ADVERTISEMENT

ಇಳಕಲ್‌ ಸೀರೆ, ಮೇಲುಕೋಟೆ ಪುಳಿಯೊಗರೆ...

ಸ್ವದೇಶಿ ಮೇಳ; ಮಹಿಳೆಯರ ಗಮನ ಸೆಳೆಯುತ್ತಿವೆ ಪರಿಸರಸ್ನೇಹಿ ಮೇಕಪ್‌ ವಸ್ತುಗಳು

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 4:34 IST
Last Updated 13 ನವೆಂಬರ್ 2025, 4:34 IST
ಸ್ವದೇಶಿ ಮೇಳದ ಪ್ರವೇಶದ್ವಾರದಲ್ಲಿ ಬಣ್ಣಬಣ್ಣದ ರಂಗೋಲಿ ಚಿತ್ತಾರ
ಸ್ವದೇಶಿ ಮೇಳದ ಪ್ರವೇಶದ್ವಾರದಲ್ಲಿ ಬಣ್ಣಬಣ್ಣದ ರಂಗೋಲಿ ಚಿತ್ತಾರ   

ಚಿತ್ರದುರ್ಗ: ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ ಸ್ವದೇಶಿ ಮೇಳದಲ್ಲಿ ಮಹಿಳೆಯರ ಮನಸೂರೆಗೊಳ್ಳುವ ಸಾಕಷ್ಟು ಅತ್ಯಾಕರ್ಷಣೆಗಳಿವೆ. ಬಾಗಲಕೋಟೆ ಜಿಲ್ಲೆ ಇಳಕಲ್‌ನಿಂದ ಬಂದಿರುವ ರೇಷ್ಮೆ, ಕಾಟನ್‌ ಇಳಕಲ್‌ ಸೀರೆ, ನೈಸರ್ಗಿಕ ಮೇಕಪ್‌ ವಸ್ತುಗಳು, ಆಯುರ್ವೇದ ಉತ್ಪನ್ನಗಳು ಅವರ ಮನಸೂರೆಗೊಳ್ಳುತ್ತಿವೆ. ಜೊತೆಗೆ ಮೇಲುಕೋಟೆಯ ‘ಅನ್ನಪೂರ್ಣ ಮೆಸ್‌’ ಪುಳಿಯೊಗರೆ ನಾಲಿಗೆ ಮೇಲೆ ನೀರು ತರಿಸುತ್ತಿದೆ.

ರಾಜ್ಯದ ವಿವಿಧೆಡೆಯಿಂದ ಬಂದಿರುವ ಮಹಿಳಾ ಸಹಕಾರ ಸಂಘಗಳ ಸದಸ್ಯೆಯರು ತಾವು ನೈಸರ್ಗಿಕ ರೀತಿಯಲ್ಲಿ ತಯಾರಿಸಿರುವ ವಸ್ತ್ರ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕಿಟ್ಟಿದ್ದಾರೆ. ಇಮಿಟೇಷನ್‌ ಆಭರಣಗಳು ಕೂಡ ಮಹಿಳೆಯರನ್ನು ಸೆಳೆಯುತ್ತಿವೆ. ಖಾದಿ ಬಟ್ಟೆಗಳು, ಪಂಚಗವ್ಯ ಉತ್ಪನ್ನಗಳು, ಆರೋಗ್ಯ ಸುಧಾರಣೆಯ ವಿವಿಧ ಪಾನೀಯಗಳು ಗಮನ ಸೆಳೆಯುತ್ತಿವೆ. ಜೊತೆಗೆ ವಿವಿಧ ಗಾರ್ಮೆಂಟ್‌ ಕಾರ್ಖಾನೆಗಳು ತಯಾರಿಸಿರುವ ಉಡುಪುಗಳನ್ನು ಮಾರಾಟಕ್ಕೆ ಇಡಲಾಗಿದೆ.

