
ಚಿತ್ರದುರ್ಗದ ಜಿಲ್ಲಾ ಕ್ರೀಡಾಂಗಣದ ರಸ್ತೆಯಲ್ಲಿ ತಲೆ ಎತ್ತಿರುವ ಎಗ್‌ರೈಸ್ ಅಂಗಡಿಗಳು
ಪ್ರಜಾವಾಣಿ ಚಿತ್ರ – ವಿ.ಚಂದ್ರಪ್ಪ
ಚಿತ್ರದುರ್ಗ: ಜಿಲ್ಲೆಯಲ್ಲಿ ಎಗ್‌ರೈಸ್, ಪಾನಿಪುರಿ, ಗೋಬಿ ಮಂಚೂರಿ, ಚಿಕನ್, ಮಟನ್, ಫಿಶ್ ಕಬಾಬ್ ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ತಳ್ಳುಗಾಡಿ ವ್ಯಾಪಾರಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆರೋಗ್ಯಕ್ಕೆ ಸಂಚಕಾರ ತಂದೊಡ್ಡುವ ‘ಕೃತಕ ಬಣ್ಣ’ದ ಬಳಕೆ ಎಗ್ಗಿಲ್ಲದೇ ನಡೆಯುತ್ತಿದ್ದು, ಸ್ವಚ್ಛತೆ, ಶುದ್ಧ ಕುಡಿಯುವ ನೀರು ದೂರದ ಮಾತಾಗಿದೆ.
ಪ್ರಮುಖ ವೃತ್ತ, ಬಸ್ ನಿಲ್ದಾಣ, ರಸ್ತೆ ಬದಿ ಹೀಗೆ ಎಲ್ಲೆಡೆ ತಳ್ಳುಗಾಡಿಗಳು ತಲೆ ಎತ್ತಿದ್ದು, ಆಹಾರ ಸುರಕ್ಷತೆಯ ನಿಯಮಗಳು ಇಲ್ಲಿ ಪಾಲನೆಯೇ ಆಗುತ್ತಿಲ್ಲ.
ಕಬಾಬ್, ಗೋಬಿ ಮಂಚೂರಿ ಸೇರಿದಂತೆ ಇತರೆ ಪದಾರ್ಥಗಳಲ್ಲಿ ‘ಕೃತಕ ಬಣ್ಣ’ ಬಳಕೆ ಮಾಡದಂತೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ರಸ್ತೆ ಬದಿ ವ್ಯಾಪಾರಿಗಳು, ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಇವುಗಳ ಬಳಕೆ ಎಗ್ಗಿಲ್ಲದೇ ನಡೆಯುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳೂ ಕೇಳಿಬರುತ್ತಿವೆ.
ಗ್ರಾಹಕರನ್ನು ಸೆಳೆಯಲು ವಿವಿಧ ಖಾದ್ಯಗಳ ತಯಾರಿಯಲ್ಲಿ ಕೃತಕ ಬಣ್ಣ, ಅಜಿನೊಮೊಟೊ ಸಹಿತ ರಾಸಾಯನಿಕಗಳನ್ನು ಯಥೇಚ್ಛವಾಗಿ ಬಳಕೆ ಮಾಡಲಾಗುತ್ತಿದೆ. ತಳ್ಳು ಗಾಡಿಗಳಲ್ಲಿ ಸಿದ್ಧಪಡಿಸಿ ಇಡಲಾಗುವ ಆಹಾರ ಪದಾರ್ಥಗಳಿಗೆ ದೂಳು ಮೆತ್ತಿಕೊಳ್ಳುವುದು, ನೊಣಗಳು ಮುತ್ತಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ.
