
ಚಿತ್ರದುರ್ಗ: ಕುಂಟುತ್ತಾ ಸಾಗುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ರಾಜ್ಯ ಸರ್ಕಾರ ಈ ಬಾರಿಯಾದರೂ ಹಣ ಬಿಡುಗಡೆ ಮಾಡುವುದೇ.. ಬರದ ಬೀಡು ಕೋಟೆನಾಡಿಗೆ ಈ ವರ್ಷವಾದರೂ ಭದ್ರೆ ಹರಿದು ಬರುವಳೇ... ಮುಖ್ಯಮಂತ್ರಿಯವರು ಮಧ್ಯ ಕರ್ನಾಟಕ ಭಾಗದ ಪ್ರಮುಖ ಬೇಡಿಕೆ ಈಡೇರಿಸುವರೇ... ರಾಜ್ಯದ ಬಜೆಟ್ ಸಮೀಪಿಸುತ್ತಿದ್ದಂತೆ ಜಿಲ್ಲೆಯ ಜನರ ಮನಸ್ಸಿನಲ್ಲಿ ಇಂತಹ ಹಲವು ಪ್ರಶ್ನೆಗಳು ಮೂಡುತ್ತಿವೆ.
ಕಳೆದ ವಾರವಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹಾಗೂ ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯನ್ನು ಭೇಟಿಯಾಗಿ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹ 5,000 ಕೋಟಿ ಅನುದಾನ ಮೀಸಲಿಡಬೇಕು. ಸದ್ಯಕ್ಕೆ ತಾಲ್ಲೂಕಿನ ಗೋನೂರು ಅಕ್ವಡೆಕ್ಟ್‌ವರೆಗೆ ಭದ್ರಾ ನೀರು ಹರಿಸುವ ತುರ್ತು ಕಾಮಗಾರಿಗೆ ₹ 300 ಕೋಟಿ ಅನುದಾನ ಒದಗಿಸಬೇಕೆಂದು ಕೋರಿದ್ದರು.
ಬಜೆಟ್ ಪೂರ್ವದಲ್ಲಿ ಈ ರೀತಿಯ ಮನವಿಗಳು ಸಾಮಾನ್ಯ ಎಂಬಂತಾಗಿವೆ. ರಾಜ್ಯ ಸರ್ಕಾರ ಇನ್ನಾದರೂ ಕೇಂದ್ರದತ್ತ ಕೈತೋರಿಸದೆ ಯೋಜನಾ ಕಾಮಗಾರಿ ಪೂರ್ಣಗೊಳಿಸುವತ್ತ ದಿಟ್ಟ ಹೆಜ್ಜೆ ಇಡುವುದೇ ಎಂಬ ಪ್ರಶ್ನೆ ಮತ್ತೊಮ್ಮೆ ಈ ಭಾಗದ ರೈತರು ಹಾಗೂ ಮುಖಂಡರನ್ನು ಕಾಡುತ್ತಿದೆ. ಹೀಗಾಗಿ ಮುಂಬರುವ ರಾಜ್ಯ ಬಜೆಟ್‌ನತ್ತ ಜಿಲ್ಲೆಯ ಜನರ ಚಿತ್ತ ನೆಟ್ಟಿದೆ.
ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳ ₹ 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಮೇಲ್ದಂಡೆ ಯೋಜನೆಯದ್ದಾಗಿದೆ. ಅಚ್ಚುಕಟ್ಟು ಪ್ರದೇಶದ 367 ಸಣ್ಣ ನೀರಾವರಿಯ ಕೆರೆಗಳಿಗೆ ನೀರು ತುಂಬಿಸುವ, ವಾಣಿ ವಿಲಾಸ ಸಾಗರಕ್ಕೆ 2 ಟಿಎಂಸಿ ಅಡಿ ನೀರು ಹರಿಸುವುದೂ ಯೋಜನೆಯ ಭಾಗವಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಯೋಜನೆಯ ಪರಿಷ್ಕೃತ ಅಂದಾಜು ವೆಚ್ಚ ₹ 21,167 ಕೋಟಿಗೆ ತಲುಪಿದೆ. ಇಲ್ಲಿಯವರೆಗೆ ಅಂದಾಜು ₹ 11,409 ಕೋಟಿ ವೆಚ್ಚ ಮಾಡಲಾಗಿದೆ. ಯೋಜನೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಇನ್ನೂ ₹ 10,000 ಕೋಟಿ ಅನುದಾನದ ಅವಶ್ಯಕತೆ ಇದೆ. ರಾಜ್ಯ ಸರ್ಕಾರ ₹ 5,000 ಕೋಟಿ ಬಿಡುಗಡೆ ಮಾಡಿ, ಕೇಂದ್ರ ಸರ್ಕಾರ ಘೋಷಿಸಿರುವ ₹ 5,300 ಕೋಟಿಯೂ ಬಿಡುಗಡೆಯಾದರೆ ಯೋಜನೆ ಪೂರ್ಣಗೊಳ್ಳುತ್ತದೆ ಎಂಬುದು ಇಲ್ಲಿಯ ಹೋರಾಟಗಾರರ ಲೆಕ್ಕಾಚಾರವಾಗಿದೆ.
