ಚಿತ್ರದುರ್ಗ: ‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಡವರ ರಕ್ತ ಹೀರುತ್ತಿದೆ. ಗ್ಯಾರಂಟಿ ಯೋಜನೆ ಜಾರಿ ನೆಪದಲ್ಲಿ ತೆರಿಗೆ ಹೆಚ್ಚು ಮಾಡಿ ಜನರ ಹಣ ಲೂಟಿ ಮಾಡುತ್ತಿದೆ. ಕಾಂಗ್ರೆಸ್‌ನಿಂದ ಬಡಜನರ ಉದ್ಧಾರ ಸಾಧ್ಯವಿಲ್ಲ’ ಎಂದು ಆಂಧ್ರಪ್ರದೇಶದ ವಿಧಾನ ಪರಿಷತ್ ಸದಸ್ಯ ಸುಧಾಕರ್ ರೆಡ್ಡಿ ವಾಗ್ದಾಳಿ ನಡೆಸಿದರು.
ಕರ್ನಾಟಕ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ವತಿಯಿಂದ ನಗರದ ತಿರುಮಲ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ‘ಜನ– ಜಾತಿ ಗಣತಿ; ಹಿಂದುಳಿದ ವರ್ಗಗಳ ಜನಜಾಗೃತಿ ಸಭೆ’ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾಂಗ್ರೆಸ್ ಮುಖಂಡರು ವೋಟಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭ್ರಷ್ಟಾಚಾರ ತೀವ್ರಗೊಂಡಿದೆ. ರಾಜ್ಯ ಸರ್ಕಾರಕ್ಕೆ ಜನ ಹಿತಕ್ಕಿಂತ ತಮ್ಮ ಅಧಿಕಾರದ ಹಿತವೇ ಹೆಚ್ಚಾಗಿದೆ. ಕಾಂಗ್ರೆಸ್ ಶಾಸಕರೇ ಸರ್ಕಾರದ ಕಾರ್ಯವೈಖರಿ ವಿರುದ್ಧ ಧ್ವನಿ ಎತ್ತಿದ್ದಾರೆ. ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದಕ್ಕೆ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿರುವುದೇ ಕಾರಣವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. 11 ವರ್ಷಗಳಿಂದ ದೇಶವನ್ನು ಪ್ರಗತಿ ಪಥದತ್ತ ಮುನ್ನಡೆಸುತ್ತಿದ್ದಾರೆ. ಹಿಂದುಳಿದ ವರ್ಗಗಳು ಅಭಿವೃದ್ಧಿ ಕಾಣುವುದು ಬಿಜೆಪಿ ಸರ್ಕಾರದಿಂದ ಮಾತ್ರ. ಕೇಂದ್ರ ಸರ್ಕಾರ ಕೈಗೊಳ್ಳಲಿರುವ ಜನ– ಜಾತಿ ಗಣತಿಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಜನರು ತಮ್ಮ ಸ್ಥಿತಿ– ಗತಿ ಬಗ್ಗೆ ಮಾಹಿತಿ ನೀಡಿದರೆ ಮಾತ್ರ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ’ ಎಂದರು.
ಮಾಜಿ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವರದಿ ಜಾರಿಗೊಳಿಸುತ್ತಾರೆ ಎಂಬ ನಂಬಿಕೆ ಇತ್ತು. ಆದರೆ, ಅವರು ಅದನ್ನು ಬಿಡುಗಡೆ ಮಾಡುವಲ್ಲಿ ವಿಫಲರಾದರು. ಈಗ ಸಿದ್ದರಾಮಯ್ಯ ಅವರ ಮೇಲೆ ಜನರಿಗೆ ನಂಬಿಕೆಯೇ ಇಲ್ಲವಾಗಿದೆ. ಜಾತಿ ಗಣತಿ ವರದಿಯನ್ನು ಈಗ ಮೂಲೆಗೆ ಎಸೆಯಲಾಗಿದೆ. ಬಿಜೆಪಿ ನೇತೃತ್ವದ ಸರ್ಕಾರ ಮಾತ್ರ ವೈಜ್ಞಾನಿಕವಾಗಿ ಗಣತಿ ಮಾಡಲಿದ್ದು, ಇದಕ್ಕೆ ದೇಶದ ಜನರು ಸಹಕಾರ ನೀಡಲಿದ್ದಾರೆ’ ಎಂದು ಹೇಳಿದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ‘ಹಲವು ಹರ್ಷಗಳಿಂದಲೂ ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ವೈಜ್ಞಾನಿಕ ರೀತಿಯಲ್ಲಿ ಜನಗಣತಿ, ಜಾತಿಗಣತಿ ನಡೆದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯಲಿರುವ ಜನಗಣತಿ ದೇಶಕ್ಕೆ ಅತ್ಯಮೂಲ್ಯ ಕೊಡುಗೆಯಾಗಲಿದೆ. ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಅಧಿಕಾರ ಇಲ್ಲ. ಆದರೂ ಕೇವಲ ಮತಕ್ಕಾಗಿ ಜಾತಿ ಗಣತಿ ಮಾಡಿ ಅದನ್ನು ಬಿಸಾಡಿದೆ. ಅದಕ್ಕಾಗಿ ಕೋಟ್ಯಂತರ ರೂಪಾಯಿ ಹಣ ವ್ಯರ್ಥ ಮಾಡಿದೆ’ ಎಂದು ಕಿಡಿಕಾರಿದರು.
