ADVERTISEMENT

ಆರ್ಥಿಕ ಸ್ವಾವಲಂಬನೆಗಾಗಿ ಸ್ವದೇಶಿ ಆಂದೋಲನ

ನ.12ರಿಂದ ಸ್ವದೇಶಿ ಮೇಳ; ಸ್ವದೇಶಿ ಜಾಗರಣ ಮಂಚ್‌ ಮುಖ್ಯಸ್ಥ ಜಗದೀಶ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 4:32 IST
Last Updated 29 ಅಕ್ಟೋಬರ್ 2025, 4:32 IST
ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನ.12ರಿಂದ ನಡೆಯಲಿರುವ ಸ್ವದೇಶಿ ಮೇಳದ ಕರಪತ್ರ ಬಿಡುಗಡೆ ಮಾಡಲಾಯಿತು
ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನ.12ರಿಂದ ನಡೆಯಲಿರುವ ಸ್ವದೇಶಿ ಮೇಳದ ಕರಪತ್ರ ಬಿಡುಗಡೆ ಮಾಡಲಾಯಿತು   

ಚಿತ್ರದುರ್ಗ: ‘ಜಾಗತೀಕರಣ, ಉದಾರೀಕರಣದ ಪರಿಣಾಮದಿಂದಾಗಿ ಉಂಟಾಗಿರುವ ಸಮಸ್ಯೆಗಳಿಗೆ ಸ್ವದೇಶಿ ಚಳವಳಿಯೇ ಪರಿಹಾರವಾಗಿದೆ. ಆರ್ಥಿಕ ಸ್ವಾವಲಂಬನೆಯಿಂದ ದೇಶಕ್ಕೆ ಉತ್ತಮ ಭವಿಷ್ಯವಿದೆ. ಸ್ವದೇಶಿ ಚಳವಳಿಯ ಭಾಗವಾಗಿ ನಗರದಲ್ಲಿ ನ. 12ರಿಂದ 5 ದಿನಗಳ ಸ್ವದೇಶಿ ಮೇಳ ಆಯೋಜಿಸಲಾಗಿದೆ’ ಎಂದು ಸ್ವದೇಶಿ ಜಾಗರಣ ಮಂಚ್‌ ರಾಜ್ಯ ಮುಖ್ಯಸ್ಥ ಜಗದೀಶ್‌ ಹೇಳಿದರು.

‘ಕೃಷಿ, ವ್ಯಾಪಾರ, ಕೈಗಾರಿಕೆಗಳ ಉಳಿವಿಗಾಗಿ ಸ್ವದೇಶಿ ಆಂದೋಲನ ಸಮಗ್ರವಾಗಿ ನಡೆಯಬೇಕಿದೆ. ವಿಸ್ತಾರವಾದ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬಡ ರೈತರು ಸ್ಪರ್ಧೆ ಮಾಡುವುದು ಬಲು ಕಷ್ಟವಾಗಿದೆ. ಸ್ಪದೇಶಿ ಮಾರುಕಟ್ಟೆಯಲ್ಲಿ ಎಲ್ಲ ವರ್ಗಕ್ಕೂ ಆದ್ಯತೆ ದೊರೆಯಲಿದೆ. ಈ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ನಾವು ರಾಜ್ಯದಾದ್ಯಂತ ಸ್ವದೇಶ ಮೇಳ ಆಯೋಜನೆ ಮಾಡುತ್ತಿದ್ದೇವೆ’ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸ್ವಾಭಿಮಾನದ ಸಂಕೇತವಾಗಿ ಕೋಟೆನಗರಿ ಚಿತ್ರದುರ್ಗದಲ್ಲಿ ಈ ಮೇಳ ನಡೆಯುತ್ತಿದೆ. ಸ್ವದೇಶಿ ಉತ್ಪನ್ನ, ದೇಸೀ ಕಂಪನಿಗಳು, ನಮ್ಮದೇ ಆದ ಸಾವಯವ ಕೃಷಿ, ಆಯುರ್ವೇದ ವೈದ್ಯಕೀಯ ಪದ್ಧತಿಯನ್ನು ಮೇಳದಲ್ಲಿ ಪರಿಚಯ ಮಾಡಲಾಗುವುದು. ಮೇಳದ ಭಾಗವಾಗಿ ವೈವಿಧ್ಯಮಯ ಸಮಾವೇಶಗಳು ನಡೆಯಲಿವೆ’ ಎಂದು ತಿಳಿಸಿದರು.

ADVERTISEMENT

ವಿಧಾನ ಪರಿಷತ್‌ ಸದಸ್ಯ, ಸ್ವದೇಶಿ ಮೇಳದ ಸಂಚಾಲಕ ಕೆ.ಎಸ್‌.ನವೀನ್‌ ಮಾತನಾಡಿ, ‘ಭಾರತ ದೇಶ ರಫ್ತು ರಾಷ್ಟ್ರವಾಗಬೇಕು. ಈ ನಿಟ್ಟಿನಲ್ಲಿ ಸ್ವದೇಶಿ ಚಿಂತನೆ ಅತ್ಯಂತ ಪ್ರಮುಖವಾದ ಪಾತ್ರ ವಹಿಸುತ್ತದೆ. ಈ ಬಾರಿ ಚಿತ್ರದುರ್ಗ ಜಿಲ್ಲೆಯಲ್ಲಿ ಸ್ವದೇಶಿ ಮೇಳ ಆಯೋಜನೆಗೆ ಅವಕಾಶ ಸಿಕ್ಕಿರುವುದು ಅತ್ಯಂತ ಸಂತೋಷ ತಂದಿದೆ. ಮೇಳದಲ್ಲಿ ಪ್ರಮುಖವಾಗಿ 3 ಶಿಬಿರ, 3 ಸಮಾವೇಶಗಳು ನಡೆಯಲಿವೆ’ ಎಂದು ಹೇಳಿದರು.