ತೆರೆದ ಚರಂಡಿಗಳ ಮೇಲೆ, ರಾಜಕಾಲುವೆಯ ಪಕ್ಕ, ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಅಸುರಕ್ಷಿತ ರೀತಿಯಲ್ಲಿ ಆಹಾರ ತಯಾರಿಸಿ, ಮಾರಾಟ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆ, ನೊಣ ಸಹಿತ ಕ್ರಿಮಿಕೀಟಗಳು ಮುತ್ತಿರುವ ಆಹಾರ ಗ್ರಾಹಕರ ಹೊಟ್ಟೆ ಸೇರುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಬಯಲಿನಲ್ಲಿ ತಳ್ಳು ಗಾಡಿ ಇಟ್ಟುಕೊಂಡು ಉಪ್ಪಿಟ್ಟು, ದೋಸೆ, ಪಲಾವ್, ಇಡ್ಲಿ, ಮಿರ್ಚಿ ಭಜಿ, ಎಗ್ ರೈಸ್, ಮಾಂಸಾಹಾರಿ ಖಾದ್ಯಗಳನ್ನು ಮಾರಲಾಗುತ್ತಿದೆ. ಇಲ್ಲಿ ಗುಣಮಟ್ಟಕ್ಕೆ ಖಾತ್ರಿ ಇಲ್ಲವಾಗಿದೆ. ನಿತ್ಯ ಕೆಲಸ ಕಾರ್ಯಗಳಿಗೆ ದೂರದ ಊರುಗಳಿಂದ ನಗರಕ್ಕೆ ಬರುವವರು ಅನಿವಾರ್ಯವಾಗಿ ಇಲ್ಲಿ ಆಹಾರ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುವುದು ಮಾಮೂಲಾಗಿದೆ. ಇದೆಲ್ಲಾ ಗೊತ್ತಿದ್ದರೂ ಸ್ಥಳೀಯ ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಆಹಾರ ಸುರಕ್ಷತಾ ಕಾಯ್ದೆಯ ಪ್ರಕಾರ ಹೋಟೆಲ್, ರೆಸ್ಟೋರೆಂಟ್, ಬೀದಿಬದಿ ಹೋಟೆಲ್‌ಗಳು, ಬೇಕರಿಗಳು ಆಹಾರ ಪದಾರ್ಥ ತಯಾರಿಸುವಾಗ ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ತಲೆಯ ಕೂದಲು ಆಹಾರದೊಳಗೆ ಬೀಳದಂತೆ ತಡೆಯಲು ಏಪ್ರಾನ್ ಧರಿಸಿರಬೇಕು. ಆಹಾರ ತಯಾರಿಸುವ ಹಾಗೂ ಮಾರಾಟ ಮಾಡುವ ಅಂಗಳ ಸ್ವಚ್ಛವಾಗಿರಬೇಕು. ಈ ನಿಯಮಗಳೆಲ್ಲಾ ಪುಸ್ತಕಕ್ಕೆ ಸೀಮಿತ ಎಂಬಂತಾಗಿದೆ.
ನಗರದ ಜಿಲ್ಲಾ ಕ್ರೀಡಾಂಗಣ ರಸ್ತೆ, ಜಿಲ್ಲಾ ಆಸ್ಪತ್ರೆ ಮುಂಭಾಗ, ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗ, ಚಳ್ಳಕೆರೆ ಗೇಟ್, ಪಂಚಾಚಾರ್ಯ ಕಲ್ಯಾಣ ಮಂಟಪದ ಮುಂಭಾಗ, ಹೊಳಲ್ಕೆರೆ ರಸ್ತೆ, ಗಾಂಧಿ ವೃತ್ತ, ಹೆದ್ದಾರಿಯ ಸರ್ವೀಸ್ ರಸ್ತೆ, ಕನಕ ವೃತ್ತ ಸೇರಿದಂತೆ ಹಲವೆಡೆ ಗೋಬಿ ಮಂಚೂರಿ, ಪಾನಿ ಪೂರಿ, ಮಸಾಲ ಪೂರಿ ಸಹಿತ ಚಾಟ್ಸ್ ಸೆಂಟರ್‌ಗಳಲ್ಲಿ, ಮಾಂಸಾಹಾರದ ಹೋಟೆಲ್‌ಗಳಲ್ಲಿ, ರಸ್ತೆ ಬದಿಯ ಸಣ್ಣ ಉಪಾಹಾರ ಕೇಂದ್ರಗಳಲ್ಲಿ ಶುಚಿತ್ವ ದೂರದ ಮಾತಾಗಿದೆ. ಕೆಲವು ಕಡೆ ಗ್ರಾಹಕರು ಆಹಾರ ಸೇವಿಸಿದ ಪ್ಲೇಟ್‌ಗಳು, ಟೀ, ಕಾಫಿ ಲೋಟಗಳನ್ನು ಸರಿಯಾಗಿ ತೊಳೆಯದಿರುವ ಬಗ್ಗೆಯೂ ದೂರುಗಳು ಹೆಚ್ಚಾಗಿವೆ.