ಕ್ರೀಡಾಂಗಣ ಪ್ರವೇಶಿಸುತ್ತಿದ್ದಂತೆ ಚಾಮುಂಡೇಶ್ವರಿ ಪ್ರತಿಮೆ, ಪ್ರತಿಮೆ ಮುಂದೆ ವೃತ್ತಾಕಾರದಲ್ಲಿ ಹಾಕಿರುವ ಬಣ್ಣಬಣ್ಣದ ರಂಗೋಲಿ ಇಷ್ಟವಾಗುತ್ತದೆ. ಮಣ್ಣು ಹಾಗೂ ಕುಡಿಕೆಗಳಿಂದ ಸಿದ್ಧಪಡಿಸಿರುವ ಹುತ್ತದ ಕಲಾಕೃತಿಗಳು ಮನಸೂರೆಗೊಳ್ಳುತ್ತಿವೆ. ಒಂದೇ ಬೃಹತ್‌ ಪೆಂಡಾಲ್‌ ಅಡಿ 200ಕ್ಕೂ ಹೆಚ್ಚು ಮಳಿಗೆ ಸ್ಥಾಪಿಸಲಾಗಿದ್ದು ಪ್ರವೇಶದ್ವಾರದಲ್ಲೇ ದೇಸಿ ತಳಿಯ ಗೋವುಗಳನ್ನು ಪ್ರದರ್ಶನ ಮಾಡಲಾಗುತ್ತಿದೆ.

ADVERTISEMENT

ಅಮೃತ್‌ ಮಹಲ್‌, ಗಿರ್‌, ಸಾಯಿವಲ್‌, ಕಾಂಕ್ರೇಜ್‌, ಮಲ್ನಾಡ್‌ ಗಿಡ್ಡ ತಳಿಯ ಗೋವುಗಳು ನೋಡಲು ಸಿಗುತ್ತವೆ. ಅವುಗಳನ್ನು ಸಾಕಣೆ ಮಾಡಿರುವ ರೈತರು ಕೂಡ ಸ್ಥಳದಲ್ಲೇ ಇದ್ದು ಅವುಗಳ ಬಗ್ಗೆ ಮಾಹಿತಿ ನೀಡುತ್ತಿದ್ಧಾರೆ. ಮಕ್ಕಳು ಹಸುಗಳನ್ನು ನೋಡಿ ಆಶ್ಚರ್ಯಚಕಿತರಾಗುತ್ತಿದ್ದಾರೆ. ಬಹುತೇಕ ಜನರು ಅವುಗಳನ್ನು ಮುಟ್ಟಿ ನಮಸ್ಕಾರ ಮಾಡುತ್ತಿದ್ದಾರೆ.

ಜೈವಿಕ ಇಂಧನ ಅನಿಲ ಘಟಕದ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ವಿವಿಧ ಕೃಷಿ ಉಪಕರಣಗಳ ಬಗ್ಗೆ ಕಂಪನಿಯ ಪ್ರತಿನಿಧಿಗಳು ರೈತರಿಗೆ ಮಾಹಿತಿ ನೀಡುತ್ತಿದ್ದಾರೆ. ಖರೀದಿಗೆ ದರ ರಿಯಾಯಿತಿಯನ್ನೂ ನೀಡಲಾಗುತ್ತಿದೆ. ಲೆದರ್‌ ಕಂಪನಿಗಳು ತಮ್ಮ ತಯಾರಿಸಿರುವ ಪಾದರಕ್ಷೆಗಳನ್ನೂ ಮಾರಾಟಕ್ಕಿಟ್ಟಿದ್ದಾರೆ. ವಿವಿಧ ರೀತಿಯ ಚಾಕೊಲೇಟ್‌, ಗಾಣದ ಎಣ್ಣೆ ತಯಾರಿಸುವ ಸ್ವಸಹಾಯ ಸಂಘಗಳು ಮಳಿಗೆ ಸ್ಥಾಪನೆ ಮಾಡಿವೆ.

