ADVERTISEMENT

ಸಂಕ್ರಾಂತಿ: ಮೊಲಕ್ಕೆ ಕಿವಿಯೋಲೆ ಹಾಕಿ ವಿಶಿಷ್ಟ ಆಚರಣೆ

ಹೊಸದುರ್ಗ ತಾಲ್ಲೂಕಿನ ಕಂಚೀಪುರದಲ್ಲಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 13:59 IST
Last Updated 15 ಜನವರಿ 2020, 13:59 IST
ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮಸ್ಥರು ಬುಧವಾರ ಕಾಡಿನ ಮೊಲ ಹಿಡಿದು ಪುಟ್ಟಿಯಲ್ಲಿ ಇಟ್ಟುಕೊಂಡು ಮೆರವಣಿಗೆಯಲ್ಲಿ ತರುತ್ತಿರುವುದು.
ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮಸ್ಥರು ಬುಧವಾರ ಕಾಡಿನ ಮೊಲ ಹಿಡಿದು ಪುಟ್ಟಿಯಲ್ಲಿ ಇಟ್ಟುಕೊಂಡು ಮೆರವಣಿಗೆಯಲ್ಲಿ ತರುತ್ತಿರುವುದು.   

ಹೊಸದುರ್ಗ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕಂಚೀಪುರ ಗ್ರಾಮಸ್ಥರು ಬುಧವಾರ ಕಾಡಿನ ಮೊಲ ಹಿಡಿದು, ಅದಕ್ಕೆ ಕಿವಿಯೋಲೆ ಹಾಕುವ ಮೂಲಕ ವಿಶಿಷ್ಟವಾಗಿ ಮಕರ ಸಂಕ್ರಾಂತಿ ಆಚರಿಸಿದರು.

ಪ್ರತಿವರ್ಷದಂತೆ ಈ ಬಾರಿಯೂ ಬೆಳಿಗ್ಗೆ 10ಕ್ಕೆ ಇಲ್ಲಿನ ಕಂಚೀವರದರಾಜ ಸ್ವಾಮಿಯ ಸನ್ನಿದಿಯಲ್ಲಿ ಮೊಲ ಹಿಡಿದುಕೊಂಡು ಬರಲು ಈ ಬಾರಿ 16 ಬಲೆ, ಬೇಟೆಗಾರಿಕೆ ಕೋಲು(ಬೆತ್ತ) ಹಾಗೂ ಬಿದಿರಿನ ಪುಟ್ಟಿ (ಬುಟ್ಟಿ)ಗೆ ನಾಮಧಾರಣೆ ಮಾಡಿ ಪೂಜೆ ಸಲ್ಲಿಸಲಾಯಿತು.

ದೇಗುಲದಲ್ಲಿ ನೆರೆದಿದ್ದ ಭಕ್ತರು ಕಾಡಿನಲ್ಲಿ ಬೇಗನೆ ಮೊಲ ಸಿಗಲಿ, ಸಂಕ್ರಾಂತಿ ಸಂಭ್ರಮ ಕಳೆಗಟ್ಟಲೆಂದು ಪ್ರಾರ್ಥಿಸಿದರು. ನಂತರ ಬೇಟೆಗಾರಿಕೆಯಲ್ಲಿ ನುರಿತ ಗ್ರಾಮದ 30 ಮಂದಿ ಮಡಿಬಟ್ಟೆಯುಟ್ಟು ಬೇಟೆಗಾರಿಕೆ ಪರಿಕರಗಳನ್ನು ಹೊತ್ತು ಕಂಚೀವರದರಾಜಸ್ವಾಮಿ ಗೋವಿಂದಾ..ಗೋವಿಂದಾ.. ಎನ್ನುತ್ತಾ ಸಮೀಪದ ಕಾಡಿಗೆ ತೆರಳಿದರು. ಈ ವೇಳೆ ದಾಸಯ್ಯರ ಶಂಕು, ಜಾಗಟೆ, ಕಹಳೆ ಮೊಳಗಿದವು.

ADVERTISEMENT

ಮೊಲ ಹಿಡಿಯುವುದನ್ನು ನೋಡಲು 250ಕ್ಕೂ ಅಧಿಕ ಮಂದಿ ಬೇಟೆಗಾರರ ಜೊತೆಗೆ ಕಾಡಿಗೆ ಹೋಗಿದ್ದರು. ಕಾಡಿನ ಮಟ್ಟಿ ಸಮೀಪ ಮೊಲ ಓಡಾಡಿರುವ ಸುಳಿವು ನೋಡಿ ಬೇಟೆಗಾರರು ಒಂದರ ಪಕ್ಕ ಒಂದರಂತೆ 16 ಬಲೆಗಳನ್ನು ಹೂಡಿದರು. ನಂತರ ಬೆತ್ತ ಹಿಡಿದು ಪೊದೆಯೊಳಗೆ ಮೊಲ ಅವಿತುಕೊಂಡಿರುವುದನ್ನು ಶೋಧಿಸಿದರು. ಈ ಬಾರಿ 3 ಸಲ ಬಲೆ ಹೂಡಿದರೂ ಸಹ ಮೊಲ ಸಿಗಲಿಲ್ಲ. ಇದರಿಂದ ಬೇಸರಗೊಂಡ ಬೇಟೆಗಾರರು ಕಾಡಿನಲ್ಲಿದ್ದ ಕೆರೆಭೂತಪ್ಪ ದೇವರಿಗೆ ಪೂಜೆ ಸಲ್ಲಿಸಿ, ಮೊಲ ಸಿಗಲೆಂದು ಪ್ರಾರ್ಥಿಸಿದರು.

