ಚಿತ್ರದುರ್ಗ: ‘ಹಿರಿಯ ನಾಗರಿಕರ ನೆಮ್ಮದಿಯ ಜೀವನಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಹಿರಿಯರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ವಂಚನೆ ಎಸಗಿದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಪ್ರತಿಯೊಬ್ಬರ ಜೀವನದಲ್ಲಿಯೂ ಬಾಲ್ಯ, ಯೌವ್ವನ ಹಾಗೂ ಮುಪ್ಪು ಸಹಜವಾದುದು. ಬಾಲ್ಯದಲ್ಲಿ ಮಕ್ಕಳು ಯಾರ ಮಾತೂ ಕೇಳದೆ ತಮಗೆ ತೋಚಿದ್ದನ್ನು ಮಾಡುತ್ತಾರೆ. ಇದೇ ರೀತಿ ಇಳಿ ವಯಸ್ಸಿನಲ್ಲೂ ಹಿರಿಯರು ಮಕ್ಕಳ ಹಾಗೆಯೇ ವರ್ತಿಸುತ್ತಾರೆ. ಮಕ್ಕಳನ್ನು ಜೋಪಾನ ಮಾಡುವ ರೀತಿಯಲ್ಲಿಯೇ ಹಿರಿಯರ ಕಾಳಜಿ ವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದರು.
‘ಸರ್ಕಾರ ಹಿರಿಯ ನಾಗರಿಕರಿಕರ ಕಲ್ಯಾಣ ಇಲಾಖೆಯಡಿ ಹಿರಿಯ ನಾಗರಿಕರ ಕ್ಷೇಮ, ಶ್ರೇಯೋಭಿವೃದ್ಧಿ ಹಾಗೂ ನೆಮ್ಮದಿ ಜೀವನಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಿರಿಯರು ಗಳಿಸಿದ ಆಸ್ತಿ ಪಡೆದು ಮನೆಯಿಂದ ಹೊರ ಹಾಕುವುದು ಕಂಡುಬಂದರೆ ಅಂಥವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ’ ಎಂದರು.
‘ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಹಿರಿಯ ನಾಗರಿಕರಿಗಾಗಿ ಶೇ 3ರಷ್ಟು ಅನುದಾನವನ್ನು ಮೀಸಲಿರಿಸಲಾಗಿದೆ. ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಈ ಅನುದಾನವನ್ನು ಬಳಸಿಕೊಳ್ಳಲು ಅವಕಾಶವಿದೆ’ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ ಮಾತನಾಡಿ ’ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸಿ ಕುಟುಂಬವನ್ನು ಪೋಷಿಸಿ ಸಮಾಜದಲ್ಲಿ ಉತ್ತಮ ನೆಲೆ ದೊರಕಿಸಿಕೊಟ್ಟ ಹಿರಿಯರ ಕ್ಷೇಮದ ಜವಾಬ್ದಾರಿ ಯುವ ಜನತೆ ಮೇಲಿದೆ. ಇದನ್ನು ಆದ್ಯ ಕರ್ತವ್ಯ ಎಂದು ಭಾವಿಸಿ ಕುಟುಂಬದ ಸದಸ್ಯರೆಲ್ಲರೂ ಹಿರಿಯರನ್ನು ಗೌರವ ಆದರಗಳಿಂದ ಕಾಣಬೇಕು’ ಎಂದು ಹೇಳಿದರು.
‘60 ವರ್ಷ ಮೇಲ್ಪಟ್ಟವರಿಗೆ ವೃದ್ಧಾಪ್ಯ ವೇತನದಡಿ ₹ 800, ಸಂಧ್ಯಾ ಸುರಕ್ಷಾ ಯೋಜನೆಯಡಿ ₹ 1200 ಪ್ರತಿ ತಿಂಗಳು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಸರ್ಕಾರಿ ಬಸ್ ದರದಲ್ಲಿ ಶೇ 25ರಷ್ಟು ರಿಯಾಯಿತಿ ನೀಡಲಾಗಿದೆ. 60 ವರ್ಷದ ನಂತರ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಗಮನಹರಿಸಬೇಕು’ ಎಂದರು.
ಎಎಸ್‌ಪಿ ಶಿವಕುಮಾರ ಮಾತನಾಡಿ, ‘ಹಿರಿಯ ನಾಗರಿಕರು, ದೌರ್ಜನ್ಯ ಹಾಗೂ ವಂಚನೆಗೆ ಒಳಗಾದಲ್ಲಿ ಹಿಂಜರಿಯದೇ ಪೊಲೀಸ್ ಠಾಣೆಯ ಮೆಟ್ಟಿಲೇರಬೇಕು. ಪೊಲೀಸ್ ಠಾಣೆ ಹಾಗೂ ನ್ಯಾಯಾಲಯಗಳು ದುರ್ಬಲರ ರಕ್ಷಣೆಗಾಗಿಯೇ ಕರ್ತವ್ಯ ನಿರ್ವಹಿಸುತ್ತವೆ. ಹಿರಿಯ ನಾಗರಿಕರು ತಮಗೆ ತೊಂದರೆಯಾದಲ್ಲಿ ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ 94808 03100 ಅಥವಾ 94808 03102ಕ್ಕೆ ಕರೆ ಮಾಡಬೇಕು’ ಎಂದು ಸಲಹೆ ನೀಡಿದರು.
ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ‘ನಮ್ಮ ಯೋಗಕ್ಷೇಮ ಮತ್ತು ನಮ್ಮ ಹಕ್ಕುಗಳನ್ನು ಸ್ಥಳೀಯ ಮತ್ತು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬಲ್ಲ ಸಶಕ್ತರು’ ನಾವು ಎಂಬ ಘೋಷವಾಕ್ಯದೊಂದಿಗೆ 2025ರ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ’ ಎಂದರು.
ನಗರಸಭೆ ಅಧ್ಯಕ್ಷೆ ಅನಿತಾ ರಮೇಶ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್‍ಕುಮಾರ್, ನಿವೃತ್ತ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಬಿ.ಪಿ. ಪ್ರೇಮನಾಥ್, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಆರ್. ರಂಗಪ್ಪ ರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.