ADVERTISEMENT

ಶಿವಕುಮಾರ ಶ್ರೀ ಶ್ರದ್ಧಾಂಜಲಿಗೆ ಸಜ್ಜುಗೊಂಡ ಸಿರಿಗೆರೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2023, 7:10 IST
Last Updated 20 ಸೆಪ್ಟೆಂಬರ್ 2023, 7:10 IST
ಕಾರ್ಯಕ್ರಮಕ್ಕೆ ಸಜ್ಜಾಗಿರುವ ಸಭಾ ಮಂಟಪ
ಕಾರ್ಯಕ್ರಮಕ್ಕೆ ಸಜ್ಜಾಗಿರುವ ಸಭಾ ಮಂಟಪ   

ಸಿರಿಗೆರೆ: ತರಳಬಾಳು ಪೀಠದ ಹಿರಿಯ ಗುರುಗಳಾದ ಶಿವಕುಮಾರ ಶಿವಾಚಾರ್ಯು ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸಿರಿಗೆರೆ ಸಜ್ಜಾಗಿದೆ. ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಬುಧವಾರ ಸಂಜೆ ಕಾರ್ಯಕ್ರಮ ಆರಂಭವಾಗಲಿದ್ದು, ಸಭಾ ಕಾರ್ಯಕ್ರಮಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. 

ಗುರುಶಾಂತ ದಾಸೋಹ ಮಂಟಪದ ಮುಖ್ಯದ್ವಾರವನ್ನು ಸೇರಿಸಿಕೊಂಡು ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಹಾಗೂ ಸಭಾ ಕಾರ್ಯಕ್ರಮಕ್ಕಾಗಿ ವಿಶಾಲ ವೇದಿಕೆ ನಿರ್ಮಿಸಲಾಗಿದೆ. ವೇದಿಕೆಯ ಎರಡೂ ಬದಿಯಲ್ಲಿ ಗ್ರೀನ್‌ ರೂಮ್‌ಗಳ ಸೌಲಭ್ಯ ಕಲ್ಪಿಸಲಾಗಿದೆ. ಪ್ರೇಕ್ಷಕರು ಕುಳಿತುಕೊಳ್ಳಲು ವಿಶಾಲ ಮಹಾಮಂಟಪ ನಿರ್ಮಾಣ ಮಾಡಲಾಗಿದೆ. 5,000 ಜನರು ಕುಳಿತುಕೊಳ್ಳಲು ಹಾಗೂ ಮಂಟಪದ ಎಡ ಬಲ ತುದಿಯಲ್ಲಿ 2,000 ಕುರ್ಚಿಗಳನ್ನು ಅಳವಡಿಸಲಾಗಿದೆ. ಸಭಾ ಕಾರ್ಯಕ್ರಮವನ್ನು ವೀಕ್ಷಿಸಲು 8 ಕಡೆ ಬೃಹತ್‌ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ. 

ಐಕ್ಯಮಂಟಪಕ್ಕೆ ದೀಪಾಲಂಕಾರ

ಸಭಾಮಂಟಪದಿಂದ ಸ್ವಲ್ಪವೇ ಅಂತರದಲ್ಲಿ ಭಕ್ತಾದಿಗಳ ದಾಸೋಹಕ್ಕೆ ಪ್ರತ್ಯೇಕ ದಾಸೋಹ ಭವನವನ್ನು ನಿರ್ಮಾಣ ಮಾಡಲಾಗಿದೆ. ದಾಸೋಹ ಮಂಟಪದಲ್ಲಿ ಒಂದು ಬಾರಿಗೆ 3,000 ಜನರು ಕುಳಿತು ಊಟ ಮಾಡಬಹುದಾಗಿದೆ. ಇದಲ್ಲದೆ ಗುರುಶಾಂತ ದಾಸೋಹ ಭವನದಲ್ಲಿ ಸುಮಾರು 2,000 ಜನರು ಒಟ್ಟಿಗೆ ಬಫೆ ಪದ್ಧತಿಯಲ್ಲಿ ಪ್ರಸಾದ ಸ್ವೀಕರಿಸಬಹುದಾಗಿದೆ.

ADVERTISEMENT

ಸಿರಿಗೆರೆ ಮುಖ್ಯ ಬೀದಿಗಳು, ಮಠಕ್ಕೆ ಸಂಬಂಧಿಸಿದ ಶಾಲಾ ಕಾಲೇಜು, ಕಚೇರಿ, ಕಟ್ಟಡಗಳಿಗೂ ವಿದ್ಯುತ್‌ ಅಲಂಕಾರ ಮಾಡಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳು ಕೆಲಸ ಮಾಡುತ್ತಿವೆ.

ಐಕ್ಯಮಂಟಪಕ್ಕೆ ದೀಪಾಲಂಕಾರ: ಮಠದ ಆವರಣದಲ್ಲಿ ಇರುವ ಐಕ್ಯಮಂಟಪವು ಶ್ರದ್ಧಾಂಜಲಿ ಸಮಾರಂಭದ ಪ್ರಮುಖ ಆಕರ್ಷಣೆ. ವಾರದುದ್ದಕ್ಕೂ ಹಲವು ಕಡೆಗಳಿಂದ ಬರುವ ಭಕ್ತರು ಇಲ್ಲಿರುವ ಶಿವಕುಮಾರ ಶ್ರೀಗಳ ಪುತ್ಥಳಿಗೆ ಗೌರವ ಸಲ್ಲಿಸುತ್ತಾರೆ. ಆಗಮಿಸುವ ಭಕ್ತರ ಕಣ್ಮನ ಸೆಳೆಯುವಂತೆ ಇದೀಗ ಐಕ್ಯಮಂಟಪವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. 