ಸರ್ಕಾರದ ವಿವಿಧ ಇಲಾಖೆಗಳು, ಬ್ಯಾಂಕ್‌ಗಳು ಕೂಡ ಮಳಿಗೆಯಲ್ಲಿ ಜಾಗ ಪಡೆದಿದ್ದು ತಮ್ಮ ವಿವಿಧ ಯೋಜನೆಗಳ ಬಗ್ಗೆ ಪ್ರಚಾರ ಮಾಡುತ್ತಿವೆ. ಪಶುವೈದ್ಯಕೀಯ ಸೇವಾ ಇಲಾಖೆ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ. ಮೇಳದ ಇನ್ನೊಂದು ಭಾಗದಲ್ಲಿ ಫುಡ್‌ ಕೋರ್ಟ್‌ ರೂಪಿಸಲಾಗಿದ್ದು ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಹೋಟೆಲ್‌, ಸಂಘ ಸಂಸ್ಥೆಗಳು ಬಗೆಬಗೆಯ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಅದರಲ್ಲಿ ಮೇಲುಕೋಟೆಯ ‘ಅನ್ನಪೂರ್ಣೇಶ್ವರಿ ಮೆಸ್‌’ ಮುಂದೆ ಅಪಾರ ಜನಸಂದಣಿಯಿದ್ದು ಪುಳಿಯೊಗರೆಯ ರುಚಿ ನೋಡುತ್ತಿದ್ದಾರೆ.

ಸ್ವದೇಶಿ ಮೇಳ ಮೊದಲ ದಿನವೇ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಆಕರ್ಷಕ ದೀಪಾಲಂಕಾರ ಮಾಡಲಾಗಿದೆ. ಕ್ರೀಡಾಂಗಣದ ಒಳಗೆ ಮಾತ್ರವಲ್ಲದೇ ಹೊರಗೂ ಜಾತ್ರೆಯಂತೆ ವಿವಿಧ ರೀತಿಯ ಅಂಗಡಿಗಳು ತಲೆಎತ್ತಿವೆ.

ಸೀರೆ ಖರೀದಿಸುತ್ತಿರುವ ಮಹಿಳೆಯರು
ಗೊಂಬೆಗಳು ಮಕ್ಕಳ ಆಟದ ವಸ್ತುಗಳು
ಮರದಿಂದ ತಯಾರಿಸಿರುವ ದಿನನಿತ್ಯ ಬಳಸುವ ವಸ್ತುಗಳು

ಕುಂದಾ ಕರದಂಟು ರೊಟ್ಟಿ

ಗೋಕಾಕ ಕರದಂಟು ಬೆಳಗಾವಿ ಕುಂದಾ ಹಾಗೂ ಉತ್ತರ ಕರ್ನಾಟಕ ಭಾಗದ ಥರಾವರಿ ರೊಟ್ಟಿಗಳ ಮಾರಾಟ ಮಾಡಲಾಗುತ್ತಿದೆ. ಮರದಿಂದ ತಯಾರಿಸಿದ ಪೆನ್‌ ಪೆನ್ಸಿಲ್‌ ಟೂತ್‌ ಬ್ರಷ್‌ ಬ್ಯಾಗ್‌ಗಳು ಜನರ ಗಮನ ಸೆಳೆಯುತ್ತಿವೆ. ಬರೆದು ಅಳಿಸುವಂತಹ ಮ್ಯಾಜಿಕ್‌ ನೋಟ್‌ ಪುಸ್ತಕಗಳು ಮಕ್ಕಳಿಗೆ ಇಷ್ಟವಾಗುತ್ತಿವೆ. ಕೈಯಿಂದ ತಯಾರಿಸಿದ ವಿವಿಧ ರೀತಿಯ ಸಾಂಪ್ರದಾಯಿಕ ವಸ್ತುಗಳನ್ನು ಮೇಳದಲ್ಲಿ ಇರಿಸಿ ಮಾರಾಟ ಮಾಡಲಾಗುತ್ತಿದೆ. ಚಿತ್ರ ಕಲಾಕೃತಿಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.