‘ರೈತರು, ಉದ್ಯಮಿಗಳು, ಮಹಿಳೆಯರು, ಮಕ್ಕಳಿಗೆ ವಿವಿಧ ಚಟುವಟಿಕೆ, ಸ್ಪರ್ಧೆಗಳು ನಡೆಯಲಿವೆ. ಇದು ಯಾವುದೇ ಪಕ್ಷ, ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಸ್ವಾಗತ ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲೆಯ ಶಾಸಕರು, ಸಂಸದರು ಇದ್ದಾರೆ. ಕೃಷಿ, ತೋಟಗಾರಿಕೆ ಸೇರಿ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಜಾಗೃತಿಗಾಗಿ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಹಕಾರವೂ ಇದೆ’ ಎಂದರು.

‘ಒಟ್ಟು 200ಕ್ಕೂ ಹೆಚ್ಚು ಮಳಿಗೆಗಳು ಮೇಳದಲ್ಲಿ ತೆರೆಯಲಿವೆ. ರಾಜ್ಯದ ವಿವಿಧೆಡೆಯಿಂದ ಸ್ವದೇಶಿ ಕಂಪನಿಗಳ ಭಾಗವಹಿಸಲಿವೆ. ಮನೆಮನೆಗೆ ತೆರಳಿ ಕರಪತ್ರ ವಿತರಣೆ ಮಾಡಿ ಮೇಳದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗುತ್ತಿದೆ. ಇಡೀ ಮೇಳ ಪ್ಲಾಸ್ಟಿಕ್‌ ಮುಕ್ತವಾಗಿ ನಡೆಯಲಿದೆ. ಪ್ರತಿದಿನ ಸಂಜೆ ಸ್ಥಳೀಯ ಹಾಗೂ ರಾಜ್ಯ, ರಾಷ್ಟಮಟ್ಟದ ಖ್ಯಾತಿ ಹೊಂದಿದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ’ ಎಂದು ತಿಳಿಸಿದರು.

‘ಸ್ವದೇಶಿ ಮೇಳಕ್ಕೆ ಮುರುಘರಾಜೇಂದ್ರ ಕ್ರೀಡಾಂಗಣವನ್ನು ಸಿದ್ಧಗೊಳಿಸಲಾಗುತ್ತಿದೆ. ಮೇಳದಲ್ಲಿ ಕೇಂದ್ರ ಸಚಿವರು, ರಾಜ್ಯ ಸಚಿವರು, ಸ್ವಾಮೀಜಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ. 2.50 ಲಕ್ಷಕ್ಕೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಎಲ್ಲರಿಗೂ ಮುಕ್ತ ಅವಕಾಶವಿದ್ದು, ಮೇಳದ ಸದುಪಯೋಗ ಮಾಡಿಕೊಳ್ಳಬೇಕು’ ಎಂದರು. ಇದೇ ಸಂದರ್ಭದಲ್ಲಿ ಪ್ರಚಾರ ಪತ್ರ ಬಿಡುಗಡೆ ಮಾಡಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಮೇಳದ ಸಂಘಟಕರಾದ ರವೀಂದ್ರ, ಸಹ ಸಂಚಾಲಕ ಹನುಮಂತೇಗೌಡ, ಡಾ.ಸಿದ್ಧಾರ್ಥ ಗುಡಾರ್ಪಿ, ಕೆ.ಟಿ.ಕುಮಾರಸ್ವಾಮಿ, ಸೌಭಾಗ್ಯ ಬಸವರಾಜನ್‌ ಇದ್ದರು.

ಸಿರಿಧಾನ್ಯಗಳ ಕೇಕ್‌ ಆಕರ್ಷಣೆ

‘ಹೊಸದುರ್ಗ ತಾಲ್ಲೂಕು ಸಿರಿಧಾನ್ಯಗಳ ತವರು ಎಂದು ಪ್ರಸಿದ್ಧಿ ಪಡೆದಿದ್ದು ಸಿರಿಧಾನ್ಯ ಉತ್ಪನ್ನಗಳ ಸ್ವ– ಸಹಾಯ ಸಂಘಗಳಿಗೂ ಸ್ವದೇಶಿ ಮೇಳದಲ್ಲಿ ಅವಕಾಶ ನೀಡಲಾಗಿದೆ. ಹೊಸದುರ್ಗದಲ್ಲಿರುವ ಸಿರಿಧಾನ್ಯ ಹೋಟೆಲ್‌ ಕೂಡ ಮೇಳದಲ್ಲಿ ಮಳಿಗೆ ತೆರೆಯಲಿದೆ’ ಎಂದು ಕೆ.ಎಸ್.ನವೀನ್‌ ತಿಳಿಸಿದರು. ಇದೇ ಸಂದರ್ಭದಲ್ಲಿ ಸಿರಿಧಾನ್ಯ ಹೋಟೆಲ್‌ ನಡೆಸುತ್ತಿರುವ ಮಹಿಳೆಯರು ರಾಗಿಯಿಂದ ತಯಾರಿಸಿದ ಕೇಕ್‌ ಕತ್ತರಿಸಿದರು. ‘ಸಿರಿಧಾನ್ಯದಿಂದ ವಿವಿಧ ರೀತಿಯ ಖಾದ್ಯ ತಯಾರಿಸಬಹುದು. ಸ್ವದೇಶಿ ಮೇಳದಲ್ಲಿ ಎಲ್ಲ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು ಮಹಿಳೆಯರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.