ಬೇಕು ಕೊಬ್ಬರಿ ಮಾರುಕಟ್ಟೆ: ಜಿಲ್ಲೆಯಲ್ಲೇ ಹೆಚ್ಚು ತೆಂಗು ಬೆಳೆಯುವ ತಾಲ್ಲೂಕು ಹೊಸದುರ್ಗ. ಸುತ್ತಲಿನ ರೈತರು ಕೊಬ್ಬರಿ ಮಾರಾಟ ಮಾಡಲು ಅರಸೀಕೆರೆ ಆಥವಾ ತಿಪಟೂರಿಗೆ ಹೋಗಬೇಕಾಗಿದೆ. ಹೊಸದುರ್ಗ ಪಟ್ಟಣದಲ್ಲೇ ಒಂದು ಕೊಬ್ಬರಿ ಮಾರುಕಟ್ಟೆ ಮತ್ತು ಒಂದು ಗೋದಾಮು ನಿರ್ಮಾಣಗೊಳ್ಳಬೇಕು ಎಂಬುದು ಈ ಭಾಗದ ರೈತರ ಬೇಡಿಕೆಯಾಗಿದೆ.
ಹೊಸದುರ್ಗದ ಎಲ್ಲಾ ಕೆರೆಗಳಿಗೂ ಶೀಘ್ರವೇ ಭದ್ರಾ ಮೇಲ್ದಂಡೆ ನೀರು ಹರಿಯಬೇಕು. ರೈತರ ಪ್ರತಿ ಜಮೀನಿಗೂ ಹನಿ ನೀರಾವರಿ ಕಲ್ಪಿಸಲು ಹೆಚ್ಚಿನ ಆರ್ಥಿಕ ಸಹಾಯ ಒದಗಿಸಬೇಕು ಎಂದು ರೈತರು ಆಗ್ರಹಿಸುತ್ತಾರೆ. ವಿವಿ ಸಾಗರ ಹಿನ್ನೀರಿನ ಪ್ರದೇಶದ ಜನ ಕೋಡಿ ನೀರಿನಿಂದಾಗಿ ಜಮೀನು, ಮನೆ ಕಳೆದುಕೊಳ್ಳುವ ಪರಿಸ್ಥಿತಿ ಇದೆ. ಇದರಿಂದ ರಕ್ಷಣೆ ಒದಗಿಸಲು ಶಾಶ್ವತ ಪರಿಹಾರ ದೊರೆಯಬೇಕು ಎಂದೂ ಸ್ಥಳೀಯರು ಒತ್ತಾಯಿಸುತ್ತಾರೆ.
ಅಡಿಕೆ ಬೆಳೆಗಾರರಿಗೆ ಪ್ಯಾಕೇಜ್: ರಾಜ್ಯದಲ್ಲಿ ಚನ್ನಗಿರಿ ಬಿಟ್ಟರೆ ಹೊಳಲ್ಕೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯಲಾಗುತ್ತಿದೆ. ರೈತರು ಅಂತರ್ಜಲವನ್ನೇ ನಂಬಿದ್ದು, ಬೇಸಿಗೆ ವೇಳೆ ಕೊಳವೆಬಾವಿಗಳಲ್ಲಿ ನೀರು ಬತ್ತಿದಾಗ ಟ್ಯಾಂಕರ್ ಮೂಲಕ ತೋಟಗಳಿಗೆ ನೀರು ಹಾಯಿಸುವ ಸಾಹಸವನ್ನೂ ಮಾಡುತ್ತಾರೆ.
