ADVERTISEMENT

‌ಹಿರಿಯೂರು | ಬತ್ತಿದ ಜಲಮೂಲ: ಟ್ಯಾಂಕರ್ ನೀರಿಗೆ ಕಾಯುವುದೇ ಕೆಲಸ

ಹಿರಿಯೂರು ತಾಲ್ಲೂಕಿನಲ್ಲಿ ಬಿಗಡಾಯಿಸಿದ ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 6:56 IST
Last Updated 8 ಏಪ್ರಿಲ್ 2024, 6:56 IST
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಜನರು ಮುತ್ತಿಗೆ ಹಾಕಿರುವುದು
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಜನರು ಮುತ್ತಿಗೆ ಹಾಕಿರುವುದು   

‌ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯದಿಂದ ಕೇವಲ ಮೂರ್ನಾಲ್ಕು ಕಿ.ಮೀ. ಅಂತರದಲ್ಲಿರುವ ವಾಣಿವಿಲಾಸಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಸಾರ್ವಜನಿಕರು ಟ್ಯಾಂಕರ್ ನೀರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿ.ವಿ. ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳವಾರಹಟ್ಟಿ, ಕುಂಟಪ್ಪನಹಟ್ಟಿ, ಭರಮಗಿರಿ, ಕಕ್ಕಯ್ಯನಹಟ್ಟಿ, ಬಳಗಟ್ಟ ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಕೃಷಿಗೆ ಆಸರೆಯಾಗಿರುವ ಜಾನುವಾರುಗಳನ್ನು ಸಂರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.

15 ದಿನದಿಂದ ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲಾಗುತ್ತಿದ್ದು, ಒಂದೊಂದು ಮನೆಗೆ ಐದಾರು ಬಿಂದಿಗೆ ಕೂಡ ಸಿಗುತ್ತಿಲ್ಲ. ಇಷ್ಟು ಕಡಿಮೆ ನೀರಿನಲ್ಲಿ ಅಡುಗೆ, ಸ್ವಚ್ಛತೆ, ಕುಡಿಯಲು ಹಾಗೂ ಜಾನುವಾರಿಗೆ ಸಾಲುವುದೇ ಎಂಬ ಪ್ರಶ್ನೆ ಗ್ರಾಮಸ್ಥರದ್ದು. ಈ ಹಳ್ಳಿಗಳ ಜನರು ಬಹುತೇಕ ಕುರಿ–ಮೇಕೆ ಸಾಕಣೆ, ಕೂಲಿ ಕೆಲಸ ನಂಬಿದವರು. ‘ನಾವೀಗ ನೀರಿಗಾಗಿ ಕೂಲಿಗೆ  ಹೋಗುವುದನ್ನೇ ಬಿಡಬೇಕಿದೆ. ಕೂಲಿಗೆ ಹೋದರೆ ನೀರು ಸಿಗುವುದಿಲ್ಲ. ನೀರು ಬೇಕೆಂದರೆ ಕೂಲಿ ದುಡ್ಡು ಸಿಗದು. ಕೊಳವೆಬಾವಿ ಕೊರೆಯಿಸಿದರೂ ಮೂರ್ನಾಲ್ಕು ದಿನ ನೀರು ಬಂದು ಬತ್ತಿ ಹೋಗುತ್ತವೆ. ನಮ್ಮಿಂದ ಮತ ಪಡೆದವರು ಬದ್ಧತೆ ತೋರಿಸಿದ್ದರೆ ಕೆಲವೇ ಲಕ್ಷ ರೂಪಾಯಿ ವೆಚ್ಚದಲ್ಲಿ ವಾಣಿವಿಲಾಸ ಅಣೆಕಟ್ಟೆಯಿಂದ ನೀರು ಕೊಡಬಹುದಿತ್ತು’ ಎನ್ನುತ್ತಾರೆ ಗ್ರಾಮಸ್ಥರು.

ADVERTISEMENT

‘ಲೋಕಸಭೆ ಚುನಾವಣೆ ಬಹಿಷ್ಕರಿಸುತ್ತೇವೆ’ ಎಂದು ತೀರ್ಮಾನಿಸಿದ್ದರಿಂದ ಟ್ಯಾಂಕರ್ ಮೂಲಕ ನೀರು ಕೊಡುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಟ್ಯಾಂಕರ್‌ಗಳು ಊರಿಗೆ ಬರುವ ನಂಬಿಕೆ ಇಲ್ಲ. ಹೀಗಾಗಿ ವಾಣಿವಿಲಾಸ ಅಣೆಕಟ್ಟೆಯಿಂದ ಕೊಳವೆ ಮಾರ್ಗದ ಮೂಲಕ ನೀರು ಕೊಡದೆ ಇದ್ದರೆ ಚುನಾವಣೆ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಇದು ನಮ್ಮ ನಿರ್ಣಾಯಕ ಹೋರಾಟ’ ಎಂದು ಈ ಗ್ರಾಮಗಳ ಯುವಕರು ಹೇಳುತ್ತಾರೆ.

