ಚಿತ್ರದುರ್ಗದ ವಿದ್ಯಾವಿಕಾಸ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಎಸ್‌.ಪಿ.ಪ್ರತೀಕ್ಷಾ 623 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಹೊಸದುರ್ಗದ ಎಂ.ಪಿ.ಪ್ರಕಾಶ್‌ ಪ್ರೌಢಶಾಲೆಯ ಸಾಕ್ಷಿ ಪ್ರಕಾಶ್‌ 622 ಪಡೆದು ದ್ವಿತೀಯ ಹಾಗೂ ಭರಮಸಾಗರದ ಡಿವಿಎಸ್‌ ಪ್ರೌಢಶಾಲೆಯ ಎನ್‌.ಅರ್ಪಿತಾ 621 ಅಂಕ ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.

ADVERTISEMENT

ಜಿಲ್ಲೆಯ 441 ಪ್ರೌಢಶಾಲೆಗಳಲ್ಲಿ 286 ಶಾಲೆಗಳು ‘ಎ’ ಗ್ರೇಡ್‌ ಪಡೆದುಕೊಂಡಿವೆ. 119 ಶಾಲೆ ‘ಬಿ’ ಹಾಗೂ 36 ಶಾಲೆಗಳು ‘ಸಿ’ ಗ್ರೇಡ್‌ ಗಳಿಸಿವೆ. ಮೊಳಕಾಲ್ಮುರು ತಾಲ್ಲೂಕಿನ ಎಲ್ಲ 31 ಶಾಲೆಗಳು ‘ಎ’ ಗ್ರೇಡ್‌ ಪಡೆದಿರುವುದು ವಿಶೇಷ. ಚಳ್ಳಕೆರೆಯ ಪ್ರೌಢಶಾಲೆಗಳಲ್ಲಿ ‘ಸಿ’ ಗ್ರೇಡ್‌ ಫಲಿತಾಂಶವಿಲ್ಲ. ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಸಾಧನೆಯಲ್ಲಿ ಸುಧಾರಣೆ ಕಂಡುಬಂದಿಲ್ಲ. ಶಾಲಾವಾರು ಫಲಿತಾಂಶದ ವಿವರಗಳು ಮಂಗಳವಾರ ಲಭ್ಯವಾಗುವ ಸಾಧ್ಯತೆ ಇದೆ.

‘ಫಲಿತಾಂಶ ಸುಧಾರಣೆಗೆ ಆರಂಭದಿಂದಲೂ ಒತ್ತು ನೀಡಲಾಗಿತ್ತು. ವಿಷಯ ಶಿಕ್ಷಕರ ಕಾರ್ಯಾಗಾರ ನಡೆಸಲಾಗಿತ್ತು. ವಿದ್ಯಾಧಿಕಾರಿ ಹಾಗೂ ವಿಷಯ ಪರಿಣಿತರ ತಂಡಗಳನ್ನು ಮೇಲುಸ್ತುವಾರಿಗೆ ನೇಮಿಸಲಾಗಿತ್ತು. ಕಳಪೆ ಫಲಿತಾಂಶ ಪಡೆದ ಶಾಲೆಗಳ ಪರಿಶೀಲನೆ ನಡೆಸಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿತ್ತು. ಶಿಕ್ಷಕರಲ್ಲಿ ಸ್ಫೂರ್ತಿ ತುಂಬುವ ಉದ್ದೇಶದಿಂದ ಡಾ.ಗುರುರಾಜ ಕರ್ಜಗಿ ಸೇರಿ ಅನೇಕರ ತಜ್ಞರೊಂದಿಗೆ ಸಂವಾದ ಏರ್ಪಡಿಸಲಾಗಿತ್ತು’ ಎಂದು ಎಸ್ಸೆಸ್ಸೆಲ್ಸಿ ನೋಡೆಲ್‌ ಅಧಿಕಾರಿ ವಿಜಯಕುಮಾರ್‌ ಮಾಹಿತಿ ನೀಡಿದರು.

ಇದೇ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಪತ್ರಿಕೆಯ ಮಾದರಿ ಬದಲಾಗಿತ್ತು. ಇದಕ್ಕೆ ತಕ್ಕಂತೆ ಮಕ್ಕಳನ್ನು ಸಜ್ಜುಗೊಳಿಸುವಲ್ಲಿ ಜಿಲ್ಲೆಯ ಶಿಕ್ಷಕ ವರ್ಗ ಯಶಸ್ವಿಯಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಹೆಚ್ಚು ನಿಗಾ ಇಡಲಾಗಿತ್ತು. ಪ್ರತಿ ತಾಲ್ಲೂಕಿನ ಆಯ್ದ ಹಳ್ಳಿಗಳಲ್ಲಿ ರಾತ್ರಿ ಶಾಲೆ ಆರಂಭಿಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಲಾಗಿತ್ತು.

‘ಡಿಸೆಂಬರ್‌ ಅಂತ್ಯಕ್ಕೆ ಪಠ್ಯ ಬೋಧನೆ ಪೂರ್ಣಗೊಂಡಿತ್ತು. ಜನವರಿ ಬಳಿಕ ಪಠ್ಯದ ಪುನರ್‌ ಮನನ ತರಗತಿ ನಡೆದವು. ಸರಣಿ ಪರೀಕ್ಷೆಗಳನ್ನು ನಡೆಸಿ ಪರೀಕ್ಷೆಯ ಬಗ್ಗೆ ಇದ್ದ ಭಯವನ್ನು ಹೋಗಲಾಡಿಸಲಾಯಿತು. ಕೊರೊನಾ ಸಂದರ್ಭದಲ್ಲಿ ಶಿಕ್ಷಕರು ಕಾರ್ಯನಿರ್ವಹಿಸಿದ್ದರಿಂದ ಈ ಫಲಿತಾಂಶ ಸಾಧ್ಯವಾಗಿದೆ’ ಎಂದು ವಿಜಯಕುಮಾರ್ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.