ADVERTISEMENT

ಸ್ವದೇಶಿ ಮೇಳ; ದೇಸಿ ಹಸುಗಳ ಆಕರ್ಷಣೆ

2ನೇ ದಿನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ, ಯೋಗ ಶಿಬಿರದಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 4:09 IST
Last Updated 14 ನವೆಂಬರ್ 2025, 4:09 IST
ಸ್ವದೇಶಿ ಮೇಳದಲ್ಲಿ ಗಮನ ಸೆಳೆಯುತ್ತಿರುವ ದೇಸಿ ಹಸುಗಳು 
ಸ್ವದೇಶಿ ಮೇಳದಲ್ಲಿ ಗಮನ ಸೆಳೆಯುತ್ತಿರುವ ದೇಸಿ ಹಸುಗಳು    

ಚಿತ್ರದುರ್ಗ: ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದ 2ನೇ ದಿನವಾದ ಗುರುವಾರ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು. ಮೇಳದ ಪ್ರತಿ ಮಳಿಗೆಗಳಿಗೂ ಜನರು ಭೇಟಿ ನೀಡಿ ವಸ್ತುಗಳ ಮಾಹಿತಿ ಪಡೆದರು, ಖರೀದಿ ಮಾಡಿದರು.

ಮೇಳದಲ್ಲಿ ದೇಶಿ ಹಸುಗಳು ಪ್ರಮುಖ ಆಕರ್ಷಣೆಯಾಗಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಜೇರ್ಸಿ ಹಸುಗಳನ್ನು ನೋಡಿದ್ದ ಜನ ದೊಡ್ಡ ಕೊಂಬು, ಸೂಜಿಗಲ್ಲಿನಂತೆ ಆಕರ್ಷಿಸುವ ಕಣ್ಣು, ಮೈ ಬಣ್ಣ, ರಾಜ ಗಾಂಭೀರ್ಯದ ಹಸುಗಳನ್ನು ಕಂಡು ಪುಳಕಿತರಾಗುತ್ತಿದ್ದಾರೆ. ಆವರಣ ಪ್ರವೇಶಿಸುತ್ತಿದ್ದಂತೆ ಜನರನ್ನು ದೇಶಿ ಹಸುಗಳು ಸ್ವಾಗತಿಸುತ್ತಿವೆ.

ಎತ್ತಿನ ಬಂಡಿ, ಹುಲ್ಲಿನ ರಾಶಿ, ಸಗಣಿಯ ಪರಿಮಳ ಎಲ್ಲವೂ ದೈವತ್ತದ ಲೋಕ ಸೃಷ್ಟಿಸಿವೆ. ಅಮೃತ್‌ ಮಹಲ್‌, ಗಿರ್‌, ಸಾಯಿವಲ್‌, ಕಾಂಕ್ರೇಜ್‌, ಮಲ್ನಾಡ್‌ ಗಿಡ್ಡ ತಳಿಯ ಗೋವುಗಳು ನೋಡಲು ಸಿಗುತ್ತಿವೆ. ಅವುಗಳನ್ನು ಸಾಕಣೆ ಮಾಡಿರುವ ರೈತರು ಕೂಡ ಸ್ಥಳದಲ್ಲೇ ಇದ್ದು ಅವುಗಳ ಬಗ್ಗೆ ಮಾಹಿತಿ ನೀಡುತ್ತಿರುವುದು ವಿಶೇಷ.

ADVERTISEMENT

ಮಕ್ಕಳು ಹಸುಗಳನ್ನು ನೋಡಿ ಆಶ್ಚರ್ಯಚಕಿತರಾಗುತ್ತಿದ್ದಾರೆ. ಬಹುತೇಕ ಜನ ಅವುಗಳನ್ನು ಮುಟ್ಟಿ ನಮಸ್ಕಾರ ಮಾಡುತ್ತಿದ್ದಾರೆ. ಜತೆಗೆ ಹಸುಗಳ ಜತೆ ಪೋಟೋ ತೆಗೆಸಿಕೊಳ್ಳುತ್ತಿರುವುದು ಜನರ ಆಸಕ್ತಿಯನ್ನು ತೋರುತ್ತಿದೆ.