ಅಸುರಕ್ಷಿತ ಆಹಾರ ಸೇವನೆಯಿಂದ ಅಪೌಷ್ಟಿಕತೆ ಸಮಸ್ಯೆ ಎದುರಾಗುತ್ತದೆ. ದೀರ್ಘಕಾಲೀನ ಸೇವನೆಯಿಂದ ಕ್ಯಾನ್ಸರ್ ಲಿವರ್ ಸಮಸ್ಯೆ ಹೃದ್ರೋಗದಂತಹ ಗಂಭೀರ ಅನಾರೋಗ್ಯ ಕಾಡುವ ಅಪಾಯ ಹೆಚ್ಚು. ಅನಿವಾರ್ಯ ಸಂದರ್ಭದಲ್ಲಿ ಶುಚಿತ್ವ ಗುಣಮಟ್ಟ ನೋಡಿ ಆಹಾರ ಸೇವಿಸಬೇಕು.ಡಾ.ಎಸ್.ಮಧು ತಜ್ಞ ವೈದ್ಯ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಕೇಂದ್ರ
ಫಾಸ್ಟ್‌ಫುಡ್ ಮಾರಾಟ ಕೇಂದ್ರಗಳಲ್ಲಿ ದಿನಪೂರ್ತಿ ಆಹಾರ ಸಿಗುತ್ತದೆ. ನಿಷೇಧಿತ ರಾಸಾಯನಿಕ ಬಳಕೆ ಸಾಮಾನ್ಯವಾಗಿದೆ. ಇದರಿಂದ ಹೊಟ್ಟೆ ಕರುಳಿನ ಸೋಂಕು ಕಾಣಿಸಿಕೊಂಡು ವಾಂತಿ ಭೇದಿಯಾಗುತ್ತದೆ. ಅಧಿಕಾರಿಗಳು ಜಾಗೃತಿ ಮೂಡಿಸಬೇಕುಎನ್.ನಿಧಿ ವೈದ್ಯಕೀಯ ವಿದ್ಯಾರ್ಥಿನಿ
ನಗರದಲ್ಲಿ ಫುಡ್‌ಕೋರ್ಟ್‌ಗೆ ಜಾಗ ಗುರುತಿಸಲಾಗಿದೆ. ಬೀದಿಬದಿ ತಿಂಡಿ ತಿನಿಸು ವ್ಯಾಪಾರಿಗಳು ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದುಗೊಳಿಸುವ ಜತೆಗೆ ಕಠಿಣ ಕ್ರಮ ಜರುಗಿಸಲಾಗುತ್ತದೆಎಸ್.ಲಕ್ಷ್ಮಿ ನಗರಸಭೆ ಪೌರಾಯುಕ್ತೆ
ನಿಯಮಗಳು ಏನು ಹೇಳುತ್ತವೆ ?
ಮಾರಾಟ ಮಾಡುವ ಸ್ಥಳ ಸ್ವಚ್ಛವಾಗಿರಬೇಕು ಆಹಾರ ತಯಾರಿಕೆಗೆ ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ನೀಡಬೇಕು ಸಸ್ಯಾಹಾರ ಮಾಂಸಾಹಾರಕ್ಕೆ ಪ್ರತ್ಯೇಕ ಪಾತ್ರೆ ಪರಿಕರ ಬಳಸಬೇಕು ಸಸ್ಯಾಹಾರ ಮಾಂಸಾಹಾರ ಕಚ್ಚಾ ಮತ್ತು ಬೇಯಿಸಿದ ಆಹಾರ ಪ್ರತ್ಯೇಕವಾಗಿ ಇರಿಸಬೇಕು ಆಹಾರ ತಯಾರಿಸುವಾಗ ಶುಚಿಯಾದ ಬಟ್ಟೆ ಧರಿಸಿರಬೇಕು ಶೌಚಾಲಯ ಬಳಕೆ ಕೆಮ್ಮು ಸೀನಿನ ನಂತರ ಕೈ ತೊಳೆಯಬೇಕು ಆಹಾರ ತ್ಯಾಜ್ಯಕ್ಕಾಗಿ ಪ್ರತ್ಯೇಕ ಹಾಗೂ ಮುಚ್ಚಿದ ಡಸ್ಟ್‌ಬಿನ್ ಬಳಸಬೇಕು
ಹೊಸದುರ್ಗ: ಕಸದ ರಾಶಿಯಲ್ಲೇ ಎಗ್‌ರೈಸ್ ಅಂಗಡಿ