ಅಡಿಕೆ ಬೆಳೆಗಾರರ ಬದುಕು ಅನಿಶ್ಚಿತತೆಯಿಂದ ಕೂಡಿದ್ದು, ಸರ್ಕಾರ ರೈತರ ನೆರವಿಗೆ ಬರಬೇಕಿದೆ. ಮಳೆ ಬಾರದೆ ತೋಟ ಒಣಗಿದ ರೈತನಿಗೆ ಪ್ಯಾಕೇಜ್ ಘೋಷಿಸಬೇಕಿದೆ. ತಾಲ್ಲೂಕಿನಲ್ಲಿ ಅಡಿಕೆಗೆ ಪ್ರತ್ಯೇಕ ಮಾರುಕಟ್ಟೆ ಸೌಲಭ್ಯ ನೀಡಬೇಕಿದೆ ಎಂದು ಬೆಳೆಗಾರರು ಒತ್ತಾಯಿಸುತ್ತಾರೆ.
ಬೇಕು ಕೃಷಿ ಸಂಸ್ಕರಣಾ ಘಟಕ: ಚಳ್ಳಕೆರೆ ತಾಲ್ಲೂಕಿನಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಕೃಷಿ ಸಂಸ್ಕರಣಾ ಘಟಕ ಮತ್ತು ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕಿದೆ. ಹದಗೆಟ್ಟ ಗ್ರಾಮೀಣ ರಸ್ತೆಗಳ ಕಾಯಕಲ್ಪಕ್ಕೆ ಮುಂದಾಗಬೇಕಿದೆ. ಜೊತೆಗೆ ತಾಲ್ಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದು ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ.
ತಾಲ್ಲೂಕಿನಾದ್ಯಂತ ಶಾಶ್ವತ ನೀರಾವರಿ ಸೌಲಭ್ಯಗಳ ಅನುಷ್ಠಾನ, ಕೆರೆಗಳ ತುಂಬಿಸುವ ಯೋಜನೆಗೆ ಹೆಚ್ಚಿನ ಹಣ, ಮತ್ತು ಒಣ ಬೇಸಾಯ ಪದ್ಧತಿಗೆ ಉತ್ತೇಜನ ನೀಡಬೇಕು. ಚಳ್ಳಕೆರೆ ಸಮೀಪದ ಡಿಆರ್‌ಡಿಒ, ಇಸ್ರೊ, ಬಾರ್ಕ್ ಮತ್ತು ಐಐಎಸ್‌ಸಿ ಕೇಂದ್ರಗಳ ಸುತ್ತಮುತ್ತಲ ಪ್ರದೇಶದ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಈ ಭಾಗದ ಜನರು ಒತ್ತಾಯಿಸುತ್ತಾರೆ.
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಕಡೆ ಕೈತೋರಿಸುವುದನ್ನು ಬಿಟ್ಟು ಬದ್ಧತೆ ಪ್ರದರ್ಶಿಸಬೇಕು. ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರವೇ ದಿಟ್ಟ ಹೆಜ್ಜೆ ಇಡಬೇಕು.ಹಂಪಯ್ಯನಮಾಳಿಗೆ ಧನಂಜಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಪೂರ್ಣಗೊಳಿಸಲು ಅನುದಾನ ಬಿಡುಗಡೆ ಮಾಡಬೇಕು. ಇದಕ್ಕೆ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಈ ಬಜೆಟ್‌ನಲ್ಲಿ ಮುಖ್ಯಮಂತ್ರಿಯವರು ಏನು ಮಾಡುತ್ತಾರೆ ಎಂಬ ಕುತೂಹಲ ಇದೆ.- ಬಿ.ಎ.ಲಿಂಗಾರೆಡ್ಡಿ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ
ಸ್ಥಾಪನೆಯಾಗದ ಶೇಂಗಾ ಚಿಕ್ಕಿ ಘಟಕ
ಮೊಳಕಾಲ್ಮುರು ತಾಲ್ಲೂಕಿಗೆ ಈ ಹಿಂದೆ ಘೋಷಣೆಯಾಗಿದ್ದ ಶೇಂಗಾ ಚಿಕ್ಕಿ ಉತ್ಪಾದನಾ ಘಟಕಗಳ ಪ್ರೋತ್ಸಾಹ ಧನ ಇನ್ನೂ ಬಿಡುಗಡೆಯಾಗಿಲ್ಲ. ವಾರ್ಷಿಕ ₹ 50 ಕೋಟಿ ವೆಚ್ಚದ ಶೇಂಗಾ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರೂ ಅನುದಾನ ಬಿಡುಗಡೆಯಾಗದೇ ಅನುಷ್ಠಾನವಾಗಿಲ್ಲ. ಕಳೆದ ಬಜೆಟ್‌ನಲ್ಲಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯನ್ನು 200 ಹಾಸಿಗೆ ಸಾಮರ್ಥ್ಯದ ಪ್ರತ್ಯೇಕ ಜಿಲ್ಲಾ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದಾಗಿ ಘೋಷಣೆ ಮಾಡಲಾಗಿದೆ.
