ADVERTISEMENT

ಬೀದಿ ಬದಿ ವ್ಯಾಪಾರಿಗಳ ಬಂದ್: ವ್ಯಾಪಕ ಬೆಂಬಲ

ಚಳ್ಳಕೆರೆಯಲ್ಲಿ ಎಐಟಿಯುಸಿ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 3:19 IST
Last Updated 24 ಜುಲೈ 2025, 3:19 IST
ಚಳ್ಳಕೆರೆಯ ನೆಹರೂ ವೃತ್ತದಲ್ಲಿ ಬೀದಿಬದಿ ವ್ಯಾಪಾರಿಗಳು ಮಾನವ ಸರಪಳಿ ನಿರ್ಮಿಸಿ ಬಂದ್‌ ಕೈಗೊಂಡರು
ಚಳ್ಳಕೆರೆಯ ನೆಹರೂ ವೃತ್ತದಲ್ಲಿ ಬೀದಿಬದಿ ವ್ಯಾಪಾರಿಗಳು ಮಾನವ ಸರಪಳಿ ನಿರ್ಮಿಸಿ ಬಂದ್‌ ಕೈಗೊಂಡರು   

ಚಳ್ಳಕೆರೆ: ಇಲ್ಲಿನ ಮುಖ್ಯರಸ್ತೆಗಳ ಬದಿ ಇರುವ ವಿವಿಧ ಅಂಗಡಿಗಳನ್ನು ತೆರವು ಮಾಡುವುದನ್ನು ವಿರೋಧಿಸಿ ನಗರಸಭೆ ಅಧಿಕಾರಿಗಳ ವಿರುದ್ಧ ಎಐಟಿಯುಸಿ ನೇತೃತ್ವದಲ್ಲಿ ಬೀದಿಬದಿ ವ್ಯಾಪರಿಗಳು ಬುಧವಾರ ಹಮ್ಮಿಕೊಂಡಿದ್ದ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಬೆಳಿಗ್ಗೆ 7 ಗಂಟೆಗೆ ನಗರದ ಪಾವಗಡ ರಸ್ತೆ, ಬಳ್ಳಾರಿ, ಬೆಂಗಳೂರು ಹಾಗೂ ಚಿತ್ರದುರ್ಗ ಮಾರ್ಗದ ಮುಖ್ಯರಸ್ತೆ, ಬೀದಿ ಬದಿ ಗೂಡಂಗಡಿ, ಹೋಟೆಲ್, ಗ್ಯಾರೇಜ್, ಹೂವು– ಹಣ್ಣು, ತರಕಾರಿ ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಬಾಗಿಲು ಮುಚ್ಚಿ ಬಂದ್‌ನಲ್ಲಿ ಪಾಲ್ಗೊಂಡಿದ್ದರು.

ಹೀಗಾಗಿ ಬೆಳಿಗ್ಗೆ 7ರಿಂದ ಸಂಜೆ 4 ಗಂಟೆವರೆಗೆ ನಗರದ ಬೀದಿಬದಿಯಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಯಲಿಲ್ಲ. ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟ ಎಂದಿನಂತೆ ಇತ್ತು.

ADVERTISEMENT

ಬೆಂಗಳೂರು ರಸ್ತೆ ಮಾರುಕಟ್ಟೆ ಯಾರ್ಡ್‍ನಿಂದ ಹೊರಟ ನೂರಾರು ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನಾ ಮೆರವಣಿಗೆ ನೆಹರೂ ವೃತ್ತ ತಲುಪಿತು. ವಿವಿಧ ಘೋಷಣೆ ಕೂಗಿದ ಪ್ರತಿಭಟನಕಾರರು ನೆಹರೂ ವೃತ್ತದಲ್ಲಿ 20 ನಿಮಿಷ ಮಾನವ ಸರಪಳಿ ನಿರ್ಮಿಸಿದರು. ನಂತರ ತಾಲ್ಲೂಕು ಕಚೇರಿ ಹಾಗೂ ನಗರಸಭೆ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಬೀದಿಬದಿ ವ್ಯಾಪಾರಿಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ವೈ. ಶಿವರುದ್ರಪ್ಪ ಮಾತನಾಡಿ, ‘ಬೀದಿಬದಿ ವ್ಯಾಪಾರಿಗಳು, ಟೀ, ಕಾಫಿ, ಗಂಜಿ, ಇಡ್ಲಿ ಮತ್ತು ಹೂವು, ಹಣ್ಣು ಹಾಗೂ ತರಕಾರಿ ಅತ್ಯಂತ ಕಡಿಮೆ ದರದಲ್ಲಿ ರೋಗಿಗಳಿಗೆ ಹಾಗೂ ಜನ ಸಾಮಾನ್ಯರಿಗೆ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಅಂಗಡಿಗಳನ್ನು ಏಕಾಏಕಿ ಧ್ವಂಸಗೊಳಿಸಿರುವುದಲ್ಲದೆ ದೌರ್ಜನ್ಯ ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ’ ಎಂದು ಪೌರಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಎಲೆ ತಿಪ್ಪೇಸ್ವಾಮಿ ಮಾತನಾಡಿ, ‘ಮುಖ್ಯರಸ್ತೆ ಜಾಗ ಆಕ್ರಮಿಸಿಕೊಂಡು ಪಾದಚಾರಿಗಳ ಓಡಾಟಕ್ಕೆ ತೊಂದರೆ ಮಾಡುತ್ತಿರುವ ಮೆಟಲ್, ಪ್ರಾವಿಜನ್ ಸ್ಟೋರ್ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಅಸಹಾಯಕ ಬೀದಿಬಿದಿ ವ್ಯಾಪಾರಿಗಳಿಗೆ ಕಾನೂನಿನ ಭಯ ತೋರಿಸುತ್ತಿರುವುದನ್ನು ಕೈಬಿಡಬೇಕು. ಅಂಗಡಿ ತೆರವಿಗೆ ಕಾಲಾವಕಾಶ ನೀಡಬೇಕು. ಇಲ್ಲದೆ ಹೋದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ನಗರಸಭೆ ಅಧ್ಯಕ್ಷೆ ಶಿಲ್ಪಾ, ಶಿರಸ್ತೇದಾರ್ ಸದಾಶಿವಯ್ಯ ಅವರಿಗೆ ಮನವಿ ಸಲ್ಲಿಸಿದರು.

ಬಿ.ಪಾಟೇಲ್, ಪ್ರಧಾನ ಕಾರ್ಯದರ್ಶಿ ವೀರೇಂದ್ರಯ್ಯ, ಕಾರ್ಯದರ್ಶಿ ಎಸ್. ಸುರೇಶ್, ಖಂಜಾಂಚಿ ವರಲಕ್ಷ್ಮೀ, ಮಂಜುಳಾ, ಓಬಳೇಶ್, ತಿಪ್ಪೇಸ್ವಾಮಿ, ಗೌರಮ್ಮ, ವಿಶಾಲಾಕ್ಷಮ್ಮ, ರುದ್ರಮ್ಮ, ಹಣ್ಣಿನ ಅಂಗಡಿ ವೆಂಕಟೇಶ್, ನಾಗರಾಜ, ಮಂಜುನಾಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.