ಪಟ್ಟಣದ ವಿವಿಧೆಡೆ ಬೀದಿ ಬದಿ ಎಗ್‌ರೈಸ್ ಕಬಾಬ್ ಫಿಶ್ ಫ್ರೈ ಮಾರುವ ಗೂಡಂಗಡಿಗಳು ಅವ್ಯವಸ್ಥೆಯ ಆಗರವಾಗಿವೆ. ಸ್ವಚ್ಛತೆ ಇಲ್ಲಿ ಮರೀಚಿಕೆಯಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಪಕ್ಕದಲ್ಲಿ ಎಗ್‌ರೈಸ್ ಕಬಾಬ್ ಚಿಕನ್ ಹಾಗೂ ಫಿಶ್ ಫ್ರೈ ಬಿರಿಯಾನಿ ಸೇರಿದಂತೆ ಹಲವು ಖಾದ್ಯಗಳನ್ನು ಸಿದ್ಧಪಡಿಸಿ ಮಾರಲಾಗುತ್ತದೆ. ನಿತ್ಯ ನೂರಾರು ಜನ ಇಲ್ಲಿಗೆ ಬಂದು ಆಹಾರ ಸೇವಿಸುತ್ತಾರೆ. ಕಸದ ರಾಶಿ ಶೌಚಾಲಯದ ಪಕ್ಕದಲ್ಲೇ ಅಂಗಡಿಗಳಿರುವ ಕಾರಣ ದುರ್ವಾಸನೆ ಬೀರುತ್ತಿದ್ದು ಕುಳಿತುಕೊಳ್ಳಲು ಸುಸಜ್ಜಿತ ಸ್ಥಳಾವಕಾಶವಿಲ್ಲ. ಬೀದಿನಾಯಿಗಳ ದಂಡು ಸದಾ ಅಲ್ಲಿರುತ್ತವೆ. ಕಸದ ರಾಶಿ ಮಧ್ಯೆ ಜನರು ಆಹಾರ ಸವಿಯುವಂತಾಗಿದೆ. ತೆರೆದ ಡ್ರಮ್‌ಗಳಲ್ಲಿ ನೀರು ತುಂಬಿದ್ದು ಕಸದ ಬುಟ್ಟಿ ದೂರದ ಮಾತಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು ಅನಿವಾರ್ಯವಾಗಿ ರಸ್ತೆ ಬದಿ ಮಾರುವ ಎಗ್‌ರೈಸ್ ಹಾಗೂ ಕಬಾಬ್ ಸೇವಿಸುತ್ತಾರೆ. ಒಮ್ಮೆ ಆಹಾರ ಪದಾರ್ಥ ಕರಿದ ನಂತರ ಪುನಃ ಅದೇ ಎಣ್ಣೆ ಬಳಸಿ ಫ್ರೈ ಮಾಡಲಾಗುತ್ತಿದೆ. ಅದನ್ನೇ ಎಗ್‌ರೈಸ್ ಫ್ರೈಡ್ ರೈಸ್ ತಯಾರಿಸಲೂ ಬಳಸಲಾಗುತ್ತದೆ. ನೊಣ ಹಾಗೂ ಸೊಳ್ಳೆ ಕುಳಿತಿರುವ ಆಹಾರ ಪದಾರ್ಥವನ್ನೇ ಗ್ರಾಹಕರಿಗೆ ನೀಡಲಾಗುತ್ತಿದೆ. ಪುರಸಭೆಯಿಂದ ಅನೇಕ ಬಾರಿ ಜಾಗೃತಿ ಮೂಡಿಸಿದರೂ ಅಂಗಡಿಯವರು ಎಚ್ಚೆತ್ತುಕೊಂಡಿಲ್ಲ. ಇಂತಹ ಸ್ಥಳಗಳಲ್ಲಿ ಆಹಾರ ಸೇವಿಸಿದವರ ಆರೋಗ್ಯ ಕ್ರಮೇಣ ಹದಗೆಡುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ‘ಅಂಗಡಿ ಮಾಲೀಕರಿಗೆ ಹಲವು ಬಾರಿ ಜಾಗೃತಿ ಮೂಡಿಸಲಾಗಿದೆ. ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡಲಾಗಿದೆ. ಕೆಲವರಿಗೆ ನೋಟಿಸ್ ಕೊಟ್ಟಿದ್ದು ಹೀಗೆಯೇ ಮುಂದುವರಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ’ ಎಂದು ಪರಿಸರ ಎಂಜಿನಿಯರ್ ರವೀಂದ್ರನಾಥ ಅಂಗಡಿ ತಿಳಿಸಿದ್ದಾರೆ.