ಜಿಲ್ಲೆಯಲ್ಲಿ ಗೋನೂರಿನ ರಾಜರಾಜೇಶ್ವರಿ ಗೋಶಾಲೆ, ಪಾಲವ್ವನಹಳ್ಳಿಯ ನಿಶಾನಿ ಜಯ್ಯಣ್ಣ ಫಾರಂ ಹೌಸ್‌, ಹೊಸದುರ್ಗದ ಶ್ರೀ ಗುರು ಗೋ ಸೇವಾ ಪರಿವಾರ, ಹೊಳಲ್ಕೆರೆಯ ಗಿರ್‌ ಗೋಶಾಲೆ, ದೊಡ್ಡಸಿದ್ದವ್ವನಹಳ್ಳಿ ಜ್ಞಾನೇಶ್‌ ಫಾರಂ ಹಾಗೂ ಹಿರಿಯೂರಿನ ಸ್ವರ್ಣಾಶ್ರಮ ಹಾಗೂ ಚಿತ್ರದುರ್ಗದ ಸುಬ್ರಹ್ಮಣ್ಯ ದೇವಸ್ಥಾನದ ಗೋಶಾಲೆಯಲ್ಲಿ ದೇಶಿ ಹಸುಗಳನ್ನು ಸಾಕಲಾಗುತ್ತಿದೆ.

ಈ ಎಲ್ಲ ಕಡೆಯಿಂದ ಗೋಶಾಲೆ ಮಾಲೀಕರು ಹಸುಗಳನ್ನು ಕರೆತಂದು ಜನರಿಗೆ ಪರಿಚಯಿಸುವ ಕಾರ್ಯ ಮಾಡುತ್ತಿದ್ದಾರೆ. ಜತೆಗೆ ಗೋವಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ನಿತ್ಯ ಬೆಳಿಗ್ಗೆ, ಸಂಜೆ ಗೋವುಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ.

‘ಸ್ವದೇಶಿ ಮೇಳದ ಗೋಶಾಲೆಗೆ ರಾಜರಾಜೇಶ್ವರಿ ದೇವಸ್ಥಾನದಿಂದ ರಾಜಸ್ತಾನ ತಳಿ ಕಾಂಕ್ರೇಜ್‌, ದೊಡ್ಡಸಿದ್ದವ್ವನಹಳ್ಳಿಯ ಜ್ಞಾನೇಶ್ವರ ಫಾರಂನಿಂದ ಗುಜರಾತ್‌ನ ಗಿರ್ , ಪಾಲವ್ವನಹಳ್ಳಿಯ ನಿಶಾನಿ ಜಯ್ಯಣ್ಣ ಫಾರಂ ಹೌಸ್‌ನಿಂದ ಹರಿಯಾಣದ ಸಾಯಿವಲ್‌, ಸುಬ್ರಹ್ಮಣ್ಯ ದೇವಸ್ಥಾನದಿಂದ ಪಶ್ಚಿಮ ಘಟ್ಟದ ಮಲ್ನಾಡ್‌ ಗಿಡ್ಡ , ಬಚ್ಚಬೋರನಹಟ್ಟಿಯಿಂದ ಹಳೇ ಮೈಸೂರು ಪ್ರಾಂತ್ಯದ ಅಮೃತ್‌ ಮಹಲ್‌ ಎತ್ತುಗಳನ್ನು ಕರೆತರಲಾಗಿದೆ’ ಎನ್ನುತ್ತಾರೆ ಗೋಶಾಲೆ ಉಸ್ತುವಾರಿ ಕೆ.ಆರ್. ಜ್ಞಾನೇಶ್ವರ.

ಯೋಗ ಶಿಬಿರ: ಸ್ವದೇಶಿ ಮೇಳದ ಅಂಗವಾಗಿ ಶ್ವಾಸ ಯೋಗ ಗುರು ವಚನಾನಂದ ಸ್ವಾಮೀಜಿ ಗುರುವಾರ ಮುಂಜಾನೆ ಯೋಗ ಶಿಬಿರ ನಡೆಸಿದರು. ಚಿತ್ರದುರ್ಗದ ವಿವಿಧ ಯೋಗ ಸಂಸ್ಥೆಗಳ ತರಬೇತುದಾರರು, ಯೋಗಪಟುಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಸ್ವಾಮೀಜಿ ಮಾತನಾಡಿ ‘ಪ್ರಾಣಿಗಳು ವೈದ್ಯಕೀಯ ಚಿಕಿತ್ಸೆ ಹಾಗೂ ಔಷಧಿಗಳಿಲ್ಲದೆ ತಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಂಡಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅದೇ ರೀತಿ ಶಟ್ಕರ್ಮ ವಿಧಿ ಇದೆ. ಇವುಗಳಲ್ಲಿ ನೇತಿ, ದೌತಿ, ಬಸ್ತಿ, ತ್ರಾಟಕ,ನೌಲಿ, ಕಪಾಲಬಾತಿ ಇವುಗಳನ್ನು ಹಠಯೋಗದ ಭಾಗವಾಗಿದೆ. ನಾವು ಮಾಡುವ ಪ್ರತಿಯೊಂದು ಆಸನವು ಪ್ರಾಣಿಗಳ ಪಕ್ಷಿಗಳ ಹೆಸರಿನಿಂದ ಎರವಲಾಗಿ ಪಡೆದುಕೊಂಡಿವುದಾಗಿದೆ’ ಎಂದರು.