‘ಮೀಸಲಾತಿ ಪಡೆಯಲು ಜಾತಿಗಣತಿ ಅನಿವಾರ್ಯವಾಗಿದೆ. ಇದರಿಂದ ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯನ್ನು ತಿಳಿಯಲು ಸಾಧ್ಯವಾಗುತ್ತದೆ. ಜಾತಿ– ಜನಗಣತಿಯ ಬಗ್ಗೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಸಮಾವೇಶ ನಡೆದಿದ್ದು, ಈಗ ವಿಭಾಗವಾರು ಮಟ್ಟದಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಸಮಾವೇಶ ನಡೆಯಲಿದ್ದು, ಜನರಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದರು.
ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಶಾಸಕ ಎಂ. ಚಂದ್ರಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಸಾಮಾಜಿಕ ಕಾರ್ಯಕರ್ತರಾದ ವಾದಿರಾಜ್, ಅಂಬಿಕಾ ಹುಲಿನಾಯ್ಕರ್, ಸೋಮಶೇಖರ್, ಮುಖಂಡರಾದ ಮುರಳಿ, ಬಾಬು ಪತ್ತರ್, ಲಕ್ಷ್ಮಿಕಾಂತ್, ವೆಂಕಟೇಶ್ ಯಾದವ್, ತಿಮ್ಮಣ್ಣ, ಕಲ್ಲೇಶ್ ಇದ್ದರು.
‘ಜಾತಿಗಣತಿಗೆ ವಿರೋಧವಿದ್ದ ನೆಹರೂ’
ವಿಧಾನ ಪರಿಷತ್ ಸದಸ್ಯರ ಕೇಶವ ಪ್ರಸಾದ್ ಮಾತನಾಡಿ ‘ಜನ ಜಾತಿಗಣತಿಗೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ವಿರೋಧ ಇದ್ದರು. ಇಂದಿರಾಗಾಂಧಿ ರಾಜೀವಗಾಂಧಿ ಪಿ.ವಿ.ನರಸಿಂಹರಾವ್ ಮನಮೋಹನ್ ಸಿಂಗ್ ಅವರು ಕೂಡ ಜಾತಿ ಜನಗಣತಿ ಕೈಗೊಳ್ಳಲು ನಿರಾಸಕ್ತಿ ವಹಿಸಿದ್ದರು’ ಎಂದು ದೂರಿದರು.
‘ರಾಜ್ಯ ಕಾಂಗ್ರೆಸ್ ಸರ್ಕಾರ ನಡೆಸಿದ ಜಾತಿ ಗಣತಿ ಅವೈಜ್ಞಾನಿಕವಾಗಿದ್ದ ಕಾರಣ ಅದನ್ನು ಜಾರಿಗೊಳಿಸಲು ಸಾಧ್ಯವಾಗಲಿಲ್ಲ. 802 ಜಾತಿಗಳಲ್ಲಿ ಕೇವಲ 156 ಜಾತಿಗಳಿಗೆ ಮಾತ್ರ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದ್ದು ಉಳಿದ ಜಾತಿಗಳಿಗೆ ಯಾವ ಪ್ರಾತಿನಿದ್ಯವೂ ಸಿಕಿಲ್ಲ. ಕೇಂದ್ರ ಸರ್ಕಾರ 2026ರಲ್ಲಿ ₹ 13000 ಕೋಟಿ ವೆಚ್ಚದಲ್ಲಿ ಜಾತಿ-ಜನಗಣತಿಯನ್ನು ಮಾಡಲು ಮುಂದಾಗಿದೆ. ಇದು ಐತಿಹಾಸಿಕ ನಿರ್ಧಾರವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.