ಚಿತ್ರದುರ್ಗ: ವಿದ್ಯಾರ್ಥಿಯನ್ನು ಅಮಾನುಷವಾಗಿ ಥಳಿಸಿದ್ದ ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ವೀರಶೈವ ಆಗಮ ವೇದ ಸಂಸ್ಕೃತ ಪಾಠಶಾಲೆಯ ಶಿಕ್ಷಕ ವೀರೇಶ್ ಹಿರೇಮಠನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ವಿದ್ಯಾರ್ಥಿಗೆ ಥಳಿಸುವ ವಿಡಿಯೊ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ದೇವಾಲಯದ ಹೊರಗಿರುವ ಅಂಗಡಿಯೊಂದರ ಮಾಲೀಕರೊಬ್ಬರಿಂದ ಮೊಬೈಲ್ ಪಡೆದಿದ್ದ ವಿದ್ಯಾರ್ಥಿ ತನ್ನ ಅಜ್ಜಿಗೆ ಕರೆ ಮಾಡಿದ್ದ ಎಂಬ ಕಾರಣಕ್ಕೆ ಕೋಪಗೊಂಡಿದ್ದ ಶಿಕ್ಷಕ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದ.
‘ಬೇಡ ಗುರೂಜಿ ಹೊಡೆಯಬೇಡಿ’ ಎಂದು ಬೇಡಿಕೊಂಡರೂ ಶಿಕ್ಷಕ ಹಲವು ಬಾರಿ ಬಡಿದು, ಒದ್ದು ಹಲ್ಲೆ ಮಾಡಿದ್ದ. ಎಂಟು ತಿಂಗಳ ಹಿಂದೆ ಫೆ.11ರಂದು ನಡೆದಿತ್ತು. ವಿಡಿಯೊ ಈಗ ಜಾಲತಾಣಗಳಲ್ಲಿ ಹರಿದಾಡಿದ್ದು ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
‘ಪೊಲೀಸರು ಹಾಗೂ ದೇವಸ್ಥಾನದ ಕಾರ್ಯನಿವಾಹಕ ಅಧಿಕಾರಿಗಳಿಂದ ಮಾಹಿತಿ ಪಡೆದ ತಹಶೀಲ್ದಾರ್, ಶಿಕ್ಷಕನನ್ನು ಅಮಾನತುಗೊಳಿಸಿದ್ದಾರೆ. ಜೊತೆಗೆ ನಾಯಕನಹಟ್ಟಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಈ ದೇವಾಲಯ ‘ಎ’ ಗ್ರೇಡ್ ಮಾನ್ಯತೆ ಹೊಂದಿದೆ. ದೇಗುಲ ಆಡಳಿತ ಮಂಡಳಿಯು ಆಗಮ ವೇದ ಸಂಸ್ಕೃತ ಪಾಠಶಾಲೆ ನಡೆಸುತ್ತಿದೆ. ಸದ್ಯ ಪಾಠಶಾಲೆಯಲ್ಲಿ ನಾಲ್ವರು ವಿದ್ಯಾರ್ಥಿಗಳಿದ್ದು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.