ADVERTISEMENT

ಪ್ರಾಂಶುಪಾಲರಿಗೆ ಪತ್ರಬರೆದು ಬಾಲ್ಯವಿವಾಹ ತಪ್ಪಿಸಿಕೊಂಡ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 19:50 IST
Last Updated 16 ಸೆಪ್ಟೆಂಬರ್ 2025, 19:50 IST
<div class="paragraphs"><p>ಬಾಲ್ಯ ವಿವಾಹ</p></div>

ಬಾಲ್ಯ ವಿವಾಹ

   

ಮೊಳಕಾಲ್ಮುರು (ಚಿತ್ರದುರ್ಗ): ಪಿಯುಸಿ ವಿದ್ಯಾರ್ಥಿನಿಯೊಬ್ಬಳು, ತಾನು ಓದುತ್ತಿದ್ದ ಕಾಲೇಜಿನ ಪ್ರಾಂಶುಪಾಲರಿಗೆ ಮಂಗಳವಾರ, ತನ್ನ ಮದುವೆಗೆ ಸಿದ್ಧತೆ ನಡೆಯುತ್ತಿರುವ ಕುರಿತು ಪತ್ರ ಬರೆದು ಬಾಲ್ಯವಿವಾಹದಿಂದ ಪಾರಾಗಿದ್ದಾಳೆ.

ತಾಲ್ಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿ, ಬೆಳಿಗ್ಗೆ ಪ್ರಾಂಶುಪಾಲರ ಕಚೇರಿಗೆ ತೆರಳಿ ಅವರಿಗೆ ಪತ್ರ ನೀಡಿದ್ದಳು. ‘ಸಂಬಂಧಿಕರ ಮಗನೊಂದಿಗೆ ಇದೇ 22ರಂದು ಮದುವೆ ನಿಗದಿ ಆಗಿದೆ. ನನಗಿನ್ನೂ 18 ವರ್ಷ ತುಂಬಿಲ್ಲ. ಓದು ಬಿಟ್ಟು ಮದುವೆಯಾಗಲು ಇಷ್ಟವಿಲ್ಲ. ಸಹಾಯ ಮಾಡಿ’ ಎಂದು ಕೋರಿದ್ದಳು. ಇದನ್ನು ಪೊಲೀಸ್‌ ಹಾಗೂ ಸಿಡಿಪಿಒ ಗಮನಕ್ಕೆ ತರಲಾಯಿತು.

ADVERTISEMENT

‘ಬಾಲಕಿ ಪಾಲಕರನ್ನು ಠಾಣೆಗೆ ಕರೆಸಿ ‘ಬಾಲಕಿ ಇಚ್ಛೆಗೆ ವಿರುದ್ಧವಾಗಿ ವಿವಾಹ ಮಾಡುವುದೂ ಅಪರಾಧ’ ಎಂದು ತಿಳಿವಳಿಕೆ ನೀಡಲಾಯಿತು’.  ಈಗ ವಿವಾಹ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಳ್ಳಲಾಯಿತು’ ಎಂದು ಪಿಎಸ್‌ಐ ಮಹೇಶ್‌ ಹೊಸಪೇಟೆ ಹೇಳಿದರು.

‘ದೂರು ನೀಡಿರುವ ಬಾಲಕಿ ಓದಿನಲ್ಲಿ ಮುಂದಿದ್ದಾಳೆ. ಸಹಾಯ ಕೋರಿ ಮನವಿ ಮಾಡಿದಾಗ ನೆರವು ನೀಡುವುದು ನನ್ನ ಕರ್ತವ್ಯ. ಮಕ್ಕಳ ಇಷ್ಟಕ್ಕೆ ವಿರುದ್ಧವಾಗಿ ಮದುವೆ ಮಾಡುವುದು ಸರಿಯಲ್ಲ’ ಎಂದು ಪ್ರಾಂಶುಪಾಲ ಡಿ. ಗೋವಿಂದಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.