‘ಪ್ರತಿ ವರ್ಷ ಸ್ವದೇಶಿ ಮೇಳವು ವಿವಿಧ ಜಿಲ್ಲೆಗಳಲ್ಲಿ ಒಂದೊಂದು ವರ್ಷ ಏರ್ಪಡಿಸಲಾಗುತ್ತದೆ. ಈ ಬಾರಿಯ ಸ್ವದೇಶಿ ಮೇಳ ಐತಿಹಾಸಿಕ ಚಿನ್ಮೂಲಾದ್ರಿ ಕ್ಷೇತ್ರದಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯ ವಾಗಿದೆ. ಸ್ವದೇಶಿ ಜಾಗೃತಿಯೇ ಈ ಮೇಳದ ಮೂಲ ಉದ್ದೇಶ. ಸ್ವದೇಶಿ ವಸ್ತುಗಳನ್ನು ಬಳಸುವ ಹಾಗೂ ಸ್ವಾವಲಂಬನೆಯನ್ನು ಸಾಧಿಸುವಂತಹ ಅಭಿಯಾನ ಉತ್ತಮವಾಗಿದೆ’ ಎಂದರು.

ಕಾರ್ಯಕ್ರಮದ ಸಂಚಾಲಕ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಎಸ್ ನವೀನ್, ಸಹ ಸಂಘಟಕರಾದ ಜಿ.ಎಚ್‌. ಅನಿತ್‍ಕುಮಾರ್ ಜಿ.ಎಸ್, ಸಂಚಾಲಕರಾದ ಸೌಭಾಗ್ಯ ಬಸವರಾಜನ್ ಇದ್ದರು.

ಯೋಗ ಶಿಬಿರವನ್ನು ಯೋಗಗುರು ವಚನಾನಂದ ಸ್ವಾಮೀಜಿ ಉದ್ಘಾಟಿಸಿದರು. ಕೆ.ಎಸ್‌.ನವೀನ್‌ ಸೌಭಾಗ್ಯ ಬಸವರಾಜ್‌ ಉಪಸ್ಥಿತರಿದ್ದ
ಸ್ವದೇಶಿ ಮೇಳದ ಮಳಿಗೆಗಳಲ್ಲಿ ಸೇರಿರುವ ಜನಸಂದಣಿ

ನಿಸರ್ಗದಲ್ಲಿ ಹುಟ್ಟಿದ ಯೋಗ

‘ಯೋಗ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಒಬ್ಬ ವ್ಯಕ್ತಿಯಿಂದ ಸಂಶೋಧನೆ ಆಗಿರುವಂಥದ್ದಲ್ಲ. ಹಲವು ಋಷಿಮುನಿಗಳು ಯೋಗಿಗಳು ಗಿರಿ ಗುಹೆಗಳಲ್ಲಿ ಹಿಮಾಲಯಗಳ ಪರ್ವತದ ಶ್ರೇಣಿಗಳಲ್ಲಿ ಯೋಗ ಅನುಷ್ಠಾನ ಮಾಡಿದ್ದಾರೆ. ನಿಸರ್ಗದ ಮಧ್ಯದಲ್ಲಿ ಬಹಳ ಸೂಕ್ಷ್ಮವಾಗಿ ಪ್ರಾಣಿ ಪಕ್ಷಿಗಳ ಚಲನವಲನ ಗಮನಿಸಿ ಅವುಗಳ ಜೊತೆ ಅನುಸಂಧಾನ ನಡೆಸಿದ್ದಾರೆ’ ಎಂದು ವಚನಾನಂದ ಸ್ವಾಮೀಜಿ ಇಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.