ಚಿತ್ರದುರ್ಗ: ನಗರದ ಬುದ್ಧ ವೃತ್ತದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ಸಣ್ಣಪುಟ್ಟ ವರ್ತಕರು ಗುರುವಾರದಿಂದ ಸ್ಟೇಡಿಯಂ ಪಕ್ಕದ ಫುಟ್‌ಪಾತ್‌ನಲ್ಲಿ ಒಂದೇ ಸೂರಿನಡಿಗೆ ಸ್ಥಳಾಂತರಗೊಂಡರು. ನಿತ್ಯದ ಮಾರುಕಟ್ಟೆಗೆ ‘ಸಾಲುಮರದ ತಿಮ್ಮಕ್ಕ ತರಕಾರಿ ಮಾರುಕಟ್ಟೆ’ ಎಂದು ನಾಮಕರಣ ಮಾಡಲಾಯಿತು.
33ನೇ ವಾರ್ಡ್ ನಗರಸಭಾ ಸದಸ್ಯೆ ಶ್ರೀದೇವಿ ಚಕ್ರವರ್ತಿ ಮಾರುಕಟ್ಟೆಯ ನಾಮಫಲಕ ಅನಾವರಣಗೊಳಿಸಿದರು. ಜೊತೆಗೆ ತರಕಾರಿ ಮಾರುವ ಮಹಿಳೆಯರನ್ನು ಸನ್ಮಾನಿಸಿದರು. ಪ್ರತಿದಿನ ಬುದ್ಧ ಸರ್ಕಲ್‌ನಲ್ಲಿ ನಡೆಯುತ್ತಿದ್ದ ಮಾರುಕಟ್ಟೆಯಿಂದ ವಾಹನಗಳ ಓಡಾಟಕ್ಕೆ ತೊಡಕಾಗಿತ್ತು. ಟ್ರಾಫಿಕ್ ಜಾಮ್‌ನಿಂದ ವರ್ತಕರು, ಗ್ರಾಹಕರು ಸಮಸ್ಯೆ ಅನುಭವಿಸುತ್ತಿದ್ದರು. ಸ್ಟೇಡಿಯಂ ಬದಿಯಲ್ಲಿ ಸಾಕಷ್ಟು ಜಾಗವಿದ್ದ ಕಾರಣ ತರಕಾರಿ ಮಾರುಕಟ್ಟೆಯನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಯಿತು.
‘ಬುದ್ಧ ಸರ್ಕಲ್ ಸುತ್ತಮುತ್ತಲಿನ ಬಡಾವಣೆಯ ಜನರು ನಗರದ ಮುಖ್ಯ ಮಾರುಕಟ್ಟೆಗೆ ತೆರಳುವ ಬದಲು ಸ್ಥಳೀಯವಾಗಿಯೇ ತರಕಾರಿ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸರ್ಕಲ್‌ನಲ್ಲಿ ಜಾಗದ ಕೊರತೆ ಇದ್ದ ಕಾರಣ ಈಗ ಒಂದೇ ಸೂರಿನಡಿಗೆ ತರಲಾಗಿದೆ. ವರ್ತಕರಿಗೆ ಆರಂಭದಲ್ಲಿ ನಷ್ಟವಾಗಬಹುದು. ಅವರಿಗೆ ನಾವು ಎಲ್ಲಾ ರೀತಿಯ ಸಹಾಯ ಮಾಡುತ್ತೇವೆ. ನಮ್ಮ ಈ ಪ್ರಯತ್ನದಿಂದ ಸಾಲುಮರದ ತಿಮ್ಮಕ್ಕ ಅವರಿಗೂ ಗೌರವಿಸಿದಂತಾಗಿದೆ’ ಎಂದು ಶ್ರೀದೇವಿ ಚಕ್ರವರ್ತಿ ಸಂತಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.