ADVERTISEMENT

ಧರ್ಮಪುರ | ಭಾರಿ ಮಳೆ; ತುಂಬಿ ಹರಿದ ಸುವರ್ಣಮುಖಿ ನದಿ

ಕೆರೆ, ಬ್ಯಾರೇಜ್ ವೀಕ್ಷಿಸಿದ ಸಚಿವ ಡಿ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 6:17 IST
Last Updated 11 ಆಗಸ್ಟ್ 2025, 6:17 IST
ಭಾರಿ ಮಳೆಯಿಂದಾಗಿ ಧರ್ಮಪುರ ಸಮೀಪದ ಸುವರ್ಣಮುಖಿ ನದಿಯಲ್ಲಿ ನೀರು ಹರಿಯುತ್ತಿರುವುದು
ಭಾರಿ ಮಳೆಯಿಂದಾಗಿ ಧರ್ಮಪುರ ಸಮೀಪದ ಸುವರ್ಣಮುಖಿ ನದಿಯಲ್ಲಿ ನೀರು ಹರಿಯುತ್ತಿರುವುದು   

ಧರ್ಮಪುರ: ಹೋಬಳಿಯ ಇಕ್ಕನೂರು ಸುತ್ತ ಮುತ್ತ ಶನಿವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಸುವರ್ಣಮುಖಿ ನದಿ ಭಾನುವಾರ ತುಂಬಿ ಹರಿಯಿತು.

ಇಕ್ಕನೂರು ಹಾಗೂ ಈಶ್ವರಗೆರೆಯಲ್ಲಿ ಭಾರಿ ಮಳೆಯಾಗಿದ್ದು, ರೈತರಲ್ಲಿ ಹರ್ಷ ಮೂಡಿದೆ. ಶೇಂಗಾ ಬಿತ್ತನೆ  ವಿಳಂಬವಾಗಿದ್ದರೂ ಉತ್ತಮ ಮಳೆ ರೈತರಲ್ಲಿ ಹರ್ಷ ಮೂಡಿಸಿದೆ.

ಹಳ್ಳ, ಚೆಕ್ ಡ್ಯಾಂ ಮತ್ತು ನದಿ ಪಾತ್ರದಲ್ಲಿ ನೀರು ಹರಿಯುತ್ತಿರುವುದರಿಂದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚುವ ಸಾಧ್ಯತೆಯಿದೆ.

ADVERTISEMENT

‘ಇಕ್ಕನೂರು, ಈಶ್ವರಗೆರೆ, ಅಬ್ಬಿನಹೊಳೆ, ವೇಣುಕಲ್ಲುಗುಡ್ಡ ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಇದರಿಂದ ನೀರಾವರಿ ಕೃಷಿ ಚಟುವಟಿಕೆ ಗರಿಗೆದರಲಿದೆ’ ಎಂದು ಈಶ್ವರಗೆರೆ ರೈತ ರಾಮಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಕೆರೆಗಳಿಗೆ ನೀರು ಹರಿಸಿ: ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭಾನುವಾರ ಹೊಸಹಳ್ಳಿ ಬ್ಯಾರೇಜ್‌ಗೆ ಭೇಟಿ ನೀಡಿ ಎಲ್ಲೆಲ್ಲಿ ಪೈಪ್‌ಲೈನ್ ಒಡೆದಿವೆ ಅವುಗಳನ್ನು ಸರಿಪಡಿಸಿ ತಕ್ಷಣ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ಹರಿಸಬೇಕು ಎಂದು ಎಂಜಿನಿಯರ್‌ಗಳಿಗೆ ಸಲಹೆ ನೀಡಿದರು.

‘ಹರಿಯಬ್ಬೆ ಗ್ರಾಮದ ಕುಡಿಯುವ ನೀರಿನ ಸಂಗ್ರಹಾಗಾರ  ಅಜ್ಜಿಕಟ್ಟೆಗೆ ಹೊಸಹಳ್ಳಿ ಬ್ಯಾರೇಜ್‌ನಿಂದ ನೀರು ಪೂರೈಕೆ ಮಾಡಬೇಕು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಇಲ್ಲಿಗೆ ಕಾರ್ಯಕ್ರಮಕ್ಕೆ ಬಂದಿದ್ದಾಗ ಹೇಳಿದ್ದರು. ಆದರೆ, ಅಜ್ಜಿಕಟ್ಟೆಗೆ ನೀರು ಪೂರೈಕೆಯಾಗುತ್ತಿಲ್ಲ’ ಎಂದು ಗ್ರಾಮಸ್ಥರು ಸಚಿವರ ಗಮನಕ್ಕೆ ತಂದರು.

‘ಕಾರ್ಯನಿರ್ವಾಹಕ ಎಂಜಿನಿಯರ್‌ರಿಂದ ತಕ್ಷಣ ಮಾಹಿತಿ ಪಡೆದ ಸಚಿವರು, ತಾಂತ್ರಿಕ ಕಾರಣವಿದೆ. ತಕ್ಷಣವೇ ಸರಿಪಡಿಸಿ ನೀರು ಹರಿಸಲಾಗುವುದು’ ಎಂದು ತಿಳಿಸಿದರು.

ಸಚಿವರು ಮುಂಗುಸುವಳ್ಳಿ, ಧರ್ಮಪುರ, ಶ್ರವಣಗೆರೆ, ಅಬ್ಬಿನಹೊಳೆ, ಗೂಳ್ಯ, ಈಶ್ವರಗೆರೆ ಕೆರೆಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

ಧರ್ಮಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೂರ್‌ಜಾನ್ ಅಮಾನುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಗ್ರಾಮಾಂತರ ಘಟಕದ ಅಧ್ಯಕ್ಷ ಈರಲಿಂಗೇಗೌಡ, ಎಸ್.ಆರ್.ತಿಪ್ಪೇಸ್ವಾಮಿ, ಚಂದ್ರಶೇಖರ್, ಕೆಡಿಪಿ ಸದಸ್ಯ ತಿಮ್ಮಣ್ಣ, ಕೆ.ಪುಟ್ಟಸ್ವಾಮಿಗೌಡ, ಜ್ಯೋತಿ ಹನುಮಂತರಾಯ, ಲಕ್ಷ್ಮೀದೇವಿ, ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಣ್ಣಪ್ಪ, ಪರಶುರಾಮ್, ಮಧು, ಕೃಷ್ಣ, ಗೌಡಪ್ಪ, ಬಂಡೀ ಈರಣ್ಣ, ಚಂದ್ರು, ಅನಿಲ್, ರಾಘು, ಅಸ್ಲಾಂಖಾನ್, ನೌಷಾದ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.