ADVERTISEMENT

ಚಿತ್ರದುರ್ಗ: ಶಿಕ್ಷಣಕ್ಕಾಗಿ ನಿತ್ಯ 8 ಕಿ.ಮೀ ಕಾಲ್ನಡಿಗೆ!

ಧರ್ಮಪುರ ಹೋಬಳಿಯ ಬೆನಕನಹಳ್ಳಿ ಗ್ರಾಮಕ್ಕಿಲ್ಲ ಬಸ್‌ ಸೌಲಭ್ಯ

ವಿ.ವೀರಣ್ಣ
Published 25 ಜುಲೈ 2022, 19:34 IST
Last Updated 25 ಜುಲೈ 2022, 19:34 IST
ಧರ್ಮಪುರದಲ್ಲಿರುವ ಶಾಲೆ–ಕಾಲೇಜುಗಳಿಗೆ ನಡೆದುಕೊಂಡೇ ಹೋಗುತ್ತಿರುವ ಬೆನಕನಹಳ್ಳಿಯ ವಿದ್ಯಾರ್ಥಿಗಳು
ಧರ್ಮಪುರದಲ್ಲಿರುವ ಶಾಲೆ–ಕಾಲೇಜುಗಳಿಗೆ ನಡೆದುಕೊಂಡೇ ಹೋಗುತ್ತಿರುವ ಬೆನಕನಹಳ್ಳಿಯ ವಿದ್ಯಾರ್ಥಿಗಳು   

ಧರ್ಮಪುರ: ಸಮೀಪದ ಬೆನಕನಹಳ್ಳಿಗೆ ಬಸ್‌ ಸೌಕರ್ಯವೇ ಇಲ್ಲದ್ದರಿಂದ ವಿದ್ಯಾರ್ಥಿಗಳು ನಿತ್ಯ 8 ಕಿ.ಮೀ.ವರೆಗೂ ನಡಿಗೆಯ ಮೂಲಕವೇ ಧರ್ಮಪುರಕ್ಕೆ ಬಂದು ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ ಇದೆ.

‘ಅತ್ಯಂತ ಹಿಂದುಳಿದ ಗ್ರಾಮ’ವಾಗಿರುವ ಇಲ್ಲಿ ಪರಿಶಿಷ್ಟ ಜಾತಿ/ ಪಂಗಡ, ಕಾಡುಗೊಲ್ಲ ಮತ್ತು ಹಿಂದುಳಿದ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಗ್ರಾಮಕ್ಕೆ ಸಮರ್ಪಕ ರಸ್ತೆ ಇಲ್ಲ. ಧರ್ಮಪುರ ಸಂಪರ್ಕಿಸಲು ಅತ್ಯಂತ ಕಿರಿದಾದ ರಸ್ತೆ ಇದೆ. ರಸ್ತೆಯ ಅಕ್ಕ–ಪಕ್ಕದಲ್ಲಿ ದಟ್ಟವಾಗಿ ಬೆಳೆದ ಜಾಲಿ ಗಿಡಗಳ ನಡುವೆ ವಿದ್ಯಾರ್ಥಿಗಳು ಭಯದಲ್ಲೇ ಹೆಜ್ಜೆ ಹಾಕುವ ಮೂಲಕ, ಧರ್ಮಪುರದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಿಯುಸಿ ಮತ್ತು ಪದವಿ ಕಾಲೇಜು ತಲುಪುತ್ತಿದ್ದಾರೆ.

ಇಲ್ಲಿ ಮೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿವೆ. ಅಲ್ಲಿಂದ ಮುಂದಿನ ಹಂತದ ಶಿಕ್ಷಣ ಪಡೆಯುವುದಕ್ಕೆ ಪಕ್ಕದೂರಿಗೆ ತೆರಳಲು ಬಸ್ ಮತ್ತು ಆಟೊ ಸೇರಿದಂತೆ ಸಾರ್ವಜನಿಕ ಸಾರಿಗೆ ಸೌಲಭ್ಯವಿಲ್ಲ. ಈ ಕಾರಣದಿಂದ ಅನೇಕ ವಿದ್ಯಾರ್ಥಿಗಳು ಓದನ್ನು ನಿಲ್ಲಿಸುತ್ತಿದ್ದಾರೆ.

ADVERTISEMENT

ಬೆಳಿಗ್ಗೆ 8ಗಂಟೆಗೇ ಮನೆಯಿಂದ ಕಾಲ್ನಡಿಗೆಯಲ್ಲಿ ಹೊರಟು ಶಾಲೆ, ಕಾಲೇಜು ಸೇರಿಕೊಳ್ಳಬೇಕು. ಮರಳಿ ಮನೆ ಸೇರುವಷ್ಟೊತ್ತಿಗೆ ಸಂಜೆ 6 ಗಂಟೆಯಾಗುತ್ತದೆ. ನಡೆದು ಹೋಗಿ, ಬರುವ ಮಕ್ಕಳ ಬಗ್ಗೆ ನಿತ್ಯವೂ ಪಾಲಕರಲ್ಲಿ ಆತಂಕ ಇದೆ.

ರಸ್ತೆ ಮತ್ತು ಬಸ್ ಸೌಲಭ್ಯಕ್ಕಾಗಿ 20 ವರ್ಷಗಳಿಂದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಿದ್ದು, ಈ ಬಗ್ಗೆ ನೀಡಲಾದ ಆಶ್ವಾಸನೆ ಇದುವರೆಗೆ ಈಡೇರಿಲ್ಲ ಎಂದು ಗ್ರಾಮಸ್ಥರು ‘ಪ್ರಜಾವಾಣಿ’ ಎದುರು ತಮ್ಮ ಅಳಲು ತೋಡಿಕೊಂಡರು.

‘ನಮಗೆ ಕಲಿಕೆಯಲ್ಲಿ ಆಸಕ್ತಿ ಇದೆ. ಆದರೆ, ದಿನವೂ ಕಾಲ್ನಡಿಗೆಯಲ್ಲಿಯೇ ಕಾಲೇಜಿಗೆ ಹೋಗಿ, ಬರಬೇಕಾಗಿದ್ದರಿಂದ ಕೆಲವು ಪಾಲಕರು ಮಕ್ಕಳನ್ನು ಕಳಿಸಲು ಹಿಂದೇಟು ಹಾಕುತ್ತಾರೆ. ಸಂಬಂಧಿಸಿದವರು ಗಮನಹರಿಸಿ, ಬಸ್‌ ಸೌಲಭ್ಯ ಕಲ್ಪಿಸಬೇಕು’ ಎಂದು ಪದವಿ ಕಲಿಯುತ್ತಿರುವ ಬಿ.ಆರ್. ಲಕ್ಷ್ಮಿ ಮತ್ತು ಕಾವ್ಯಾ ಕೋರಿದರು.

‘ಗ್ರಾಮದ ಸಮಸ್ಯೆ ಕುರಿತು ಮಾಹಿತಿ ಇದೆ. ಕಿರಿದಾದ ರಸ್ತೆ ಇರುವುದರಿಂದ ಬಸ್ ಸೌಲಭ್ಯ ದೊರೆತಿಲ್ಲ. ರಸ್ತೆ ಅಭಿವೃದ್ಧಿ ಕಾರ್ಯ ಆರಂಭವಾಗಿದ್ದು, ಬೇಗನೇ ಸಮಸ್ಯೆ ಪರಿಹರಿಸಲಾಗುವುದು’ ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.