ನೀರಿಗಾಗಿ ಗ್ರಾ.ಪಂ. ಕಚೇರಿಗೆ ಮುತ್ತಿಗೆ:

‘ಜವನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುರುಳಿದಿಬ್ಬದಹಟ್ಟಿ, ಆನೆಸಿದ್ರಿ, ಜೂಲಯ್ಯನಹಟ್ಟಿಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಒಂದೊಂದು ಊರಿನಲ್ಲಿ ಎರಡೆರಡು ಕೊಳವೆಬಾವಿಗಳಿದ್ದು, 2 ತಿಂಗಳ ಹಿಂದೆ ಬತ್ತಿ ಹೋಗಿವೆ. ಜನರ ಪ್ರತಿಭಟನೆಯ ನಂತರ ಟ್ಯಾಂಕರ್‌ಗಳಲ್ಲಿ ನೀರು ಕೊಡುತ್ತಿದ್ದರು. ಆದರೆ ಮೂರು ದಿನದಿಂದ ಟ್ಯಾಂಕರ್‌ಗಳ ಸುಳಿವೂ ಇಲ್ಲ. ಹೀಗಾಗಿ ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿದ್ದೇವೆ’ ಎಂದು ಮುಖಂಡರಾದ ಪಿ. ಮಹೇಶ್ ಹೇಳಿದರು.

‘ನೀರು ಕೊಡಿ’ ಎಂದು ಗ್ರಾಮ ಪಂಚಾಯಿತಿಯವರನ್ನು ಕೇಳಿದರೆ, ‘ನೀರಿನ ಸಮಸ್ಯೆಯೇ ಇಲ್ಲ, ರಾಜಕೀಯ ಕಾರಣಕ್ಕೆ ಪ್ರತಿಭಟನೆಗೆ ಬಂದಿದ್ದೀರಿ ಎಂದು ಬೇಕಾಬಿಟ್ಟಿ ಮಾತನಾಡುತ್ತಾರೆ. ಕುಡಿಯಲು ನೀರು ಕೊಡಿ ಎಂದು ಕೇಳುವುದು ತಪ್ಪೇ?, ಬೇಕಿದ್ದರೆ ಊರುಗಳಿಗೆ ಬಂದು ಮನೆಮನೆಗೆ ಭೇಟಿ ನೀಡಿ ವಿಚಾರಿಸಲಿ’ ಎಂದು ಪ್ರತಿಭಟನಕಾರರು ಸವಾಲು ಹಾಕಿದರು.

‘ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ, ದಿಂಡಾವರ, ಯಲ್ಲದಕೆರೆ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರು ಕೊಡುತ್ತಿದ್ದರೂ, ಆ ನೀರಿನಿಂದ ಜಾನುವಾರು ಸಂರಕ್ಷಣೆ ಕಷ್ಟ. ಪಂಚಾಯಿತಿಗೊಂದರಂತೆ ಗೋಶಾಲೆ ತೆರೆದರೆ ತಾತ್ಕಾಲಿಕವಾಗಿ ರಾಸುಗಳನ್ನು ಗೋಶಾಲೆಗೆ ಬಿಡುತ್ತೇವೆ’ ಎಂದು ಹುರುಳಿದಿಬ್ಬದಹಟ್ಟಿಯ ಪುಷ್ಪಲತಾ ಹೇಳಿದರು.

‘ವಿ.ವಿ. ಪುರ ಪಂಚಾಯಿತಿ ವ್ಯಾಪ್ತಿಯ ತಳವಾರಹಟ್ಟಿ, ಕುಂಟಪ್ಪನಹಟ್ಟಿ, ಭರಮಗಿರಿ, ಕಕ್ಕಯ್ಯನಹಟ್ಟಿ ಹಾಗೂ ಬಳಗಟ್ಟ ಗ್ರಾಮಗಳಲ್ಲಿ 6,000 ಜನಸಂಖ್ಯೆ ಇದೆ. ನಿತ್ಯ ಬೆಳಿಗ್ಗೆ 20, ಸಂಜೆ 20 ಟ್ಯಾಂಕ್ ನೀರು ಬರುತ್ತದೆ. ಬಟ್ಟೆಗಳನ್ನು  ವಾಣಿವಿಲಾಸ ನಾಲೆಗೆ ಒಯ್ದು ತೊಳೆದು ತರುತ್ತೇವೆ. ಊರಿನಲ್ಲಿ ನೀರಿಗೆ ತತ್ವಾರ ಇದೆ ಎಂದು ಹತ್ತಿರದ ನೆಂಟರೂ ಮನೆಗಳಿಗೆ ಬರುತ್ತಿಲ್ಲ’ ಎಂದು ಭರಮಗಿರಿ ಗ್ರಾಮದ ಚಂದ್ರಕಾಂತ್ ಅಳಲು ತೋಡಿಕೊಂಡರು.

ಹಿರಿಯೂರು ತಾಲ್ಲೂಕಿನ ಭರಮಗಿರಿ ಗ್ರಾಮದಲ್ಲಿ ಟ್ಯಾಂಕರ್ ನೀರು ಪಡೆಯಲು ಸಾಲಿನಲ್ಲಿ ಕೊಡಗಳನ್ನು ಇರಿಸಿರುವುದು
ಇಂತಹ ಬಿಸಿಲನ್ನು ಹಿಂದೆಂದೂ ಕಂಡಿರಲಿಲ್ಲ. ದಾಹವೂ ಹೆಚ್ಚುತ್ತಿದೆ. ನೀರಿಗಾಗಿ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ.
ಉಮೇಶ್ ಭರಮಗಿರಿ
ಒಂದು ತಿಂಗಳಿಂದ ನೀರಿನ ಸಮಸ್ಯೆಯಿಂದಾಗಿ ಕೂಲಿಗೆ ಹೋಗುತ್ತಿಲ್ಲ. ನೀರು ಕೊಡಬೇಕಾದದ್ದು ಸರ್ಕಾರದ ಕರ್ತವ್ಯ. ದೊಡ್ಡ ದೊಡ್ಡ ಘೋಷಣೆಗಳು ಬೇಕಿಲ್ಲ. ಸಮರ್ಪಕವಾಗಿ ನೀರು ಕೊಡಲಿ.
ಲಕ್ಷ್ಮಕ್ಕ ತಳವಾರಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.