ನಂತರ ಮೊಲವೊಂದು ಓಡಿ ಬಂದು ಬಲೆಗೆ ಬಿದ್ದಿತ್ತು. ಅದನ್ನು ನೋಡಿದ ಬಾಲಕ ಹರ್ಷವರ್ಧನ ಹಿಡಿದ. ತಕ್ಷಣ ಬೇಟೆಗಾರರೆಲ್ಲಾ ಓಡಿ ಬಂದು ಮೊಲಕ್ಕೆ ಸ್ವಲ್ಪವೂ ಪೆಟ್ಟು ಮಾಡದಂತೆ ಮೆರವಣಿಗೆ ಮೂಲಕ ಗ್ರಾಮದ ಕಂಚೀವರದರಾಜಸ್ವಾಮಿ ದೇವಾಲಯಕ್ಕೆ ಮೊಲ ತಂದರು. ಮೊಲ ಸಿಕ್ಕಿದ ಸಂಭ್ರಮಕ್ಕೆ ನೂರಾರು ಜನರು ಶಿಳ್ಯೆ, ಕೇಕೆ ಹಾಕುತ್ತಾ ಕುಣಿದು ಕುಪ್ಪಳಿಸಿದರು.

ಸಂಜೆ ಅಲಂಕೃತ ಕಂಚೀವರದರಾಜಸ್ವಾಮಿಯ ರಾಜಬೀದಿ ಮೆರವಣಿಗೆಯೊಂದಿಗೆ ಮೊಲವನ್ನು ಗ್ರಾಮದ ಊರ ಬಾಗಿಲಿಗೆ ತರಲಾಯಿತು. ಅಲ್ಲಿ ಮೊಲಕ್ಕೆ ಸ್ನಾನ ಮಾಡಿಸಿ ನಾಮಧಾರಣೆ ಮಾಡಲಾಯಿತು. ಅದರ ಕಿವಿಚುಚ್ಚಿ ಕಿವಿಯೋಲೆ ಹಾಕಲಾಯಿತು. ಹೂವುಗಳಿಂದ ಸಿಂಗಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕಂಚೀವರದರಾಜ ಸ್ವಾಮಿಯ ಶೂನ್ಯ ಮಾಸದ ದೋಷ ನಿವಾರಣೆಯಾಗಲಿ, ಗ್ರಾಮದ ಜನ ಹಾಗೂ ಜಾನುವಾರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿ, ಮೊಲವನ್ನು ಕಂಚೀವರದರಾಜ ಸ್ವಾಮಿಗೆ ಮೂರು ಸಲ ನೀವಾಳಿಸಲಾಯಿತು. ನಂತರದಲ್ಲಿ ಮೊಲವನ್ನು ಮರಳಿ ಕಾಡಿಗೆ ಬಿಡಲಾಯಿತು ಎಂದು ಹಿರಿಯ ಪ್ರಧಾನ ಅರ್ಚಕ ಡಿ.ಪರಶುರಾಮಪ್ಪ ತಿಳಿಸಿದರು.

ದುಡ್ಡು ತೂರಿದ ಭಕ್ತರು:ಸಂಕ್ರಾಂತಿ ಹಬ್ಬದ ಮೆರವಣಿಗೆಯಲ್ಲಿ ಸಾಗಿದ ಅಲಂಕೃತ ಕಂಚೀವರರಾಜಸ್ವಾಮಿ ಮೂರ್ತಿಗೆ ನೆರೆದಿದ್ದ ಸಾವಿರಾರು ಭಕ್ತರು ಲಕ್ಷಾಂತರ ಚಿಲ್ಲರೆ (ನಾಣ್ಯವನ್ನು) ದುಡ್ಡನ್ನು ಹೊನ್ನ ಮಳೆಯಂತೆ ತೂರಿ ಹರಕೆ ಸಲ್ಲಿಸಿದರು. ಜನಸಾಮಾನ್ಯರು ದುಡ್ಡನ್ನು ಆರಿಸಿಕೊಂಡರು. ಈ ಭಾಗದಲ್ಲಿ ಕಂಚೀವರದರಾಜಸ್ವಾಮಿಯು ದುಡ್ಡಿನ ದೇವರೆಂದು ಪ್ರಸಿದ್ಧಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.