
ಮೊಳಕಾಲ್ಮುರು: ಕುರುಬ ಜಾತಿ ಸೇರಿದಂತೆ ಬೇರೆ ಜಾತಿಗಳನ್ನು ಎಸ್‌ಟಿಗೆ ಸೇರಿಸುವ ಮಾತುಗಳು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ಅವುಗಳನ್ನು ಸೇರಿಸಿಕೊಳ್ಳಲಿ. ಆದರೆ ಎಸ್‌ಟಿ ಜನಾಂಗಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ತಾಲ್ಲೂಕಿನ ತುಮಕೂರ್ಲಹಳ್ಳಿಯಲ್ಲಿ ಭಾನುವಾರ ನಡೆದ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಪ್ಪಟ ಬುಡಕಟ್ಟು ಸಂಸ್ಕೃತಿಗಳನ್ನು ಅನಾದಿಯಿಂದ ಪಾಲಿಸಿಕೊಂಡು ಬಂದಿರುವ ಎಸ್‌ಟಿ ಜನಾಂಗವು ಸಾಮಾಜಿಕವಾಗಿ, ಆರ್ಥಿಕವಾಗಿ ತೀರಾ ಹಿಂದುಳಿದಿದೆ. ಸಮಾಜವನ್ನು ಮೇಲೆತ್ತುವ ಕೆಲಸ ಇನ್ನೂ ಸಾಕಷ್ಟು ಆಗಬೇಕಿದೆ. ಬೇರೆ ಜಾತಿಗಳನ್ನು ನಮ್ಮ ಮೀಸಲಾತಿಗೆ ಸೇರಿಸಿದಲ್ಲಿ ಅನ್ಯಾಯವಾಗಲಿದೆ. ಮೊದಲು ಮೀಸಲಾತಿ ಪ್ರಮಾಣ ಹೆಚ್ಚಿಸಿ ನಂತರ ಬೇರೆ ಜಾತಿ ಸೇರ್ಪಡೆ ಬಗ್ಗೆ ಚಿಂತನೆ ಮಾಡಲಿ ಎಂದರು.
‘ಮೊಳಕಾಲ್ಮುರು, ಚಳ್ಳಕೆರೆ ಮತ್ತು ಜಗಳೂರು ತಾಲ್ಲೂಕುಗಳಲ್ಲಿ ಹೆಚ್ಚಾಗಿ ಎಸ್‌ಟಿ ಸಮುದಾಯದ ಜನರು ಹೆಚ್ಚು ವಾಸವಿದ್ದಾರೆ. ಇವರ ಬುಡಕಟ್ಟು ಸಂಸ್ಕೃತಿಗಳು ಮಾದರಿಯಾಗಿದ್ದು ಇವುಗಳನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ. ನಾನು ಹಿಂದೆ ಸಚಿವನಾದ್ದಾಗ ವಾಲ್ಮೀಕಿ ಜಯಂತಿಗೆ ಸರ್ಕಾರಿ ರಜೆ ಕೊಡಿಸಿದ್ದೆ ಮತ್ತು ಜಯಂತಿ ಘೋಷಣೆಗೆ ಒತ್ತಡ ಹೇರಿದ್ದೆ’ ಎಂದು ಶ್ರೀರಾಮುಲು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎನ್.ವೈ. ಗೋಪಾಲಕೃಷ, ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಗ್ರಂಥವು ಸರ್ವ ಕಾಲಕ್ಕೂ ಸಲ್ಲುವ ಗ್ರಂಥವಾಗಿದೆ. ಅದರಲ್ಲಿನ ಅಂಶಗಳನ್ನು ಮತ್ತು ವಾಲ್ಮೀಕಿ ಆದರ್ಶಗಳನ್ನು ನಾವೆಲ್ಲರೂ ಪಾಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದರು.
ಸಿದ್ದಯ್ಯನಕೋಟೆ ಮಠದ ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಂಪಿ ವಿಶ್ವ ವಿದ್ಯಾಲಯದ ವಿರೂಪಾಕ್ಷ ಪೂಜಾರಹಳ್ಳಿ, ಮುಖಂಡರಾದ ಕೆ. ಜಗಳೂರಯ್ಯ, ಮಾರನಾಯಕ, ಪಟೇಲ್ ಜಿ, ತಿಪ್ಪೇಸ್ವಾಮಿ, ಕುಮಾರಗೌಡ, ಪಟೇಲ್ ಪಾಪನಾಯಕ, ಟಿ.ಜಿ. ಪಾಪಣ್ಣ ಗೌಡ್ರು, ಪಿ. ರಾಜಣ್ಣ, ನಿವೃತ್ತ ಕೆಎಎಸ್ ಅಧಿಕಾರಿ ಎನ್. ರಘುಮೂರ್ತಿ, ಪಿ. ರಾಜಣ್ಣ, ಬಿಜೆಪಿ ಮುಖಂಡರಾದ ಡಾ.ಪಿ.ಎಂ. ಮಂಜುನಾಥ್, ಮೊಬೈಲ್ ಮಂಜುನಾಥ್, ಪಾಪೇಶ್ ನಾಯಕ, ಆಯೋಜನೆ ಮಾಡಿದ್ದ ಬಾಲ್ಯ ಸ್ನೇಹಿತ ಬಳಗದ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.