ಸಿರಿಗೆರೆ: ಫೆ. 4ರಿಂದ 12ರವರೆಗೆ ಒಂಬತ್ತು ದಿನಗಳ ಕಾಲ ಭರಮಸಾಗರದಲ್ಲಿ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ಭಿನ್ನವಾಗಿ ಇರಲಿದೆ ಎಂದು ತರಳಬಾಳು ಪೀಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಹುಣ್ಣಿಮೆ ಮಹೋತ್ಸವ ಆಚರಣೆಗೆ ನಿರ್ಮಾಣಗೊಳ್ಳುತ್ತಿರುವ ಮಹಾಮಂಟಪ ಕೆಲಸವನ್ನು ಶುಕ್ರವಾರ ವೀಕ್ಷಿಸಿದ ಶ್ರೀಗಳು ನಂತರ ನಿರಂಜನಮೂರ್ತಿ ಸಮುದಾಯ ಭವನದಲ್ಲಿ ನಡೆದ ಭಕ್ತರ ಸಭೆಯಲ್ಲಿ ಅವರು ಮಾತನಾಡಿದರು.
ದೇಶ– ವಿದೇಶಗಳಿಂದ ವಿದ್ವಾಂಸರು, ಸಾಧಕರು ಮತ್ತು ರಾಜತಾಂತ್ರಿಕರು ಈ ಬಾರಿಯ ಹುಣ್ಣಿಮೆ ಮಹೋತ್ಸವದಲ್ಲಿ ಭಾಗಿ ಆಗುತ್ತಿರುವುದರಿಂದ ಹುಣ್ಣಿಮೆ ಮಹೋತ್ಸವಕ್ಕೆ ಅಂತರರಾಷ್ಟ್ರೀಯ ಮೆರುಗು ಒದಗಲಿದೆ ಎಂದರು.
‘ಎರಡು ವರ್ಷಗಳ ಹಿಂದೆ ಕೊಟ್ಟೂರು ಪಟ್ಟಣದಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದರ್ಭದಲ್ಲಿ ಘೋಷಣೆ ಮಾಡಿದ್ದಂತೆ ಕಳೆದ ವರ್ಷವೇ ಭರಮಸಾಗರದಲ್ಲಿ ಮಹೋತ್ಸವ ನಡೆಯಬೇಕಿತ್ತು. ಆದರೆ, ಭಕ್ತರ ಉತ್ಸಾಹ ಇಮ್ಮಡಿಗೊಂಡಿರುವ ಈ ವರ್ಷವೇ ಆಚರಣೆಗೆ ಸೂಕ್ತವೆಂದು ಅನ್ನಿಸಿದೆ. ಭರಮಸಾಗರ ಸುತ್ತಲಿನ ಕೆರೆಗಳು ತುಂಬಿ ರೈತರು ಸಂತೃಪ್ತರಾಗಿದ್ದಾರೆ. ಆಚರಣೆಯಲ್ಲಿ ಅವರು ಸಡಗರದಿಂದ ತೊಡಗಿಕೊಂಡಿರುವುದು ಸಂತೋಷ ತಂದಿದೆ’ ಎಂದರು.
‘ತರಳಬಾಳು ಹುಣ್ಣಿಮೆ ಮಹಾಮಂಟಪಕ್ಕೆ ‘ಬಿಚ್ಚುಗತ್ತಿ ಭರಮಣ್ಣನಾಯಕ’, ಮಹಾದ್ವಾರಕ್ಕೆ ‘ಒನಕೆ ಓಬವ್ವ’, ವೇದಿಕೆಗೆ ‘ಚಿನ್ಮೂಲಾದ್ರಿ ರೇವಣಸಿದ್ದೇಶ್ವರ’ ವೇದಿಕೆ ಎಂದು ನಾಮಕರಣ ಮಾಡಲಾಗುವುದು. ಜಿಲ್ಲೆಯ ಇತಿಹಾಸದಲ್ಲಿ ದಾಖಲಾಗಿರುವ ಈ ಪ್ರಾಥಃಸ್ಮರಣೀಯರನ್ನು ನೆನಪು ಮಾಡಿಕೊಳ್ಳುವುದು ತಮ್ಮ ಕರ್ತವ್ಯ’ ಎಂದರು.
ದೇಶದ ಹಿತಕ್ಕಾಗಿ ಹೋರಾಡುತ್ತ ವೀರಮರಣ ಹೊಂದಿರುವ ಹತ್ತು ಸೈನಿಕರ ಕುಟುಂಬಕ್ಕೆ ₹ 1 ಲಕ್ಷ ನೆರವು ನೀಡಲಾಗುವುದು ಎಂದು ಶ್ರೀಗಳು ಪ್ರಕಟಿಸಿದರು.
ಎಸ್.ಎಂ.ಎಲ್.ತಿಪ್ಪೇಸ್ವಾಮಿ, ಎಮ್ಮೆಹಟ್ಟಿ ಕೃಷ್ಣಮೂರ್ತಿ, ಚೌಲಿಹಳ್ಳಿ ಶಶಿ ಪಾಟೀಲ್, ಜಿ.ಬಿ.ತೀರ್ಥಪ್ಪ, ಶೈಲೇಶ್ ಕುಮಾರ್, ನಿರಂಜನಮೂರ್ತಿ, ಹಂಪನೂರು ಜಗದೀಶ್, ಕೋಡಿರಂಗವ್ವನಹಳ್ಳಿ ಹನುಮಂತಪ್ಪ, ಓಬವ್ವನಾಗತಿಹಳ್ಳಿ ಮಂಜುನಾಥ್, ದೊಡ್ಡಾಲಗಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್, ಸಿ.ಆರ್.ನಾಗರಾಜ್, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ಭಾಗವಹಿಸಿದ್ದರು.
ಚಕಿತಗೊಳಿಸಿದ ಭಕ್ತರ ಕೊಡುಗೆ
ಹುಣ್ಣಿಮೆ ಮಹೋತ್ಸವಕ್ಕೆ ಸುತ್ತಲಿನ ಗ್ರಾಮಗಳ ಭಕ್ತರು ತಮ್ಮ ಗ್ರಾಮಗಳಿಂದ ಸಂಗ್ರಹಿಸಿಕೊಂಡು ಬಂದಿದ್ದ ಕಾಣಿಕೆಯನ್ನು ಶ್ರೀಗಳಿಗೆ ಒಪ್ಪಿಸಿದರು. ಕಾರ್ಯಕರ್ತರು ಪ್ರಕಟಿಸುತ್ತಿದ್ದಂತೆ ಕಾಣಿಕೆಯನ್ನು ಶ್ರೀಗಳಿಗೆ ನೀಡಲು ಭಕ್ತರು ದುಂಬಾಲು ಬಿದ್ದರು. ಈ ಸಂದರ್ಭದಲ್ಲಿ ಚೌಲಿಹಳ್ಳಿ ಶಶಿ ಪಾಟೀಲ್ ತಮ್ಮ ಕುಟುಂಬದ ವತಿಯಿಂದ ₹ 10 ಲಕ್ಷ ಹಾಗೂ ಓಬವ್ವನಾಗತಿಹಳ್ಳಿ ಮಂಜುನಾಥ್ ₹ 4 ಲಕ್ಷ ನೀಡಿದರು. ವಿವಿಧ ಗ್ರಾಮಗಳ ಕೊಡುಗೆ ನೋಡಿ ತರಳಬಾಳು ಶ್ರೀ ಚಕಿತಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.