ಹೊಸದುರ್ಗ (ಚಿತ್ರದುರ್ಗ ಜಿಲ್ಲೆ): ‘ಒಲಿದಂತೆ ಹಾಡುವೆ’ ವಚನ ಕಂಠಪಾಠ ಸ್ಪರ್ಧೆಯನ್ನು ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಜೂನ್ 15ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಲಿಂಗ, ಜಾತಿ, ವಯಸ್ಸಿನ ಭೇದವಿಲ್ಲದೆ ಯಾರೂ ಬೇಕಾದರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು. 500 ವಚನಗಳನ್ನು ತಪ್ಪಿಲ್ಲದೆ ಸ್ಪಷ್ಟವಾಗಿ, ವ್ಯಾಕರಣ ದೋಷವಿಲ್ಲದೇ ಭಾವಪೂರ್ಣವಾಗಿ ಹೇಳಬೇಕು. ಬಸವಣ್ಣ, ಚನ್ನಬಸವಣ್ಣ, ಅಲ್ಲಮಪ್ರಭು,ಸೇರಿದಂತೆ ಪ್ರಮುಖ ವಚನಕಾರರ ಕನಿಷ್ಠ 20 ವಚನಗಳನ್ನಾದರೂ ಹೇಳಬೇಕು.
ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ‘ಸಮಗ್ರ ವಚನ ಸಂಪುಟ’ದ ವಚನಗಳನ್ನು ಮಾತ್ರ ಹೇಳಬೇಕು. ಸ್ಪರ್ಧಿಗಳು ವಚನ ಕಂಠಪಾಠಕ್ಕೆ ಆನ್‌ಲೈನ್‌ನಲ್ಲಿ ಸಿಗುವ ‘ವಚನ ಸಂಪುಟ’ ಮತ್ತು ‘ವಚನ ಸಂಚಯ’ ಜಾಲತಾಣ ಬಳಕೆ ಮಾಡಿಕೊಳ್ಳಬಹುದು.
ಪ್ರಥಮ ಬಹುಮಾನ ₹ 30,000, ದ್ವಿತೀಯ ₹ 25,000, ತೃತೀಯ ₹ 20,000, ನಾಲ್ಕನೇ ₹ 15,000 ಹಾಗೂ ಐದನೇ ಬಹುಮಾನ ₹ 10,000 ಹಾಗೂ ಪ್ರಶಸ್ತಿ ಪತ್ರ, ಪುಸ್ತಕ ನೀಡಿ ಗೌರವಿಸಲಾಗುವುದು. 200 ವಚನಗಳನ್ನು ಹೇಳಿದವರಿಗೆ ಪ್ರಶಸ್ತಿಪತ್ರ, ಪುಸ್ತಕ ನೀಡಲಾಗುವುದು.
ಮಠಾಧೀಶರಿಗೂ ಅವಕಾಶ: ಸ್ಪರ್ಧೆಗೆ ಮಠಾಧೀಶರಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ಮಠಾಧೀಶರಿಗೆ ಪ್ರಥಮ ಬಹುಮಾನ ₹ 40,000 ನೀಡಲಾಗುವುದು ಎಂದು ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದ್ದಾರೆ.
ಜೂನ್ 10ರ ಒಳಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ ಟಿ.ಎಂ ಮರುಳಸಿದ್ದಯ್ಯ, ತರಳಬಾಳು ಜಗದ್ಗುರು ಶಾಖಾಮಠ, ಸಾಣೇಹಳ್ಳಿ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ, ಮೊಬೈಲ್: 9663177254 ಸಂಪರ್ಕಿಸಬಹುದು ಎಂದು ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.