ಕಾರ್ಯಕ್ರಮಕ್ಕೆ ಸಜ್ಜಾಗಿರುವ ವೇದಿಕೆ

ಬರದ ಮಧ್ಯೆಯೂ ಹರಿದು ಬಂದ ಭಕ್ತಿ: ಮಧ್ಯ ಕರ್ನಾಟಕದ ತುಂಬೆಲ್ಲಾ ಬರದ ಛಾಯೆ ಎದ್ದು ಕಾಣುತ್ತಿದೆ. ಆದರೆ, ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ನಿಮಿತ್ತದ ದಾಸೋಹಕ್ಕೆ ಭಕ್ತಾದಿಗಳು ಕೊಡುಗೈ ತೋರಿದ್ದಾರೆ. ರಾಜ್ಯದ ಹಲವು ಕಡೆಗಳಿಂದ ನಿರೀಕ್ಷೆ ಮೀರಿ ದಾಸೋಹ ಸಾಮಗ್ರಿಗಳು ಮಠಕ್ಕೆ ಬಂದಿದೆ. ಈಗಾಗಲೇ 500 ಕ್ವಿಂಟಲ್ ಅಕ್ಕಿ, ನೂರಾರು ಟಿನ್‌ ಅಡುಗೆ ಎಣ್ಣೆ, ನೂರಾರು ಕ್ವಿಂಟಲ್ ಬೆಲ್ಲ, ತೊಗರಿಬೇಳೆ, ಹೆಸರು ಕಾಳು, ಕಡ್ಲೇಕಾಳು, ಗೋಧಿ ನುಚ್ಚು, ರವೆ ಮುಂತಾದ ಸಾಮಗ್ರಿಗಳು ಬಂದಿವೆ. ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಶಂಕರ ಬಿದರಿ ಅವರ 40 ಕ್ವಿಂಟಲ್ ಬೆಲ್ಲ ನೀಡಿದ್ದಾರೆ. ಓಬವ್ವನಾಗ್ತಿಹಳ್ಳಿ ಮಂಜುನಾಥ್‌ 10 ಸಾವಿರ ಲಾಡು ಉಂಡೆಗಳನ್ನು ಸಿದ್ಧಗೊಳಿಸಿ ತಂದಿದ್ದಾರೆ. ಚನ್ನಗಿರಿಯ ತುಮ್ಕೋಸ್ ಸಂಸ್ಥೆಯಿಂದ 1 ಲಕ್ಷ ಲಾಡು ಉಂಡೆಗಳು ಬರಲಿವೆ.

ಭಕ್ತಾದಿಗಳು ತರಕಾರಿ, ಆಹಾರ ಸಾಮಗ್ರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವ ವಾಗ್ದಾನ ಮಾಡಿದ್ದಾರೆ. ಇನ್ನೂ ಒಂದೆರದು ದಿನಗಳಲ್ಲಿ ದಾಸೋಹಕ್ಕೆ ಬೇಕಾದ ಸಾಮಗ್ರಿಗಳು ಮಠಕ್ಕೆ ತಲುಪಲಿವೆ.

ಸ್ವಚ್ಛತೆಗೆ ಆದ್ಯತೆ: ಸಿರಿಗೆರೆಯ ಶಾಲೆ– ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆ 4,000ಕ್ಕೂ ಮಿಗಿಲು. ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಲಾಗಿದೆ. ಮಠದಿಂದ ಸಭಾಮಂಟಪದವರೆಗಿನ ಸಾರ್ವಜನಿಕ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ತಾಲ್ಲೂಕು ಆರೋಗ್ಯಾಧಿಕಾರಿ ಬಿ.ವಿ. ಗಿರೀಶ್‌, ಆರೋಗ್ಯ ಶಿಕ್ಷಣಾಧಿಕಾರಿ ಎನ್‌.ಎಸ್‌. ಮಂಜುನಾಥ್‌, ಸಮುದಾಯ ಆರೋಗ್ಯ ಕೇಂದ್ರದ ತಿಮ್ಮೇಗೌಡ ಅವರು ಸಭೆ ನಡೆಸಿ, ಶ್ರದ್ಧಾಂಜಲಿಗೆ ಆಗಮಿಸುವ ಜನರ ಆರೋಗ್ಯದ ಕಡೆ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ.

ಫ್ಲೆಕ್ಸ್‌ ಬ್ಯಾನರ್ ಹಾವಳಿ ಇಲ್ಲ

ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸಿರಿಗೆರೆಯಲ್ಲಿ ಫ್ಲೆಕ್ಸ್‌ ಅಥವಾ ಬ್ಯಾನರ್‌ ಅಳವಡಿಸುವುದಿಲ್ಲ. ಪರಿಸರ ಮಾಲಿನ್ಯ ನಿಯಂತ್ರಣಕ್ಕೆ  ಸಾಮಾಜಿಕ ಜವಾಬ್ದಾರಿ ತೋರಬೇಕು ಎಂದು ಸ್ವಾಮೀಜಿ ಸೂಚಿಸಿದ್ದರು. ಹೀಗಾಗಿ ಸಿರಿಗೆರೆಯಲ್ಲಿ ಭಕ್ತರಾಗಲಿ ಉದ್ಯಮಿಗಳಾಗಲಿ ಯಾವುದೇ ಫ್ಲೆಕ್ಸ್‌ ಮತ್ತು ಬ್ಯಾನರ್‌ ಹಾಕುತ್ತಿಲ್ಲ. ಈ ಬಾರಿಯೂ ಅದೇ ಸಂಪ್ರದಾಯ ಮುಂದುವರೆದಿದಿದೆ. 

ದಾಸೋಹಕ್ಕೆ ಹರಿದು ಬಂದಿರುವ ದಾಸೋಹ ಸಾಮಗ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.