ಈಗಿರುವ ಸ್ಥಳದಲ್ಲಿ ನಿರ್ಮಿಸಬೇಕೋ ಅಥವಾ ಹೊಸ ಸ್ಥಳದಲ್ಲಿ ಆಸ್ಪತ್ರೆ ನಿರ್ಮಿಸಬೇಕೋ ಎಂಬ ಜಿಜ್ಞಾಸೆ ಎದುರಾಗಿರುವ ಕಾರಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ತಾಲ್ಲೂಕು ಬಿಳಿ ರೇಷ್ಮೆಗೂಡು ಶೇಂಗಾ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು ಈ ಬಾರಿಯಾದರೂ ನೆರವು ಸಿಗಬಹುದು ಎಂಬ ನಂಬಿಕೆಯನ್ನು ರೈತರು ಹೊಂದಿದ್ದಾರೆ.
ಏಕಮಾತ್ರ ಸಕ್ಕರೆ ಕಾರ್ಖಾನೆ ಕತೆ ಏನು?
ಹಿರಿಯೂರಿನಲ್ಲಿರುವ ಜಿಲ್ಲೆಯ ಏಕಮಾತ್ರ ಸಹಕಾರಿ ಸಕ್ಕರೆ ಕಾರ್ಖಾನೆ ಪುನಾರಂಭವಾಗಬೇಕೆಂಬುದು ಈ ಭಾಗದ ಜನರ ಬಹುಮುಖ್ಯ ಬೇಡಿಕೆಯಾಗಿದೆ. ವಾಣಿವಿಲಾಸ ಜಲಾಶಯದ ಎಡ ಮತ್ತು ಬಲ ನಾಲೆಗಳು ಜಲಾಶಯ ನಿರ್ಮಾಣಗೊಂಡ ಸಂದರ್ಭದಲ್ಲಿ ನಿರ್ಮಿತವಾಗಿದ್ದವು.
ಇವು ನಿರ್ವಹಣೆಯ ಕೊರತೆಯಿಂದ ನಲುಗಿವೆ. 20 ದಿನಗಳಲ್ಲಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಸಬೇಕಿದ್ದ ಜಾಗದಲ್ಲಿ ಒಂದು ತಿಂಗಳಾದರೂ ನೀರು ಪೂರೈಸಲು ಆಗುತ್ತಿಲ್ಲ. ಹೀಗಾಗಿ ಎರಡೂ ನಾಲೆಗಳನ್ನು ಆಧುನೀಕರಣಗೊಳಿಸಬೇಕೆಂಬುದೂ ಪ್ರಮುಖ ಬೇಡಿಕೆಯಾಗಿದೆ. ಹಿರಿಯೂರು ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದೆ.
ಅಗತ್ಯ ಅನುದಾನ ಬಿಡುಗಡೆ ಮಾಡುವ ಮೂಲಕ ಕಾಲಮಿತಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಗ್ರಾಮೀಣ ಭಾಗದಲ್ಲಿ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು ಹಾಗೂ ಕಳೆದ ವರ್ಷ ಆರಂಭವಾಗಿರುವ ಸಾರಿಗೆ ಸಂಸ್ಥೆ ಡಿಪೋಗೆ ಹೆಚ್ಚುವರಿ ಬಸ್ಸುಗಳನ್ನು ಒದಗಿಸಿ ಸಾರಿಗೆ ವ್ಯವಸ್ಥೆ ಸುಧಾರಿಸುವಂತೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.
ಪೂರಕ ಮಾಹಿತಿ: ಸುವರ್ಣಾ ಬಸವರಾಜ್, ಕೊಂಡ್ಲಹಳ್ಳಿ ಜಯಪ್ರಕಾಶ್, ಸಾಂತೇನಹಳ್ಳಿ ಸಂದೇಶ್‌ಗೌಡ, ಎಚ್.ಡಿ. ಸಂತೋಷ್, ವೆಂಕಟಾಚಲಪತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.