ಚಳ್ಳಕೆರೆ: ಬೀದಿಬದಿ ಆಹಾರಕ್ಕೆ ದೂಳಿನ ಮಜ್ಜನ
ನಗರಸಭೆ ನಿರ್ಲಕ್ಷ್ಯದಿಂದ ಇಲ್ಲಿನ ಚಿತ್ರದುರ್ಗ ಬೆಂಗಳೂರು ಬಳ್ಳಾರಿ ಮಾರ್ಗದ ಮುಖ್ಯರಸ್ತೆ ಮತ್ತು ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತ ಗೂಡಂಗಡಿಗಳ ಹಾವಳಿ ದಿನ ದಿನಕ್ಕೂ ಹೆಚ್ಚುತ್ತಿದೆ. ಗೋಬಿ ಎಗ್‌ರೈಸ್ ಬಿರಿಯಾನಿ ಪಾನಿಪೂರಿ ಮುಂತಾದ ತಿಂಡಿ-ತಿನಿಸುಗಳನ್ನು ಅಸುರಕ್ಷಿತವಾಗಿ ತಯಾರಿಸುತ್ತಿರುವುದು ಕಂಡುಬಂದಿದೆ. ಹಲವು ಬಗೆಯ ತಿಂಡಿ ತಯಾರಿಕೆಗೆ ಶುದ್ಧ ನೀರು ಬಳಕೆ ಮಾಡುತ್ತಿಲ್ಲ ಜತೆಗೆ ಕಡಿಮೆ ಗುಣಮಟ್ಟದ ಎಣ್ಣೆ ಬಳಸುತ್ತಿದ್ದಾರೆ. ಆಕರ್ಷಕವಾಗಿ ಕಾಣಲು ತಿಂಡಿಗೆ ಬಣ್ಣ ಮತ್ತು ರುಚಿಗೆ ಟೇಸ್ಟಿಂಗ್ ಪೌಡರ್ ಬಳಕೆ ಮಾಡುವುದು ಸಾಮಾನ್ಯವಾಗಿದೆ. ರಸ್ತೆ ಬದಿ ಅಂಗಡಿಯಲ್ಲಿ ಆಹಾರ ಪದಾರ್ಥ ತಯಾರಿಸುವಾಗ ಅದರ ಮೇಲೆ ದೂಳು ಕುಳಿತುಕೊಳ್ಳುತ್ತದೆ. ಈ ತಿಂಡಿ-ತಿನಿಸು ಜನರ ಆರೋಗ್ಯದ ಮೇಲೆ ತೀವ್ರತರ ಪರಿಣಾಮ ಉಂಟುಮಾಡುತ್ತಿದೆ. ಅನುಪಯುಕ್ತ ಮಾಂಸದ ಮೂಳೆ ಮೊಟ್ಟೆ ಮೀನಿನ ತ್ಯಾಜ್ಯದ ನೀರನ್ನು ನಡುರಸ್ತೆಗೆ ಸುರಿಯಲಾಗುತ್ತದೆ. ಇದರಿಂದ ಗೂಡಂಗಡಿ ಸುತ್ತಮುತ್ತ ಕೊಳಚೆ ತುಂಬಿರುತ್ತದೆ. ಇದರಿಂದಾಗಿ ಖಾಸಗಿ ಬಸ್ ನಿಲ್ದಾಣದ ಸುತ್ತ ನೆಲೆಸಿರುವ ಕುಟುಂಬಗಳು ನರಕ ಯಾತನೆ ಅನುಭವಿಸುವಂತಾಗಿದೆ. ಗುಣಮಟ್ಟದ ಜತೆಗೆ ಸ್ವಚ್ಛತೆ ಕಾಪಾಡುವಂತೆ ರಸ್ತೆ ಬದಿಯ ಗೂಡಂಗಡಿ ವ್ಯಾಪಾರಿಗಳಿಗೆ ಸಲಹೆ ನೀಡಬೇಕು. ಉದಾಸೀನ ತೋರುವವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಜಿಲ್ಲಾ ನವ ಜಾಗೃತಿ ಯುವ ವೇದಿಕೆಯು ಪೌರಾಯುಕ್ತರನ್ನು ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.