ಹಿರಿಯೂರು: ‘ವಿದ್ಯಾರ್ಥಿಗಳು ಹೋಂವರ್ಕ್ ಬದಲು, ಹಾರ್ಡ್‌ವರ್ಕ್ ಮಾಡಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ತಾಲ್ಲೂಕಿನ ಗೊಲ್ಲಹಳ್ಳಿಯ ಜೆಟ್ ಸಿಬಿಎಸ್‌ಇ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಹಳ್ಳಿ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಪರಿಶ್ರಮಪಟ್ಟರೆ ಯಶಸ್ಸು ಸಾಧ್ಯ. 10 ವರ್ಷ ಇದ್ದಾಗ ಥೇನ್ ಸಿಂಗ್ ಅವರ ತಾಯಿ ಹಿಮಾಲಯ ಪರ್ವತ ಹತ್ತುತ್ತೀಯಾ ಎಂದು ಕೇಳಿದ್ದರಂತೆ. ಹೌದು ಹತ್ತುತ್ತೇನೆ ಎಂದಿದ್ದ ಥೇನ್ ಸಿಂಗ್, ಅಂದಿನಿಂದ ಹಿಮಾಲಯ ಪರ್ವತ ಏರುವ ಕನಸನ್ನು ಕಂಡಿದ್ದಲ್ಲದೆ, ಸತತ ಪರಿಶ್ರಮದಿಂದ ಜೀವನದಲ್ಲಿ ಅದನ್ನು ಸಾಧಿಸಿ ತೋರಿಸಿದ. ಹೀಗೆ ಮಕ್ಕಳು ತಾವು ಕಾಣುವ ಕನಸನ್ನು ಪರಿಶ್ರಮದ ಮೂಲಕ ನನಸು ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
‘ಅತಿ ವೇಗವಾಗಿ ಹೋಗುವ ವಾಹನಕ್ಕೆ ಜೆಟ್ ಎಂದು ಕರೆಯುತ್ತಾರೆ. ನೀವು ಓದುತ್ತಿರುವ ಶಾಲೆಯ ಹೆಸರು ಜೆಟ್. ನಿಮ್ಮ ಬೆಳವಣಿಗೆ ಸಹ ವಿಭಿನ್ನವಾಗಿದೆ. ಹಂಸವು ಸರಸ್ವತಿಯ ವಾಹನ, ಅಂತೆಯೇ ನಿಮ್ಮ ಬದುಕಿಗೆ ಜೆಟ್ ಹಂಸವಿದ್ದಂತೆ’ ಎಂದು ಹೇಳಿದರು.
ಜೆಟ್ ಶಾಲೆಯಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಹಣ್ಣು–ತರಕಾರಿಗಳು, ಮನೆಯಲ್ಲಿ ತಯಾರಿಸಿದ ತಿಂಡಿ–ತಿನಿಸುಗಳು, ಕಾಳುಗಳು ಮಾರಾಟವಾದವು.
500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾವು ತಂದ ಪದಾರ್ಥಗಳನ್ನು ಮಾರಾಟ ಮಾಡುವ ಮೂಲಕ ವ್ಯಾವಹಾರಿಕ ಜ್ಞಾನವನ್ನು ಹೆಚ್ಚಿಸಿಕೊಂಡರು.
ಎರಡು ದಿನಗಳಿಂದ ನಡೆಯುತ್ತಿರುವ ಸಂಕ್ರಾಂತಿ ಹಬ್ಬದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ, ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ವಿಷಯಗಳ ವಸ್ತು ಪ್ರದರ್ಶನ ಹಾಗೂ ಜಾನಪದ ಮತ್ತು ಜ್ಞಾನದ ಆಧಾರದ ಚಟುವಟಿಕೆಗಳು ನಡೆದವು.
ಶಾಲೆಯ ಅಧ್ಯಕ್ಷರಾದ ಚಂದ್ರಶೇಖರ ಬೆಳಗೆರೆ, ಕಾರ್ಯದರ್ಶಿ ಎನ್.ಗಿರಿಜಾ, ಮಾಜಿ ಕಾರ್ಯದರ್ಶಿ ಬಿ.ಎಸ್.ಮಲ್ಲಿಕಾರ್ಜುನ, ಪ್ರಾಂಶುಪಾಲ ಷಣ್ಮುಗ ಸುಂದರಂ ಹಾಗೂ ಸಮಾಜ ಸೇವಕಿ ಶಶಿಕಲಾ ರವಿಶಂಕರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.